ಪುತ್ತೂರು: ಶಾಲೆಯಲ್ಲಿ ಎಲ್ಲವನ್ನೂ ಕಲಿಸುವುದಿಲ್ಲ ಒಬ್ಬ ವ್ಯಕ್ತಿಗೆ ಬೇಕಾದ 40% ವಿದ್ಯೆ ಮಾತ್ರ ಶಾಲೆಯಲ್ಲಿ ದೊರೆಯುತ್ತದೆ ಉಳಿದ ಶಿಕ್ಷಣ ಮನೆಯಲ್ಲಿ ಸಿಗುತ್ತದೆ. ಅದು ಗುಣಮಟ್ಟದಿಂದ ಕೂಡಿರಬೇಕು ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಬಪ್ಪಳಿಗೆ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯ ಹತ್ತನೆಯ ವರ್ಷಾಚರಣೆ ದಶಾಂಬಿಕೋತ್ಸವದ ಅಂಗವಾಗಿ ಆಯೋಜಿಸಲಾದ ಪ್ರತಿಭಾ ತರಂಗಿಣಿ-2023-24 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಉನ್ನತ ಶಿಕ್ಷಣದ ಕನಸು ಕಾಣಬೇಕು. ಕನಸು ನನಸುಮಾಡಲೂ ಪ್ರಯತ್ನ ಅತೀ ಅಗತ್ಯವಾಗಿದೆ ಎಂದು ಹೇಳಿದರು. ಕೇವಲ ಇಂಜಿನಿಯರ್, ಡಾಕ್ಟರ್ ಕಡೆ ಗಮನ ಕೊಡಬೇಡಿ ಐಎಎಸ್, ಐಪಿಎಸ್ ಪರೀಕ್ಷೆಗಳಲ್ಲಿ ಕುಳಿತುಕೊಳ್ಳುವ ಮೂಲಕ ಸರಕಾರಿ ಉದ್ಯೋಗದಲ್ಲಿ ಸೇರಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಮುಖ್ಯ ಅತಿಥಿಯಾಗಿ ಮಣಿಪಾಲದ ಡಾ.ಟಿ.ಎಂ.ಎ ಪೈ ಕಾಲೇಜ್ ಆಫ್ ಎಜುಕೇಶನ್‌ನ ಸಂಯೋಜಕ ಡಾ.ಮಹಾಬಲೇಶ್ವರ ರಾವ್ ಮಾತನಾಡಿ, ಮಕ್ಕಳಿಗೆ ಆದರ್ಶಗಳನ್ನು ಕೇವಲ ಬಾಯಿಮಾತಿನಲ್ಲಿ ಹೇಳುವುದರಿಂದ ಯಾವ ಪ್ರಯೋಜನವೂ ಆಗಲಾರದು. ಹೆತ್ತವರು ಸ್ವತಃ ಆಚರಿಸಿ ತೋರಿಸಿದಾಗ ಮಾತ್ರ ಅದು ಮಕ್ಕಳ ಮನಸ್ಸಿಗೆ ಇಳಿಯುವುದಕ್ಕೆ ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಸುಬ್ರಹ್ಮಣ್ಯ ನಟ್ಟೋಜ ಮಾತನಾಡಿ, ಶಿಕ್ಷಣದ ಉದ್ದೇಶ ದೇಶ ಕಟ್ಟುವಿಕೆಯೇ ಆಗಿರಬೇಕು. ದೇಶಕ್ಕಾಗಿ ಪ್ರಾಣವನ್ನಾದರೂ ಅರ್ಪಿಸುವುದಕ್ಕೆ ಸಿದ್ಧರಾಗುವ ರೀತಿಯಲ್ಲಿ ನಮ್ಮ ಮಕ್ಕಳು ಬೆಳೆದುಬರಬೇಕು. ದೇಶಪ್ರೇಮ ತುಂಬುವುದು ವಿದ್ಯಾಸಂಸ್ಥೆಗಳ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕೋಶಾಧಿಕಾರಿ ರಾಜಶ್ರೀ ಎಸ್.ನಟ್ಟೋಜ, ಆಡಳಿತ ಮಂಡಳಿ ಸದಸ್ಯರಾದ ಡಾ.ಎಚ್.ಮಾಧವ ಭಟ್, ಡಾ.ಎಂ.ಎಸ್.ಶೆಣೈ, ಬಾಲಕೃಷ್ಣ ಬೋರ್ಕರ್, ಪ್ರಸನ್ನ ಭಟ್, ದಶಾಂಬಿಕೋತ್ಸವ ಸಮಿತಿಯ ಅಧ್ಯಕ್ಷ, ನ್ಯಾಯವಾದಿ ಮಹೇಶ್ ಕಜೆ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷೆ ಸೀಮಾ ನಾಗರಾಜ್, ವಿದ್ಯಾರ್ಥಿ ನಾಯಕ ಜಸ್ವಿತ್, ವಿದ್ಯಾರ್ಥಿ ನಾಯಕಿ ಅರುಂಧತಿ ಎಲ್ ಆಚಾರ್ಯ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಆತ್ರೇಯ ಭಟ್, ಯಶಸ್ ಬಿ.ಜೆ, ಸನ್ಮಯ್ ಎನ್ ಹಾಗೂ ಮಯೂರ್ ಎಸ್ ಮಯ್ಯ ಪ್ರಾರ್ಥಿಸಿದರು. ಪ್ರಾಚಾರ್ಯೆ ಮಾಲತಿ ಡಿ ಸ್ವಾಗತಿಸಿದರು. ಉಪ ಪ್ರಾಚಾರ್ಯೆ ಸುಜನಿ ಬೋರ್ಕರ್ ವಂದಿಸಿದರು. ಶಿಕ್ಷಕಿಯರಾದ ಸುಷ್ಮಾ ಮಿಥುನ್, ಗೌರಿ ಬಿ.ವಿ ಕಾರ್ಯಕ್ರಮ ನಿರ್ವಹಿಸಿದರು.