ನಮ್ಮ ಪುತ್ತೂರು

“ಹತ್ತೂರು ಬಿಟ್ಟರೂ, ಪುತ್ತೂರು ಬಿಡೆ”. ಪುತ್ತೂರಿನ ಬಗ್ಗೆ ಅರಸನೊಬ್ಬನ ಮನದಾಳದ ಮಾತಿದು. ಈ ಸಾಲು ಪುತ್ತೂರಿನ ಪ್ರಾಮುಖ್ಯತೆಯನ್ನು ಸೂಚಿಸುತ್ತದೆ.
ಇದು ಭಾವನಾತ್ಮಕ ಸಾಲು ನಿಜ. ಜೊತೆಗೆ, ಸಾಕಷ್ಟು ಗಟ್ಟಿತನ ಹೊಂದಿರುವ ಪ್ರದೇಶವೂ ಹೌದು ಎನ್ನುವುದು ಮೇಲಿನ ಮಾತಿನಿಂದ ವೇದ್ಯವಾಗುತ್ತದೆ. ವಾಣಿಜ್ಯಾತ್ಮಕವಾಗಿ, ರಾಜಕೀಯವಾಗಿ, ಧಾರ್ಮಿಕವಾಗಿ, ಸಾಮಾಜಿಕವಾಗಿ ಕರಾವಳಿಯಷ್ಟೇ ಅಲ್ಲ, ರಾಜ್ಯದಲ್ಲೇ ಗುರುತಿಸಿಕೊಂಡ ಊರಿದು. ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಅತಿದೊಡ್ಡ ವಾಣಿಜ್ಯ ಕೇಂದ್ರ. ಆದರೆ, ಒಂದೊಮ್ಮೆ ಅವಿಭಜಿತ ದಕ್ಷಿಣ ಕನ್ನಡದಲ್ಲೇ ಕುಂದಾಪುರ ಹಾಗೂ ಪುತ್ತೂರು ಸಮಾನ ಪ್ರಾಶಸ್ತ್ಯದಿಂದ ಗುರುತಿಸಿಕೊಂಡ ಆಡಳಿತ ಕೇಂದ್ರವಾಗಿತ್ತು ಎನ್ನುವುದು ಬ್ರಿಟಿಷರ ಕಡತಗಳಲ್ಲಿ ಸಿಗುವ ಉಲ್ಲೇಖ.

ಪುತ್ತೂರ ಮುತ್ತು


ಸುತ್ತಮುತ್ತ ಹತ್ತೂರ ಪುರಕ್ಕೆ ಶ್ರೀ ಮಹಾಲಿಂಗೇಶ್ವರನೇ ಅಧಿಪತಿ. ಹಾಗಾಗಿ ಈ ದೇವನನ್ನು `ಪುತ್ತೂರ ಮುತ್ತು’ ಎಂದೇ ಕರೆಯಲಾಗುತ್ತದೆ. ಆರಾಧನೆಯಲ್ಲೂ ಹಾಗೇ, ಸರ್ವಧರ್ಮೀಯರು ತಲೆಬಾಗುವ ದೇವನೀತ. ಇಲ್ಲಿ ಜಾತ್ರೆ ಆರಂಭವಾದರೆ, ಊರಿಗೇ ಹಬ್ಬ. ಬೇಧವೆಣಿಸದೇ ಜನರು ಬಂದು ಸೇರುವ ಸೊಬಗೇ ಕಣ್ಣಿಗೆ ಆನಂದ. ಧಾರ್ಮಿಕವಾಗಿಯೂ ಬಹಳ ಪ್ರಾಮುಖ್ಯತೆ ಹೊಂದಿರುವ ಪುರದೊಡೆಯನ ಆಸ್ಥಾನದ ಬಗ್ಗೆ ನಾನಾ ಕಥೆಗಳಿವೆ. ಧರ್ಮಸ್ಥಳ ಕ್ಷೇತ್ರದಲ್ಲಿ ಮಂಜುನಾಥ ಸ್ವಾಮಿಯ ಜೊತೆ ಅಣ್ಣಪ್ಪ ಸ್ವಾಮಿ ಇರುವಂತೆ, ಪುತ್ತೂರಿನಲ್ಲಿ ಅಂಙಣ್ಣತ್ತಾಯ ದೈವ. ಪಂಜುರ್ಲಿ ದೈವದ ರೂಪವೇ ಆಗಿರುವ ಅಂಙಣತ್ತಾಯ, ಶ್ರೀ ಮಹಾಲಿಂಗೇಶ್ವರ ದೇವರ ಧ್ವಜಕಂಬದ ಮೇಲೆ ನಿಂತು, ರಕ್ಷಣೆಯ ಕಾರ್ಯ ಮಾಡುತ್ತಾನೆ ಎನ್ನುವುದು ಪ್ರತೀತಿ.
ಹಾಗಾಗಿ, ಪುತ್ತೂರಿನ ಮಂದಿ ಯಾವುದೇ ಕಾರ್ಯಕ್ಕೆ ಹೊರಡಬೇಕಿದ್ದರೂ ಮೊದಲಿಗೆ ಮಹಾಲಿಂಗೇಶ್ವರನಿಗೆ ನಮನ ಸಲ್ಲಿಸಿಯೇ ಮುಂದಡಿ ಇಡುತ್ತಾರೆ. “ಇಲ್ಲೇ ಆರಂಭ, ಇಲ್ಲೇ ಅಂತ್ಯ” ಎನ್ನುವಂತೆ, ದೇವಸ್ಥಾನದ ಮುಂಭಾಗದಲ್ಲೇ ರುದ್ರಭೂಮಿ ಇದೆ. ಕಾಶಿಯಲ್ಲಿ ಬಿಟ್ಟರೆ, ಪುತ್ತೂರಿನಲ್ಲೇ ಇದನ್ನು ನೋಡಲು ಸಾಧ್ಯ. ಹಾಗಾಗಿ ಮಹಾಲಿಂಗೇಶ್ವರನ ಸಾನಿಧ್ಯಕ್ಕೆ ಹೆಚ್ಚು ತೂಕ ಎನ್ನುವ ಮಾತು ಇದೆ.

