ಅಲ್ಕೋಹಾಲ್ ಪ್ರಮಾಣದ ಆಧಾರದಲ್ಲಿ ಬೆಲೆ ನಿರ್ಧರಿಸಲು ಅಧಿಸೂಚನೆ
ಬೆಂಗಳೂರು: ಸರ್ಕಾರ ಐದನೇ ಬಾರಿಗೆ ಅಬಕಾರಿ ಸುಂಕವನ್ನು ಪರಿಷ್ಕರಿಸಲು ಸರ್ಕಾರ ಸಜ್ಜಾಗಿದ್ದು, ಮೇ 1ರಿಂದ ಹೊಸ ದರಗಳು ಜಾರಿಗೆ ಬರುವ ಸಾಧ್ಯತೆಯಿದೆ. ಇದು ರಾಜ್ಯದ ಮಧ್ಯಮ ಮತ್ತು ಕೆಳವರ್ಗದ ಮದ್ಯಪ್ರಿಯರ ಜೇಬಿಗೆ ಕತ್ತರಿ ಹಾಕಲಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಈಗಾಗಲೇ ಮೂರ್ನಾಲ್ಕು ಬಾರಿ ಮದ್ಯದ ದರವನ್ನು ಏರಿಕೆ ಮಾಡಲಾಗಿದೆ.
ಸರ್ಕಾರವು ಹೊರಡಿಸಿರುವ ಕರಡು ಅಧಿಸೂಚನೆಯಂತೆ, ಇನ್ನು ಮುಂದೆ ಮದ್ಯದ ಬಾಟಲಿಯಲ್ಲಿರುವ ಆಲ್ಕೋಹಾಲ್ ಪ್ರಮಾಣದ ಆಧಾರದ ಮೇಲೆ ತೆರಿಗೆ ವಿಧಿಸಲಾಗುತ್ತದೆ. ಅಂದರೆ, ಮದ್ಯದಲ್ಲಿ ಆಲ್ಕೋಹಾಲ್ ಅಂಶ ಹೆಚ್ಚಿದ್ದಷ್ಟೂ ತೆರಿಗೆ ಹೆಚ್ಚಾಗಲಿದೆ. ಈ ಹೊಸ ನೀತಿಯಿಂದಾಗಿ ಕಡಿಮೆ ಆಲ್ಕೋಹಾಲ್ ಹೊಂದಿರುವ ಪ್ರೀಮಿಯಂ ಮದ್ಯದ ಬೆಲೆ ತುಸು ಇಳಿಕೆಯಾಗುವ ಸಾಧ್ಯತೆಯಿದ್ದರೂ, ಸಾಮಾನ್ಯ ಜನರು ಬಳಸುವ ಮದ್ಯದ ಬೆಲೆ ಶೇ.20ರಷ್ಟು ಏರಿಕೆಯಾಗಲಿದೆ.
ರಾಜ್ಯದ ಒಟ್ಟು ಅಬಕಾರಿ ಆದಾಯದಲ್ಲಿ ಶೇ.80ರಷ್ಟು ಪಾಲು ಹೊಂದಿರುವ ಮೊದಲ ನಾಲ್ಕು ಸ್ಲ್ಯಾಬ್‌ಗಳ ಮದ್ಯದ ಬೆಲೆ ಗಣನೀಯವಾಗಿ ಹೆಚ್ಚಾಗಲಿದೆ. ವಿಸ್ಕಿ, ರಮ್, ಬ್ರಾಂಡಿ ಮತ್ತು ಜಿನ್ ಬೆಲೆಯಲ್ಲಿ ಒಂದು ಕ್ವಾರ್ಟರ್‌ಗೆ 15ರಿಂದ 25 ರೂಪಾಯಿಗಳಷ್ಟು ಏರಿಕೆಯಾಗುವ ಅಂದಾಜಿದೆ.
ಒಂದು ಫುಲ್ ಬಾಟಲ್ ಮದ್ಯದ ಮೇಲೆ ಎಂಆರ್‌ಪಿ ದರದಲ್ಲಿ ಸುಮಾರು 50 ರಿಂದ 100 ರೂಪಾಯಿಗಳಷ್ಟು ಹೆಚ್ಚಳವಾಗಲಿದ್ದು, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ ಸರ್ವಿಸ್ ಚಾರ್ಜ್ ಸೇರಿ ಈ ಹೊರೆ ಮತ್ತಷ್ಟು ಹೆಚ್ಚಾಗಲಿದೆ.
ಮೂರು ವರ್ಷಗಳ ಅವಧಿಯಲ್ಲಿ ಐದನೇ ಬಾರಿಗೆ ದರ ಏರಿಕೆ ಮಾಡುತ್ತಿರುವುದಕ್ಕೆ ಮದ್ಯಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಪದೇಪದೆ ಕುಡುಕರನ್ನೇ ಟಾರ್ಗೆಟ್ ಮಾಡುತ್ತಿದೆ ಎಂದು ಮದ್ಯದ ವ್ಯಾಪಾರಿಗಳು ಹಾಗೂ ಗ್ರಾಹಕರು ಕಿಡಿಕಾರಿದ್ದಾರೆ.

























