ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 20 ವರ್ಷ ಜೈಲು

ಕೃತ್ಯ ನಡೆದ ಐದೇ ತಿಂಗಳಲ್ಲಿ ಪ್ರಕಟವಾದ ತೀರ್ಪು

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿ ದಯಾನಂದ ಮೂಲ್ಯ (44) ಎಂಬಾತನಿಗೆ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ (ಎಫ್‌ಟಿ ಎಸ್‌ಸಿ-2) ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶರು 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು 40 ಸಾವಿರ ರೂ. ದಂಡ ವಿಧಿಸಿದ್ದಾರೆ. ಕೃತ್ಯ ನಡೆದ ಐದೇ ತಿಂಗಳಲ್ಲಿ ತೀರ್ಪು ಪ್ರಕಟವಾಗಿರುವುದು ವಿಶೇಷವಾಗಿದೆ.

2025ರ ನ.16ರಂದು ಮಧ್ಯಾಹ್ನ 2ಕ್ಕೆ ಏಳು ವರ್ಷ ಪ್ರಾಯದ ಬಾಲಕಿ ತನ್ನ ಮನೆಯಲ್ಲಿ ಒಬ್ಬಳೇ ಇದ್ದಾಗ ದಯಾನಂದ ಮೂಲ್ಯ ಅಕ್ರಮವಾಗಿ ಪ್ರವೇಶ ಮಾಡಿ ಲೈಂಗಿಕ ದೌರ್ಜನ್ಯ ಎಸಗಿ ಈ ಸಂಗತಿಯನ್ನು ಯಾರಿಗಾದರೂ ಹೇಳಿದರೆ ಕೊಲೆ ಮಾಡಿ ಬಾವಿಗೆ ಎಸೆಯುವುದಾಗಿ ಜೀವ ಬೆದರಿಕೆ ಹಾಕಿದ್ದ. ಸಂತ್ರಸ್ತೆಯು ಈ ವಿಚಾರನ್ನು ತನ್ನ ತಾಯಿಗೆ ಹೇಳಿದ್ದು, ಆಕೆ ನೀಡಿದ ದೂರಿನಂತೆ ನ.22ರಂದು ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.





















































 
 

ಪೊಲೀಸ್ ನಿರೀಕ್ಷಕ ಮಂಜುನಾಥ ಬಿ.ಎಸ್. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಮಾನು ಕೆ.ಎಸ್. ವಾದ-ಪ್ರತಿವಾದ ಆಲಿಸಿ ಶನಿವಾರ ಶಿಕ್ಷೆ ವಿಧಿಸಿದ್ದಾರೆ. ಲೈಂಗಿಕ ದೌರ್ಜನ್ಯಕ್ಕೆ ಪೋಕ್ಸೊ ಕಲಂ 6ರ ಜತೆಗೆ ಬಿಎನ್‌ಎಸ್ ಕಾಯ್ದೆ 65(2) ಮತ್ತು ಪೊಕ್ಸೊ 4(2)ರಡಿ 20 ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಮತ್ತು 30 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ ಮೂರು ತಿಂಗಳ ಸಾದಾ ಸಜೆ ವಿಧಿಸಿದ್ದಾರೆ. ಮನೆಗೆ ಅಕ್ರಮ ಪ್ರವೇಶಕ್ಕಾಗಿ ಬಿಎನ್‌ಎಸ್ ಕಲಂ 332 (ಬಿ)ರಡಿ 3 ವರ್ಷಗಳ ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ ಹಾಗೂ ದಂಡ ತೆರಲು ವಿಫಲನಾದರೆ 15 ದಿನಗಳ ಹೆಚ್ಚುವರಿ ಸಾದಾ ಸಜೆ ವಿಧಿಸಿದ್ದಾರೆ.

ಜೀವ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ಬಿಎನ್‌ಎಸ್ ಕಲಂ 351 (3)ರಡಿ 2 ವರ್ಷ ಸಾದಾ ಸಜೆ ಮತ್ತು 5 ಸಾವಿರ ರೂ. ದಂಡ ಹಾಗೂ ದಂಡ ತೆರಲು ತಪ್ಪಿದಲ್ಲಿ 15 ದಿನಗಳ ಹೆಚ್ಚುವರಿ ಸಜೆ ಅನುಭವಿಸುವಂತೆ ತೀರ್ಪಿನಲ್ಲಿ ತಿಳಿಸಲಾಗಿದೆ. ದಂಡದ ಮೊತ್ತ 40 ಸಾವಿರ ರೂ. ಜೊತೆಗೆ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ 3.60 ಲಕ್ಷ ರೂ. ಸಹಿತ 4 ಲಕ್ಷ ರೂ.ವನ್ನು ಬಾಲಕಿಗೆ ಪರಿಹಾರವಾಗಿ ಪಾವತಿಸುವಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ. ಬಾಲಕಿಯ ಪರವಾಗಿ ವಿಶೇಷ ಪೊಕ್ಸೊ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.

error: Content is protected !!
Scroll to Top