ಸಿಇಟಿ ಪರೀಕ್ಷೆಯಲ್ಲಿ ಮತ್ತೆ ವಿವಾದ : ಬೆಂಗಳೂರಿನಲ್ಲಿ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ

ಸರ್ಕಾರದ ವಿರುದ್ಧ ಪೋಷಕರ ತೀವ್ರ ಆಕ್ರೋಶ

ಬೆಂಗಳೂರು : ಬೆಂಗಳೂರಿನ ಮಡಿವಾಳದ ಕೃಪಾನಿಧಿ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಕೆಸಿಇಟಿ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಜನಿವಾರವನ್ನು ಸಿಬ್ಬಂದಿ ಬಲವಂತವಾಗಿ ತೆಗೆಸಿರುವುದು ರಾಜ್ಯದಲ್ಲಿ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದೆ. ಕಳೆದ ವರ್ಷದಂತೆ ಈ ವರ್ಷವೂ ಕೆಸಿಇಟಿ ಪರೀಕ್ಷೆಯಲ್ಲಿ ಜನಿವಾರ ವಿವಾದ ಮುನ್ನೆಲೆಗೆ ಬಂದಿದೆ.

ಗುರುವಾರ ನಡೆದ ಪರೀಕ್ಷೆ ವೇಳೆ ಆನಂದ್ ಸುಧೀರ್ ರಾವ್ ಸೇರಿದಂತೆ ಐದಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ತಪಾಸಣೆ ನೆಪದಲ್ಲಿ ಅಡ್ಡಗಟ್ಟಿದ ಸಿಬ್ಬಂದಿ, ಜನಿವಾರ ತೆಗೆಯುವಂತೆ ಸೂಚಿಸಿದ್ದಾರೆ ಎಂಬ ಆರೋಪವಿದೆ. ಇದಕ್ಕೆ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದಾಗ, ‘ಜನಿವಾರ ತೆಗೆಯದಿದ್ದರೆ ಪರೀಕ್ಷಾ ಕೇಂದ್ರದಿಂದ ಹೊರಹೋಗಿ’ ಎಂದು ಧಮಕಿ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಕೊನೆಗೆ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಪೋಷಕರು ಅನಿವಾರ್ಯವಾಗಿ ಜನಿವಾರವನ್ನು ತೆಗೆಸಿ ಮಕ್ಕಳನ್ನು ಪರೀಕ್ಷಾ ಕೊಠಡಿಗೆ ಕಳುಹಿಸಿದ್ದರು.























































 
 

ಘಟನೆ ಸಂಚಲನ ಮೂಡಿಸುತ್ತಿದ್ದಂತೆಯೇ ಶಿಕ್ಷಣ ಇಲಾಖೆ ಮತ್ತು ಸಿಇಟಿ ಸೆಲ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಷಕರ ಮನವೊಲಿಸಲು ಯತ್ನಿಸಿದ ಅಧಿಕಾರಿಗಳು, ‘ಎಲ್ಲೂ ಈ ಬಗ್ಗೆ ದೂರು ನೀಡಬೇಡಿ’ ಎಂದು ಪತ್ರ ಬರೆಸಿಕೊಂಡಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ‘ಧಾರ್ಮಿಕ ಹಕ್ಕಿಗೆ ಧಕ್ಕೆ ತರುವ ಇಂತಹ ಕೃತ್ಯಗಳು ನಿಲ್ಲಬೇಕು’ ಎಂದು ಪೋಷಕರು ಮತ್ತು ಧಾರ್ಮಿಕ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷ ಕೆಸಿಇಟಿ ಪರೀಕ್ಷೆ ವೇಳೆ ಜನಿವಾರ ತೆಗೆಸಿದ್ದು ವಿವಾದಕ್ಕೀಡಾಗಿತ್ತು. ಶಿವಮೊಗ್ಗದ ಆದಿಚುಂಚನಗಿರಿ ಕಾಲೇಜು ಮತ್ತು ಬೀದರ್‌ನ ಪರೀಕ್ಷಾ ಕೇಂದ್ರಗಳಲ್ಲಿ ಇದೇ ರೀತಿಯ ಘಟನೆಗಳು ನಡೆದು ಭಾರಿ ಸುದ್ದಿಯಾಗಿದ್ದವು. ಶಿವಮೊಗ್ಗದಲ್ಲಿ ವಿದ್ಯಾರ್ಥಿಗಳ ಜನಿವಾರವನ್ನು ಕತ್ತರಿಸಿ ಕಸದ ಬುಟ್ಟಿಗೆ ಹಾಕಲಾಗಿತ್ತು, ಬೀದರ್‌ನಲ್ಲಿ ಜನಿವಾರ ತೆಗೆಯಲು ನಿರಾಕರಿಸಿದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿತ್ತು. ಈ ಕುರಿತು ಕರ್ನಾಟಕ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೂ ಸಲ್ಲಿಕೆಯಾಗಿದ್ದು, ಸರ್ಕಾರಕ್ಕೆ ನೋಟಿಸ್ ಜಾರಿಯಾಗಿತ್ತು.

ಬೆಂಗಳೂರಿನಲ್ಲಿ ಸಿಇಟಿ ಪರೀಕ್ಷೆ ವೇಳೆ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಪೋಷಕರು ಹಾಗೂ ಬಿಜೆಪಿ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಿವಾರ ತೆಗೆಯಲು ವಿದ್ಯಾರ್ಥಿಗಳು ನಿರಾಕರಿಸಿದಾಗ, ಅವರನ್ನು ಪರೀಕ್ಷೆಗೆ ಕೂರಲು ಬಿಡುವುದಿಲ್ಲ ಎಂದು ಹೇಳಿ ಮನೆಗೆ ಕಳುಹಿಸುವ ಬೆದರಿಕೆ ಹಾಕಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ಈ ಘಟನೆ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ಧಾರ್ಮಿಕ ಆಚರಣೆಯ ಭಾಗವಾಗಿರುವ ಜನಿವಾರವನ್ನು ತೆಗೆಸಿದ ಕ್ರಮ ಧಾರ್ಮಿಕ ಹಕ್ಕಿಗೆ ಧಕ್ಕೆ ತಂದಿದೆ ಎಂದು ಪೋಷಕರು ಅಭಿಪ್ರಾಯಪಟ್ಟಿದ್ದಾರೆ. ಇಂತಹ ಘಟನೆಗಳು ಹಿಂದೂ ವಿರೋಧಿ ನೀತಿಯನ್ನು ಪ್ರತಿಬಿಂಬಿಸುತ್ತವೆ ಎಂದು ಕೆಲ ಪೋಷಕರು ಸರ್ಕಾರವನ್ನು ದೂಷಿಸಿದ್ದಾರೆ.

error: Content is protected !!
Scroll to Top