ಪುತ್ತೂರು ಹೆಸರಿನ ಹಿನ್ನೆಲೆ


ಪುತ್ತೂರು ಹೆಸರಿನ ಹಿನ್ನೆಲೆಗೂ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೂ ನಿಕಟ ಸಂಬಂಧ. ಈ ದೇವಸ್ಥಾನದ ಹಿಂಬದಿಯಲ್ಲಿರುವ ಕೆರೆಯನ್ನು ಎಷ್ಟೇ ಆಳ ಮಾಡಿದರೂ ನೀರು ದೊರಕಲೇ ಇಲ್ಲ. ಈ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ವರ್ಗ ಕೆರೆಯ ತಳದಲ್ಲಿ ಅನ್ನಸಂತರ್ಪಣೆಯನ್ನು ಏರ್ಪಡಿಸಿತು. ಜನರ ಹೊಟ್ಟೆ ತುಂಬುತ್ತಿದ್ದಂತೆ ಕೆರೆಯಲ್ಲಿ ನೀರು ತುಂಬತೊಡಗಿತು. ಊಟ ಮಾಡುತ್ತಿದ್ದ ಜನರು ಎದ್ದು ಹೊರಗೆ ಓಡಿದರು. ಎಲೆಯಲ್ಲಿ ಉಳಿದಿದ್ದ ಅನ್ನದ ಅಗುಳುಗಳು ಮುತ್ತುಗಳಾಗಿ ಪರಿವರ್ತನೆಯಾಯಿತು. ಇದರಿಂದಾಗಿ ಈ ಊರನ್ನು ಮುತ್ತೂರು ಎನ್ನುವುದಾಗಿ ಕರೆದರು. ಮುಂದೇ ಇದೇ ಹೆಸರು ಪುತ್ತೂರಾಗಿ ಮಾರ್ಪಾಡಾಯಿತು ಎನ್ನುವುದು ಪ್ರತೀತಿ.
ಬರದ ಸಂದರ್ಭ ಅರ್ಚಕರಿಗೆ ದೇಗುಲದ ಕೆರೆಯಲ್ಲಿ ಅಕ್ಕಿಯು ಪ್ರಸಾದ ರೂಪದಲ್ಲಿ ಸಿಕ್ಕಿತಂತೆ. ಇದ್ದಕ್ಕಿದ್ದಂತೆ ಕೆರೆಯಲ್ಲಿ ಒಸರು (ನೀರು) ಬರಲು ಆರಂಭವಾಯಿತು. ಈ ಅಕ್ಕಿ ಮುತ್ತಾಗಿ ಪರಿವರ್ತನೆಯಾಯಿತು ಎಂಬ ನಂಬಿಕೆಯೂ ಇದೆ.

