ಮಧ್ಯರಾತ್ರಿ ಕಳೆದರೂ ಪ್ರಕಟವಾಗದ ಫಲಿತಾಂಶ
ಚಿಕ್ಕಮಗಳೂರು : ಹೈಕೋರ್ಟ್ ಆದೇಶದಂತೆ ನಡೆದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ಪ್ರಕ್ರಿಯೆ ಶನಿವಾರ ತೀವ್ರ ಗೊಂದಲ ಮತ್ತು ಹೈಡ್ರಾಮಾಕ್ಕೆ ಸಾಕ್ಷಿಯಾಗಿದೆ. ಮಧ್ಯರಾತ್ರಿ ಕಳೆದರೂ ಈ ಕುರಿತ ಗೊಂದಲ ಮುಗಿದಿಲ್ಲ. ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರು ಮರು ಎಣಿಕೆಯಲ್ಲೂ ಗೆಲುವು ಸಾಧಿಸುವ ಮೂಲಕ ತಮ್ಮ ಸ್ಥಾನವನ್ನು ಮರುಸ್ಥಾಪಿಸಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ 55 ಮತಗಳಿಂದ ಡಿ.ಎನ್.ಜೀವರಾಜ್ ಗೆಲುವು ಸಾಧಿಸಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಆದರೆ ಈ ಸಂಬಂಧ ಅಧಿಕೃತ ಘೋಷಣೆ ಬಂದಿಲ್ಲ.
ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಮರು ಎಣಿಕೆಯಲ್ಲೂ ಗೆಲುವು ಸಾಧಿಸುವ ಮೂಲಕ ತಮ್ಮ ಸ್ಥಾನವನ್ನು ಮರುಸ್ಥಾಪಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಮಧ್ಯರಾತ್ರಿ ಕಳೆದರೂ ಫಲಿತಾಂಶದ ಅಧಿಕೃತ ಘೋಷಣೆ ಮಾಡದಿರುವುದು ಭಾರಿ ಗೊಂದಲಗಳಿಗೆ ಕಾರಣವಾಗಿದೆ. ಮತ ಎಣಿಕೆ ಕೇಂದ್ರದ ಮುಂಭಾಗ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಭಾರಿ ಸಂಘರ್ಷ ಏರ್ಪಟ್ಟಿದೆ.
ಚಿಕ್ಕಮಗಳೂರು ನಗರದ ಐಡಿಎಸ್ಜಿ ಕಾಲೇಜಿನಲ್ಲಿ ಮರು ಎಣಿಕೆ ಕಾರ್ಯ ನಡೆಯುತ್ತಿದ್ದ ವೇಳೆ, ರಾತ್ರಿ 8 ಗಂಟೆಯಾದರೂ ಅಧಿಕಾರಿಗಳು ಅಧಿಕೃತ ಮಾಹಿತಿ ನೀಡದಿದ್ದಕ್ಕೆ ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ದೇವರಾಜ್ ಶೆಟ್ಟಿ ನೇತೃತ್ವದಲ್ಲಿ ಎಣಿಕೆ ಕೇಂದ್ರಕ್ಕೆ ನುಗ್ಗಲು ಯತ್ನಿಸಿದ ಕಾರ್ಯಕರ್ತರು, ಪ್ರಕ್ರಿಯೆ ತಡವಾಗಲು ಕಾರಣವೇನು ಎಂದು ಪ್ರಶ್ನಿಸಿದರು. ಅಲ್ಲದೆ, ಒಳ ಬಿಡದ್ದಕ್ಕೆ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.
ಬಿಜೆಪಿ ಪ್ರತಿಭಟನೆಗೆ ಪ್ರತಿಯಾಗಿ ಕಾಂಗ್ರೆಸ್ ಕಾರ್ಯಕರ್ತರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ‘ಗೆದ್ದರು ಗೆದ್ದರು ರಾಜೇಗೌಡ’ ಎಂದು ಘೋಷಣೆ ಕೂಗುತ್ತಾ ರಾಷ್ಟ್ರೀಯ ಹೆದ್ದಾರಿ 173ರಲ್ಲೇ ಮಲಗಿ ಪ್ರತಿಭಟನೆ ನಡೆಸಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಎರಡೂ ಪಕ್ಷಗಳ ಕಾರ್ಯಕರ್ತರ ಘೋಷಣೆ ಮತ್ತು ಪ್ರತಿಭಟನೆ ನಡೆಸಿದ್ದರಿಂದ ಪರಿಸ್ಥಿತಿ ಉದ್ವಿಗ್ನವಾಗಿದೆ.
