ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಬಿಜೆಪಿಯಲ್ಲಿ ಅವರ ಪಾತ್ರದ ಬಗ್ಗೆ ಚರ್ಚೆ
ಹೊಸದಿಲ್ಲಿ : ರಾಜ್ಯಸಭಾ ಸದಸ್ಯ ರಾಘವ್ ಚಡ್ಡಾ ಸೇರಿ ಆಪ್‌ನ ಏಳು ರಾಜ್ಯಸಭಾ ಸದಸ್ಯರು ಬಿಜೆಪಿ ಸೇರ್ಪಡೆಯಾಗಿರುವುದು ಆಮ್ ಆದ್ಮಿ ಪಾರ್ಟಿಗೆ (ಆಪ್) ಆಗಿರುವ ಭಾರಿ ಹಿನ್ನಡೆ ಎಂದು ಭಾವಿಸಲಾಗಿದೆ. ರಾಜ್ಯಸಭೆಯಲ್ಲಿ ಆಮ್ ಆದ್ಮಿ ಪಾರ್ಟಿಯ ನಾಯಕರಾಗಿದ್ದ ರಾಘವ್ ಚಡ್ಡಾ ಬಿಜೆಪಿ ಸೇರುವ ಸುಳಿವು ಮೊದಲೇ ಇತ್ತು. ಆದರೆ ಅವರು ತನ್ನೊಂದಿಗೆ ಇನ್ನೂ ಆರು ಮಂದಿಯನ್ನು ಕರೆದುಕೊಂಡು ಹೋಗುತ್ತಾರೆ ಎಂದು ಆಪ್ ಪರಮೋಚ್ಚ ನಾಯಕ ಅರವಿಂದ ಕೇಂಜ್ರಿವಾಲ್ ಸಹಿತ ಯಾರೂ ನಿರೀಕ್ಷಿಸಿರಲಿಲ್ಲ.
ಶುಕ್ರವಾರ ಆಪ್‌ನ ಏಳು ನಾಯಕರು ಬಿಜೆಪಿ ಸೇರ್ಪಡೆಯಾಗಿದ್ದು, ರಾಷ್ಟ್ರ ರಾಜಕಾರಣದಲ್ಲಿ ಇದೊಂದು ಮಹತ್ವದ ಬೆಳವಣಿಗೆಯಾಗಿದೆ. ಸಂಸತ್ತಿನಲ್ಲಿ ಬಲವಾಗಿ ವಾದ ಮಂಡಿಸುತ್ತಿದ್ದ ರಾಘವ್ ಚಡ್ಡಾ ಅವರನ್ನು ಆಪ್ ಹಠಾತ್ ಎಂದು ಪಕ್ಷದ ನಾಯಕನ ಸ್ಥಾನದಿಂದ ಕೆಳಗಿಳಿಸಿದಾಗಲೇ ಆಪ್ ಒಳಗೆ ಎಲ್ಲವೂ ಸರಿಯಿಲ್ಲ ಎನ್ನಲಾಗಿತ್ತು. ಅದು ಈಗ ನಿಜವಾಗಿದೆ.
ಇಷ್ಟಕ್ಕೂ ರಾಘಲ್ ಚಡ್ಡಾ ಅವರನ್ನು ಹುದ್ದೆಯಿಂದ ಇಳಿಸುವಾಗ ಆಪ್ ನೀಡಿದ ಕಾರಣ ಬಹಳ ದುರ್ಬಲವಾಗಿತ್ತು. ಅವರು ಬಿಜೆಪಿಯನ್ನು ಸಮರ್ಥವಾಗಿ ಎದುರಿಸುತ್ತಿಲ್ಲ ಮತ್ತು ಪ್ರಮುಖ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ. ಪಕ್ಷ ವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ ಎಂದು ಆಪ್ ಹೇಳಿಕೊಂಡಿತ್ತು. ಆದರೆ ಇದನ್ನು ಸಮರ್ಥಿಸುವ ಯಾವ ಪುರಾವೆಯೂ ಆಪ್ ಹೈಕಮಾಂಡ್ ಬಳಿ ಇರಲಿಲ್ಲ.
ಕಳೆದ ಕೆಲ ಸಮಯದಿಂದ ರಾಘವ್ ಚಡ್ಡಾ ಅವರ ಸಂಸತ್ತಿನ ವಾದ ಮಂಡನೆ ಇಡೀ ದೇಶದ ಗಮನ ಸೆಳೆದಿತ್ತು. ಜ್ವಲಂತ ಸಮಸ್ಯೆಗಳ ಬಗ್ಗೆ ಅವರು ಮಾತನಾಡುತ್ತಿದ್ದರು. ಅದರಲ್ಲೂ ಜನರಲ್ ಝಡ್ ಎಂದು ಕರೆಯಲಾಗುವ ಯುವ ಸಮುದಾಯದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುತ್ತಿದ್ದರು. ಇದರಿಂದಾಗಿ ಅವರ ಜನಪ್ರಿಯತೆ ಹೆಚ್ಚಿತ್ತು. ಜನರು ಅರವಿಂದ ಕೇಂಜ್ರಿವಾಲ್‌ಗಿಂತ ಹೆಚ್ಚು ರಾಘವ್ ಚಡ್ಡಾ ಅವರ ಬಗ್ಗೆಯೇ ಮಾತನಾಡಲಾರಂಭಿಸಿದ್ದರು. ಈ ಕಾರಣಕ್ಕೆ ಆಪ್ ಹೈಕಮಾಂಡ್ ಅವರನ್ನು ಕೆಳಗಿಳಿಸಿದೆ ಎಂಬ ಭಾವನೆ ಜನರಲ್ಲಿದೆ.