ಕಂದಾಯ ಇತಿಹಾಸ


೧೯೮೩ರ ಹೊತ್ತಿನಲ್ಲಿ ಆಗಿನ ತಾಲೂಕು ಕೇಂದ್ರವಾಗಿದ್ದ ಉಪ್ಪಿನಂಗಡಿಯಲ್ಲಿ ಕಾಣಿಸಿಕೊಂಡ ನೆರೆಯಿಂದಾಗಿ, ಅನಿವಾರ್ಯವಾಗಿ ತಾಲೂಕು ಕೇಂದ್ರವನ್ನು ಪುತ್ತೂರಿಗೆ ಸ್ಥಳಾಂತರಿಸಲಾಯಿತು. ತಾಲೂಕು ಆಡಳಿತದ ಮೊದಲ ಭಾಗವಾಗಿ ಪುತ್ತೂರಿಗೆ ಸ್ಥಳಾಂತರಗೊಂಡ ಇಲಾಖೆ, ಉಪನೋಂದಣಿ ಇಲಾಖೆ. ದಾಖಲೆಗಳಲ್ಲಿ ಇದರ ಬಗ್ಗೆ ಉಲ್ಲೇಖವೂ ಸಿಗುತ್ತದೆ. ನಂತರ ತಾಲೂಕು ಆಡಳಿತ ಪುತ್ತೂರಿಗೆ ಬರುತ್ತದೆ.

ಸೋಮವಾರ ಸಂತೆ


ಪುತ್ತೂರು ಮಾತ್ರವಲ್ಲ ಸುತ್ತಮುತ್ತಲ ತಾಲೂಕುಗಳಲ್ಲಿಯೂ ಪುತ್ತೂರಿನ ಸೋಮವಾರ ಸಂತೆ ಬಹಳ ಪ್ರಸಿದ್ಧಿ. ಹಲವಾರು ವರ್ಷಗಳ ಇತಿಹಾಸ ಹೊಂದಿರುವ ಸೋಮವಾರ ಸಂತೆ, ಪುತ್ತೂರು ಕೋರ್ಟ್‌ನ ಮುಂಭಾಗದ ಕಿಲ್ಲೆ ಮೈದಾನದಲ್ಲಿ ಕಾರ್ಯಾಚರಿಸುತ್ತಿದೆ. ಹಿಂದೆ, ಈಗಿನ ನಗರಸಭೆ ಕಚೇರಿ ಇರುವ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿತ್ತು. ದೂರದೂರಿನ ವ್ಯಾಪಾರಿಗಳು ಇಲ್ಲಿಗಾಗಮಿಸಿ ವ್ಯಾಪಾರ ನಡೆಸುತ್ತಾರೆ.

ಅವಿಭಜಿತ ತಾಲೂಕು


ಪುತ್ತೂರು ತಾಲೂಕು ಇದೀಗ ಎರಡು ಹೋಳುಗಳಾಗಿದೆ. ಹೋಬಳಿ ಕೇಂದ್ರವಾಗಿದ್ದ ಕಡಬ, ಪುತ್ತೂರಿನಿಂದ ಪ್ರತ್ಯೇಕಗೊಂಡು ತಾಲೂಕಿನ ಸ್ಥಾನಮಾನ ಪಡೆದಿದೆ. ಒಂದೊಮ್ಮೆ ಪುತ್ತೂರು ತಾಲೂಕಿನ ಆಡಳಿತ ಕೇಂದ್ರ ಕಡಬ ಆಗಿತ್ತು ಎನ್ನುವ ಮಾತು ಕೇಳಿಬರುತ್ತಿವೆ. ಕೃಷಿ ಪ್ರಧಾನ ಹಿನ್ನೆಲೆ ಹೊಂದಿರುವ ಕಡಬ ತಾಲೂಕು, ಸಾಕಷ್ಟು ಅರಣ್ಯ ಪ್ರದೇಶವನ್ನು ಒಳಗೊಂಡಿದೆ.

ಕಾರಂತರ ಸಾಹಿತ್ಯ ಕೃಷಿ


ಪರ್ಲಡ್ಕ ಡಾ. ಶಿವರಾಮ ಕಾರಂತರ ಬಾಲವನ ಯಾರಿಗೆ ಗೊತ್ತಿಲ್ಲ ಹೇಳಿ? ಸಾಹಿತ್ಯ ಕ್ಷೇತ್ರದ ಅನರ್ಘ್ಯ ರತ್ನ, ಕಡಲ ತಡಿಯ ಭಾರ್ಗವ ಡಾ. ಶಿವರಾಮ ಕಾರಂತರು ಸಾಹಿತ್ಯ ಕೃಷಿ ಮಾಡಿದ ತಪೋಭೂಮಿಯಿದು. ಕಾರಂತರು ವಾಸವಾಗಿದ್ದ ಇಲ್ಲಿನ ಮನೆಯಲ್ಲಿ, ಜ್ಞಾನಪೀಠ ಪ್ರಶಸ್ತಿಯ ಜೊತೆಗೆ ಕಾರಂತರ ನೆನಪನ್ನು ಜೋಪಾನವಾಗಿಡುವ ಪ್ರಯತ್ನ ನಡೆದಿದೆ. ಕಾರಂತರು ಗೆಜ್ಜೆ ಕಟ್ಟಿ ಕುಣಿದ ಸಭಾಭವನದಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ. ಪಕ್ಕದಲ್ಲೇ ಬಯಲು ರಂಗಮಂದಿರ, ಗ್ಯಾಲರಿ ಆರಂಭಿಸಿದ್ದು ಹೊಸ ಬೆಳವಣಿಗೆ. ಇಲ್ಲಿ ಸ್ವಿಮ್ಮಿಂಗ್‌ಫೂಲ್ ನಿರ್ಮಿಸಿದ ಕಾರಣಕ್ಕೆ ಇಂದು ಕೂಡ ಪುತ್ತೂರಿನ ಜನತೆ ಆಗ ಸಹಾಯಕ ಆಯುಕ್ತರಾಗಿದ್ದ ಹರ್ಷಗುಪ್ತ ಹೆಸರನ್ನು ನೆನಪಿಸಿಕೊಳ್ಳುತ್ತಾರೆ.