ಮರು ಮತ ಎಣಿಕೆಗೆ ಮಹತ್ವದ ತಿರುವು
ಈ ನಡುವೆ ಅಂಚೆ ಮತಗಳ ಮರು ಮತಎಣಿಕೆ ಮತ್ತೊಂದು ತಿರುವು ಪಡೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಹಾಲಿ ಶಾಸಕ ಟಿ.ಡಿ. ರಾಜೇಗೌಡ ಅವರಿಗೆ ಭಾರಿ ಹಿನ್ನಡೆಯಾಗಿದೆ ಎಂದು ಹೇಳಲಾಗುತ್ತಿದೆ. ಶನಿವಾರ ಬೆಳಗ್ಗೆ ಏಳು ಗಂಟೆಗೆ ಶುರವಾದ ಮತ ಎಣಿಕೆ ಮಧ್ಯರಾತ್ರಿಯವರಿಗೆ ನಡೆದಿದೆ. ಇದೀಗ ಈ ಎಲ್ಲ ಗೊಂದಲು ಮಹಾತಿರುವು ಪಡೆದುಕೊಂಡಿದೆ. 2023ರ ಮೇ 13 ರಂದು ನಡೆದಿದ್ದ ಮತ ಎಣಿಕೆ ವೇಳೆ ಸಿಂಧು ಎಂದು ಪರಿಗಣಿಸಲಾಗಿದ್ದ ಮತಗಳು, ಈಗಿನ ಮರುಎಣಿಕೆ ವೇಳೆ ತಿರಸ್ಕೃತಗೊಂಡಿವೆ.
ಅಂಚೆ ಮತಗಳ ಪತ್ರದಲ್ಲಿ ರಾಜೇಗೌಡ ಮತ್ತು ಮತ್ತೊಬ್ಬ ಅಭ್ಯರ್ಥಿ ಇಬ್ಬರಿಗೂ ‘ಡಬ್ಬಲ್ ಟಿಕ್’ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ 258 ಮತಗಳನ್ನು ತಿರಸ್ಕರಿಸಲಾಗಿದೆ. ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ ಈಗ 255 ಮತಗಳು ಮರು ಎಣಿಕೆ ವೇಳೆ ಕಡಿತಗೊಂಡಿವೆ. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ.
ಈಗಿನ ಮರು ಎಣಿಕೆಯಲ್ಲಿ ರಾಜೇಗೌಡರ 255 ಅಂಚೆ ಮತಗಳು ಕಡಿತಗೊಂಡಿರುವುದರಿಂದ, ಚುನಾವಣಾ ಫಲಿತಾಂಶದ ಅಂತಿಮ ಚಿತ್ರಣವು ಬದಲಾಗುವ ಸಾಧ್ಯತೆ ದಟ್ಟವಾಗಿದೆ. ತನಗೆ ಬಹುಮತ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಈಗಾಗಲೇ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಮರು ಎಣಿಕೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬಂದ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಶಾಸಕ ರಾಜೇಗೌಡ ಅವರು ಮಧ್ಯರಾತ್ರಿ 4 ಗಂಟೆಯವರೆಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಬೀಡುಬಿಟ್ಟಿದ್ದರು.
ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಮತ್ತು ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ಮತಗಳ ‘ಟ್ಯಾಂಪರಿಂಗ್’ (ಮತಗಳ ತಿದ್ದುಪಡಿ) ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ರಾಜೇಗೌಡರ ಮತಪತ್ರಗಳಲ್ಲಿ ‘ಡಬ್ಬಲ್ ಟಿಕ್’ ಮಾಡಿ ಉದ್ದೇಶಪೂರ್ವಕವಾಗಿ ಅವುಗಳನ್ನು ತಿರಸ್ಕೃತಗೊಳಿಸಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
























