ಬೆಳ್ತಂಗಡಿ: ಮಹಿಳೆಯೊಬ್ಬರು ಸರಕಾರಿ ಬಸ್ ಗೆ ಹತ್ತುವಾಗ ಕರಿಮಣಿ ಸರ ಕಳ್ಳತನ ಮಾಡಿದ ಪ್ರಕರಣವನ್ನು ಭೇದಿಸಿದ ಬೆಳ್ತಂಗಡಿ ಪೊಲೀಸರು ಇಬ್ಬರು ತಮಿಳುನಾಡು ರಾಜ್ಯದ ಕಳ್ಳಿಯರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಸರಕಾರಿ ಉದ್ಯೋಗಿ ಮಹಿಳೆ ಬೆಳ್ತಂಗಡಿಯಲ್ಲಿ ಸರಕಾರಿ ಬಸ್ ಗೆ ಡಿ.12 ರಂದು ಹತ್ತುವ ವೇಳೆ 24 ಗ್ರಾಂ ಚಿನ್ನದ ಕರಿಮಣಿ ಸರವನ್ನು ಕಳ್ಳತನ ಮಾಡಲಾಗಿತ್ತು. ಈ ಬಗ್ಗೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಅದರಂತೆ ಬೆಳ್ತಂಗಡಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಬೆಳ್ತಂಗಡಿ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ಮತ್ತು ತಂಡ ತಮಿಳುನಾಡು ರಾಜ್ಯದ ತಿರುಪುರ್ ಜಿಲ್ಲೆಯ ಮೋಹಿನಿ ಯಾನೆ ಮಾರಿಮುತ್ತು (35) ಮತ್ತು ದಿವ್ಯಾ ಯಾನೆ ಕಾಮಾಚಿ (30) ಎಂಬಿಬ್ಬರನ್ನು ಧರ್ಮಸ್ಥಳ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿದಾಗ ಕಳ್ಳತನ ಮಾಡಿದ್ದ ಕರಿಮಣಿ ಸರವನ್ನು ಆರೋಪಿಗಳಿಂದ ವಶ ಪಡಿಸಿಕೊಳ್ಳಲಾಗಿದೆ. ಆರೋಪಿಗಳ ಮೇಲೆ ಈ ಹಿಂದೆ ಬೆಳ್ತಂಗಡಿ ಸೇರಿದಂತೆ ಹಲವು ಕಡೆ ಕಳ್ಳತನ ಪ್ರಕರಣ ದಾಖಲಾಗಿದ್ದು, ವಿಚಾರಣೆ ವೇಳೆ ಮುಲ್ಕಿ ಮತ್ತು ಬೆಳ್ತಂಗಡಿಯಲ್ಲಿ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾರೆ.
ಇಬ್ಬರು ಆರೋಪಿಗಳನ್ನು ಬೆಳ್ತಂಗಡಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.