ಸವರಿಕೊಂಡು ಸಾಗುವ ರಾ.ಹೆ.ಗಳು


ಪುತ್ತೂರು ಒಂದೇ ತಾಲೂಕನ್ನು ಎರಡು ರಾಷ್ಟ್ರೀಯ ಹೆದ್ದಾರಿಗಳು ಸೀಳಿಕೊಂಡು ಸಾಗುತ್ತವೆ. ರಾ.ಹೆ. ೨೭೫ ಬಂಟ್ವಾಳ – ಮೈಸೂರು – ಬೆಂಗಳೂರು ಹಾಗೂ ರಾ.ಹೆ. ೭೫ ಮಂಗಳೂರು – ಹಾಸನ – ಬೆಂಗಳೂರು. ಆದ್ದರಿಂದ ಪುತ್ತೂರಿಗೆ ಬರುವ ಪ್ರವಾಸಿಗರ ಸಂಖ್ಯೆ ಸ್ವಲ್ಪ ಹೆಚ್ಚೇ ಎನ್ನಬಹುದು.

ಸಂಗಮ ಕ್ಷೇತ್ರ


ದಕ್ಷಿಣ ಕಾಶಿ ಎಂದೇ ಖ್ಯಾತಿ ಪಡೆದಿರುವ ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ ದೇವಸ್ಥಾನದ ಬಳಿಯಲ್ಲೇ ನೇತ್ರಾವತಿ – ಕುಮಾರಧಾರ ನದಿಗಳು ಸಂಗಮಿಸುತ್ತವೆ. ಆದ್ದರಿಂದ ಇದು ಪುಣ್ಯ ಕ್ಷೇತ್ರ ಎನ್ನುವ ಪ್ರತೀತಿ ಇದೆ. ಮೃತಪಟ್ಟವರ ಸದ್ಗತಿಗಾಗಿ ಇಲ್ಲಿ ಅಪರಕ್ರಿಯಾ ವಿಧಿಗಳನ್ನು ನೆರವೇರಿಸುವ ಪರಿಪಾಠ ಇಲ್ಲಿದೆ. ದೇವಸ್ಥಾನದ ಪಕ್ಕದಲ್ಲೇ ಮಹಾಕಾಳಿ (ಮಾಂಕಾಳಿ ಅಬ್ಬೆ)ಯ ಗುಡಿಯೂ ಇದೆ. ನದಿ ಒಡಲಲ್ಲಿ ಉದ್ಭವ ಲಿಂಗವಿದ್ದು, ಇಂತಹ ಸಾವಿರ ಲಿಂಗಗಳು ಇವೆ ಎನ್ನುವುದು ಪ್ರತೀತಿ. ನದಿಯ ನದಿಯ ಇನ್ನೊಂದು ಬದಿಯಲ್ಲಿ ಕಲ್ಕುಡ – ಕಲ್ಲುರ್ಟಿ ದೈವಗಳ ಆದಿ ಸ್ಥಳವೂ ಇದೆ.