ದೆಹಲಿ ಮತ್ತು ಪಂಜಾಬ್ ರಾಜಕಾರಣದಲ್ಲಿ ಏಳು ಸಂಸದರ ಬಿಜೆಪಿ ಸೇರ್ಪಡೆ ಆಮ್ ಆದ್ಮಿ ಪಾರ್ಟಿಯಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ. ಹತ್ತರಲ್ಲಿ ಏಳು ಸಂಸದರು ಪಕ್ಷ ತೊರೆದಿರುವ ಹಿನ್ನಲೆಯಲ್ಲಿ ಪಕ್ಷಾಂತರ ಕಾಯಿದೆ ಜಾರಿಗೆ ಬರದ ಹಾಗೇ ನೋಡಿಕೊಂಡು ರಾಘವ್ ಚಡ್ಡಾ ಎಂಡ್ ಟೀಂ ಜಾಣ ನಡೆಯನ್ನು ಇಟ್ಟಿದೆ.
ಭ್ರಷ್ಟಾಚಾರದ ವಿರುದ್ಧ ಹೋರಾಡಲೆಂದೇ IRS ಅಧಿಕಾರಿಯಾಗಿದ್ದ ಅರವಿಂದ್ ಕೇಜ್ರಿವಾಲ್ ರಾಜಕೀಯಕ್ಕೆ ಧುಮುಕಿ ಆಮ್ ಆದ್ಮಿ ಪಾರ್ಟಿಯನ್ನು ಕಟ್ಟಿದ್ದರು. ಆದರೆ ಅವರೇ ಆರೋಪಗಳನ್ನು ಎದುರಿಸಿ ಜೈಲು ಸೇರುವಂತಾಯಿತು. ಜೊತೆಗೆ ಪಾರ್ಟಿಯ ಇತರ ಪ್ರಮುಖ ನಾಯಕರಾದ ಸತ್ಯೇಂದ್ರ ಜೈನ್, ಮನೀಶ್ ಸಿಸೋಡಿಯಾ ಮುಂತಾದವರೂ ಬಂಧನಕ್ಕೆ ಒಳಗಾದರು. ಇದು ಪಾರ್ಟಿಯ ಎರಡನೇ ಹಂತದ ನಾಯಕತ್ವದಲ್ಲಿ ಭಾರಿ ಗೊಂದಲಕ್ಕೆ ಕಾರಣವಾಯಿತು. ಇದರಿಂದ ಆಪ್ ಇಮೇಜ್‌ಗೆ ದೊಡ್ಡ ಹೊಡೆತ ಬಿದ್ದಿದೆ.
ಎಲ್ಲರಿಗಿಂತ ಭಿನ್ನ ಎಂದು ಹೇಳಿಕೊಂಡ ಆಮ್ ಆದ್ಮಿ ಪಾರ್ಟಿಯೂ ಕೊನೆಗೆ ಭ್ರಷ್ಟಾಚಾರ ಮತ್ತು ಆಡಳಿತ ವೈಖರಿಯಲ್ಲಿ ಎಲ್ಲರಂತೆಯೇ ಎಂದು ಆದದ್ದು ಈ ಪಕ್ಷದ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದ ಜನರ ಭ್ರಮೆ ನಿರಸನವಾಗಿದೆ. ಈ ಕಾರಣಕ್ಕೆ ರಾಘವ್ ಚಡ್ಡಾ ಆಪ್ ತೊರೆದಿದ್ದಾರೆ ಎನ್ನಲಾಗುತ್ತಿ.
ದೆಹಲಿ ಮತ್ತು ಪಂಜಾಬ್‌ನಲ್ಲಿ ಬಿಜೆಪಿಗೆ ಪ್ರಬಲ ವಿರೋಧ ವ್ಯಕ್ತವಾಗುತ್ತಿರುವುದು ಆಮ್ ಆದ್ಮಿ ಪಾರ್ಟಿಯಿಂದ. ಈಗ ಆಪ್ ರಾಜಕೀಯ ಒಳಗುಟ್ಟನ್ನು ತಿಳಿದಿರುವ ನಾಯಕರು ಬಿಜೆಪಿ ಸೇರಿರುವುದರಿಂದ ಆಪ್ ವಿರುದ್ಧ ಕಾರ್ಯತಂತ್ರ ರೂಪಿಸಲು ಬಿಜೆಪಿಗೆ ಅನುಕೂಲವಾಗಲಿದೆ. ಬಿಜೆಪಿಗೆ ಆನೆಬಲ ನೀಡಿದ ಈ ವಿದ್ಯಮಾನವನ್ನು ಮುಂದಿಟ್ಟುಕೊಂಡು, ಆಮ್ ಆದ್ಮಿ ಪಾರ್ಟಿ ಮುಳುಗುತ್ತಿರುವ ಹಡಗು ಎನ್ನುವ ಸಂದೇಶವನ್ನು ರವಾನಿಸಲು ಬಿಜೆಪಿಗೆ ಅನುಕೂಲವಾಗಲಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಆದರೆ ಬಿಜೆಪಿ ಯಾವ ರೀತಿ ರಾಘವ್ ಚಡ್ಡಾ ಅವರನ್ನು ಬಳಸಿಕೊಳ್ಳುತ್ತದೆ ಎಂಬುದರ ಮೇಲೆ ಇದು ಅವಲಂಬಿಸಿದೆ. ರಾಘವ್ ಚಡ್ಡಾ ಬಿಜೆಪಿಗೆ ಆಸ್ತಿಯಾಗುತ್ತಾರಾ ಅಥವಾ ಬಿಜೆಪಿಯ ಅನೇಕಾನೇಕ ನಾಯಕರಲ್ಲಿ ಅವರೂ ಒಬ್ಬರಾಗುತ್ತಾರಾ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕು.

