ಕಂಗು, ತೆಂಗು, ರಬ್ಬರ್, ಬಾಳೆ


ಕರಾವಳಿ ಎಂದರೆ ಕಂಗು ಎಂಬಷ್ಟರಮಟ್ಟಿಗೆ ಪ್ರಸಿದ್ಧಿ ಪಡೆದಿದೆ ಅಡಿಕೆ ಕೃಷಿ. ಒಂದೊಮ್ಮೆ ಭತ್ತದ ಬೇಸಾಯವೇ ಎಲ್ಲೆಡೆ ಕಾಣಸಿಗುತ್ತಿತ್ತು. ಆದರೆ ಇಂದು ಆ ಜಾಗವನ್ನು ಅಡಿಕೆ ಆಕ್ರಮಿಸಿಕೊಂಡಿದೆ. ಇಂದು ಕರಾವಳಿ ಭಾಗದ ಜನರು ಸುದೃಢರಾಗಿ ನಿಂತಿದ್ದಾರೆ ಎಂದರೆ ಅದಕ್ಕೆ ಅಡಿಕೆಯೇ ಕಾರಣ ಎನ್ನುವುದು ಅತಿಶಯೋಕ್ತಿಯ ಮಾತಲ್ಲ. ಅಡಿಕೆ ಬೆಳೆಗೆ ಬೆಂಬಲವಾಗಿ ಕ್ಯಾಂಪ್ಕೋದಂತಹ ಸಂಸ್ಥೆ ನಿಂತಿರುವುದರಿಂದ, ಅಡಿಕೆ ಕೃಷಿ ಹಾಗೂ ಕೃಷಿಕರು ವ್ಯವಸ್ಥಿತ ಜೀವನ ಕಂಡುಕೊಂಡಿದ್ದಾರೆ. ಇದರ ಜೊತೆಗೆ ತೆಂಗಿನಕಾಯಿ, ರಬ್ಬರ್, ಬಾಳೆ, ಕೊಕ್ಕೋ ಹೀಗೆ ವೈವಿಧ್ಯ ಕೃಷಿಯನ್ನು ಈ ಭಾಗದಲ್ಲಿ ಕಾಣಲು ಸಾಧ್ಯ. ತಾಲೂಕಿನ ಚಾರ್ವಾಕ ಹಾಗೂ ಬಲ್ನಾಡು ಅತೀ ಹೆಚ್ಚು ತರಕಾರಿ ಬೆಳೆಯುವ ಗ್ರಾಮಗಳು. ಸ್ವಸಹಾಯ ಪದ್ಧತಿಯಲ್ಲಿ ತರಕಾರಿ ಮಾರು

ಬೆಂದ್ರ್‌ತೀರ್ಥ


ಬೆಟ್ಟಂಪಾಡಿ ಗ್ರಾಮದ ಬೆಂದ್ರ್‌ತೀರ್ಥ ದಕ್ಷಿಣ ಭಾರತದ ಏಕೈಕ ಬಿಸಿನೀರಿನ ಬುಗ್ಗೆ ಹೊಂದಿರುವ ಸ್ಥಳ. ಬೋರ್‌ವೆಲ್‌ಗಳ ಸಂಖ್ಯೆ ಹೆಚ್ಚುತ್ತಿದ್ದಂತೆ ಬಿಸಿನೀರಿನ ಪ್ರಮಾಣ ಕುಸಿಯುತ್ತಾ ಬಂದಿದೆ. ಇಂದು ಬೆಂದ್ರ್‌ತೀರ್ಥ ಪಾಳು ಬಿದ್ದಿದೆ. ಈ ಬಿಸಿನೀರು ಚರ್ಮರೋಗಗಳಿಗೆ ಉತ್ತಮ ಔಷಧ ಎನ್ನುವ ಪ್ರತೀತಿಯೂ ಇದೆ. ಇದರ ಪಕ್ಕದಲ್ಲೇ ಶೀರೆ ನದಿ ಹರಿಯುತ್ತದೆ.

ಬಿರುಮಲೆ ಬೆಟ್ಟ


ಪುತ್ತೂರು ಪೇಟೆಯ ವಿಹಂಗಮ ನೋಟವನ್ನು ಕಟ್ಟಿಕೊಡುವ ಸ್ಥಳ ಬಿರುಮಲೆ ಬೆಟ್ಟ. ಬಹಳ ಎತ್ತರದ ಪ್ರದೇಶ. ಮಾತ್ರವಲ್ಲ, ಸಂಜೆಯ ಹೊತ್ತು ಮನಸ್ಸಿಗೆ ಮುದ ನೀಡುವ ತಾಣ. ಬಿರುಮಲೆ ಬೆಟ್ಟದಿಂದ ಪರ್ಲಡ್ಕ ಬಾಲವನಕ್ಕೆ ರೋಪ್‌ವೇ ನಿರ್ಮಿಸಿ, ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸಬೇಕು ಎನ್ನುವ ಕನಸು ಕಾಣಲಾಗಿತ್ತು. ಇಂತಹ ಅಭಿವೃದ್ಧಿ ಕಾರ್ಯಗಳು ನಡೆದಾಗ ಮಾತ್ರ, ಪ್ರವಾಸಿ ತಾಣಗಳು ಬೆಳೆಯಲು ಸಾಧ್ಯ.

ಪಡುಮಲೆ


ಅವಳಿ ವೀರರಾದ ಕೋಟಿ – ಚೆನ್ನಯರು ಹುಟ್ಟಿದ ಮಣ್ಣು ಪಡುಮಲೆ. ಇವರ ತಾಯಿ ದೇಯಿ ಬೈದ್ಯೇತಿ, ಸಾಯನ ಬೈದ್ಯ. ಕೋಟಿ – ಚೆನ್ನಯರು ಆಟವಾಡಿಕೊಂಡು ಬೆಳೆದ ಪ್ರದೇಶಗಳು, ಕುರುಹುಗಳು, ಅರಮನೆಯ ಕುರುಹು, ದೇಯಿ ಬೈದ್ಯೇತಿ ಓಡಾಡಿದ ಜಾಗಗಳು, ಮಂತ್ರಿ ಬುದ್ಯಂತನ ವಧೆಯಾದ ಜಾಗ ಇಂದು ಕಾಣಲು ಸಿಗುತ್ತವೆ. ಇವುಗಳ ಪೈಕಿ ದೇಯಿ ಬೈದ್ಯೇತಿ ಬಾಳಿ ಬೆಳಗಿದ ಗೆಜ್ಜೆಗಿರಿ ನಂದನ ಬಿತ್ತ್‌ಲ್ ಇಂದು ಕ್ಷೇತ್ರವಾಗಿ ಬೆಳಗಿದೆ. ಇಲ್ಲೇ ಸಮೀಪದಲ್ಲಿ ಕೋಟಿ – ಚೆನ್ನಯರ ಗರಡಿಯೂ ಇದೆ. ಇನ್ನೊಂದು ಬದಿಯಲ್ಲಿ ಪಡುಮಲೆಯ ಅಭಿವೃದ್ಧಿ ಕಾರ್ಯಗಳು ಸರಕಾರದ ಮುಂದಾಳತ್ವದಲ್ಲಿ ನಡೆಯುತ್ತಿವೆ.

ಗಡಿ ನಾಡು


ಪುತ್ತೂರು ತಾಲೂಕು ರಾಜ್ಯದ ಗಡಿ ಹಂಚಿಕೊಂಡಿದೆ. ಕೇರಳ – ಕರ್ನಾಟಕದ ಗಡಿ ಪ್ರದೇಶ ಪುತ್ತೂರು ತಾಲೂಕು ಆಗಿರುವುದರಿಂದ, ನೆರೆ ರಾಜ್ಯದ ಪ್ರಭಾವವೂ ಸ್ವಲ್ಪ ಮಟ್ಟಿಗೆ ಇದೆ ಎನ್ನಬಹುದು.

ಬಲನಾಡು


ಬಲ್ನಾಡು ಇದರ ಮೂಲ ಹೆಸರು ಬಲನಾಡು ಎಂಬುದಾಗಿತ್ತು ಎನ್ನಲಾಗುತ್ತದೆ. ಪುತ್ತೂರು ಪೇಟೆಯ ಬಲಭಾಗಕ್ಕೆ ಈ ಪ್ರದೇಶ ಇರುವುದಲ್ಲದೇ, ಒಂದೊಮ್ಮೆ ಪುತ್ತೂರು ತಾಲೂಕಿನ ಕೇಂದ್ರ ಭಾಗವೂ ಇದೆ ಆಗಿತ್ತು. ಬಂಗರಸರ ಕಾಲದಲ್ಲಿ ಬಲ್ನಾಡು ಕೇಂದ್ರ ಭಾಗವಾಗಿತ್ತು. ಇಲ್ಲಿ ಸಾನಿಧ್ಯವಿರುವ ದಂಡನಾಯಕ – ಉಳ್ಳಾಲ್ತಿ ದೈವಗಳು ಕಾರಣಿಕ ಶಕ್ತಿಗಳು. ಜನರು ಇಂದಿಗೂ ಭಯ – ಭಕ್ತಿಯಿಂದ ತಲೆ ತಗ್ಗಿಸುತ್ತಾರೆ. ಆದ್ದರಿಂದ ಇದು ಹೆಸರಿಗೆ ತಕ್ಕಂತೆ ಬಲ ನಾಡು.

ರಾಜಕೀಯ


ರಾಜಕೀಯ ಕ್ಷೇತ್ರದಲ್ಲಿಯೂ ಪುತ್ತೂರಿನ ಹೆಸರು ಆಗಾಗ್ಗೆ ಕೇಳಿಬರುತ್ತಿರುತ್ತದೆ. ಇತ್ತೀಚೆಗಿನ ರಾಜಕೀಯ ಬೆಳವಣಿಗೆಯಲ್ಲಿ ಉತ್ತರ ಕರ್ನಾಟಕದ ಪಾತ್ರ ಪ್ರಮುಖವಾಗಿದ್ದರೂ, ಮಹತ್ತರ ತೀರ್ಮಾನ ಕೈಗೊಳ್ಳುವಾಗ ಕರಾವಳಿಯ ನಿರ್ಧಾರಗಳು ಪ್ರಮುಖ ಪಾತ್ರ ವಹಿಸುತ್ತವೆ. ಪುತ್ತೂರಿನ ಜನಪ್ರತಿನಿಧಿಗಳು ಮುಖ್ಯಮಂತ್ರಿಯಾಗಿ, ಕೇಂದ್ರ ಮಂತ್ರಿಗಳಾಗಿ ಗುರುತಿಸಿಕೊಂಡಿದ್ದಾರೆ.

ನದಿಗಳು


ನಾಗರೀಕತೆ ಹುಟ್ಟಿಕೊಂಡಿರುವುದೇ ನದಿ ತೀರದಲ್ಲಿ ಎನ್ನುವುದನ್ನು ಇತಿಹಾಸ ದಾಖಲಿಸುತ್ತದೆ. ಆದ್ದರಿಂದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನೋಡುವಾಗ, ನದಿಗಳಿಗೂ ಪ್ರಮುಖ ಸ್ಥಾನ ನೀಡಲಾಗುತ್ತದೆ. ಪುತ್ತೂರು ತಾಲೂಕಿನಲ್ಲಿ ಕುಮಾರಧಾರ, ನೇತ್ರಾವತಿ ಹಾಗೂ ಶೀರೆ ನದಿಗಳು ಹರಿಯುತ್ತವೆ.

ಚಿನ್ನದ (ಜ್ಯುವೆಲ್ಲರಿ) ರಸ್ತೆ


ಪುತ್ತೂರು ಪೇಟೆಯ ಕೋರ್ಟ್‌ರಸ್ತೆ ಚಿನ್ನದ ಜ್ಯುವೆಲ್ಲರಿ, ಮಳಿಗೆಗಳಿಗೇ ಪ್ರಸಿದ್ಧ. ಮುಖ್ಯರಸ್ತೆಯಿಂದ ಕೋರ್ಟ್ ಸಂಪರ್ಕಿಸುವ ಕಾರಣಕ್ಕೆ ಇದನ್ನು ಕೋರ್ಟ್ ರಸ್ತೆ ಎಂದು ಕರೆಯಲಾಗುತ್ತದೆ. ಆದರೆ ಈ ರಸ್ತೆಯಲ್ಲಿ ಪೂರ ಚಿನ್ನಾಭರಣಗಳ ಅಂಗಡಿಗಳನ್ನೇ ಕಾಣಬಹುದು. ಇಂದು ನಡುನಡುವೆ ಬೇರೆ ಅಂಗಡಿಗಳು ಬಂದಿವೆ. ಆದರೆ ಒಂದೊಮ್ಮೆ ಚಿನ್ನದ ಮಳಿಗೆಗಳೇ ಈ ರಸ್ತೆ ಫೇಮಸ್.

ತುಳುನಾಡ ಸಂಗ್ರಾಮ


ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಮೊದಲೇ ತುಳುನಾಡಿನಲ್ಲಿ ಸ್ವಾತಂತ್ರ್ಯದ ಕಿಡಿ ಹೊತ್ತಿಕೊಂಡಿತ್ತು. ಈ ಕಿಡಿ ಸಂಗ್ರಾಮದ ರೂಪ ತಾಳಿ, ಬ್ರಿಟಿಷರನ್ನು ಒದ್ದೋಡಿಸಿ ಒಂದಷ್ಟು ದಿನ ಆಡಳಿತದ ಚುಕ್ಕಾಣಿಯನ್ನು ಹಿಡಿದಿತ್ತು. ಕುಹಕವಾಡುವವರು ಇದನ್ನು ಕಲ್ಯಾಣಪ್ಪನ ಕಾಟುಕಾಯಿ ಎಂದು ಕರೆದರೆ, ದೇಶಭಕ್ತರು ತುಳುನಾಡ ಸಂಗ್ರಾಮ ಎಂದು ಹೆಮ್ಮೆ ಪಟ್ಟುಕೊಂಡರು. ಇತ್ತೀಚೆಗೆ ಕೆದಂಬಾಡಿ ರಾಮಯ್ಯ ಗೌಡರ ಪ್ರತಿಮೆಯನ್ನು ಮೆರವಣಿಗೆಯಲ್ಲಿ ಕೊಂಡೊಯ್ದು, ಮಂಗಳೂರಿನಲ್ಲಿ ಪ್ರತಿಷ್ಠಾಪಿಸಿದ್ದು ತುಳುನಾಡ ಸಂಗ್ರಾಮದ ನೆನಪನ್ನು ಮರುಕಳಿಸಿದೆ.

ಜಾಂಬ್ರಿ ಗುಹೆ


೧೨ ವರ್ಷಗಳಿಗೊಮ್ಮೆ ನಡೆಯುವ ಉತ್ಸವವೇ ಜಾಂಬ್ರಿ ಗುಹಾ ಪ್ರವೇಶ. ನೆಟ್ಟಣಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಪಕ್ಕದ ಕೇರಳ ರಾಜ್ಯದ ತೆಕ್ಕೆಯಲ್ಲಿದೆ. ಈ ದೇವಸ್ಥಾನಕ್ಕೆ ಸಂಬಂಧಪಟ್ಟ ಜಾಂಬ್ರಿ ಗುಹೆ ಕರ್ನಾಟಕದ ಪುತ್ತೂರು ತಾಲೂಕಿನಲ್ಲಿದೆ. ಪ್ರತಿ ೧೨ ವರ್ಷಗಳಿಗೊಮ್ಮೆ ಕಾಪಾಡರು, ತಂತ್ರಿಗಳು ಈ ಗುಹೆಯನ್ನು ಪ್ರವೇಶಿಸುತ್ತಾರೆ. ಒಳಗಡೆ ಏನು ಇದೆ ಎನ್ನುವುದು ಇನ್ನೂ ನಿಗೂಢ. ಕರ್ನಾಟಕ ಹಾಗೂ ಕೇರಳದ ಬಹಳಷ್ಟು ಭಕ್ತರು ಇಲ್ಲಿ ಸೇರುತ್ತಾರೆ.

ಮಹಾವಿದ್ಯಾಲಯಗಳು

ಪುತ್ತೂರು ವಿದ್ಯಾ ಕ್ಷೇತ್ರವಾಗಿ ಬೆಳೆಯುತ್ತಿದೆ. ಬಹಳ ಹಿಂದಿನಿಂದಲೇ ವಿದ್ಯೆ ನೀಡುವುದರಲ್ಲಿ ಪುತ್ತೂರು ಎತ್ತಿದ ಕೈ. ಇತ್ತೀಚೆಗೆ ಇನ್ನಷ್ಟು ವಿದ್ಯಾಸಂಸ್ಥೆಗಳು ತಲೆಎತ್ತಿದ್ದು, ಪಕ್ಕದ ಜಿಲ್ಲೆ, ರಾಜ್ಯದ ವಿದ್ಯಾರ್ಥಿಗಳನ್ನು ಆಕರ್ಷಿಸುತ್ತಿದೆ. ಮಹಾವಿದ್ಯಾಲಯಗಳ ಜೊತೆ ತಾಂತ್ರಿಕ ಕಾಲೇಜುಗಳು ವಿದ್ಯಾಸೇವೆಯಲ್ಲಿ ತೊಡಗಿಸಿಕೊಂಡಿವೆ.

ಕೈಗಾರಿಕೆಗಳು

ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡ ಕ್ಯಾಂಪ್ಕೋ, ಬಿಂದು ಮೊದಲಾದ ಕಂಪೆನಿಗಳು ಪುತ್ತೂರಿನಲ್ಲಿವೆ ಎನ್ನುವುದೇ ಇಲ್ಲಿನ ಹೆಮ್ಮೆ. ಇಂತಹ ಹತ್ತು ಹಲವಾರು ಕಂಪೆನಿಗಳು ಪುತ್ತೂರಿನ ಪುಣ್ಯ ಭೂಮಿಯಲ್ಲಿ ಹುಟ್ಟಿಕೊಂಡು, ಬೆಳೆದು ಹೆಮ್ಮರವಾಗಿದೆ. ಎಷ್ಟೋ ಮನೆಗಳನ್ನು ಬೆಳಗಿವೆ. ಪುತ್ತೂರಿನ ಹೆಸರನ್ನು ಎಲ್ಲೆಲ್ಲೋ ಪಸರಿಸಿದೆ.

ಸಾಂಸ್ಕೃತಿಕ


ಜಿಲ್ಲೆಯ ಎರಡನೇ ಅತಿದೊಡ್ಡ ವಾಣಿಜ್ಯ ಪಟ್ಟಣವಾಗಿರುವ ಪುತ್ತೂರು, ಸಾಂಸ್ಕೃತಿಕವಾಗಿಯೂ ಬಹಳ ಸಂಪದ್ಭರಿತ. ಇಲ್ಲಿ ಸಾಕಷ್ಟು ಸಾಹಿತ್ಯ ಕೃಷಿ ನಡೆದಿವೆ. ಯಕ್ಷಗಾನ ಮೇಳಗಳು ಇವೆ. ದೇವಾಲಯ, ಚರ್ಚ್, ಮಸೀದಿಗಳು ಸಾಂಸ್ಕೃತಿಕ – ಧಾರ್ಮಿಕ ಕೊಡುಗೆಗಳನ್ನು ನೀಡಿವೆ.

error: Content is protected !!
Scroll to Top