ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡು ಮೋಸ
ಮಂಗಳೂರು : ದುಬೈನಿಂದ ಪತಿ ಕಳುಹಿಸಿದ ಪಾರ್ಸೆಲ್ ಪಡೆಯಲು ಹಣ ನೀಡಬೇಕು ಎಂಬ ವಂಚಕರ ಮಾತು ನಂಬಿದ ಮಹಿಳೆಯೊಬ್ಬರು ಬರೋಬ್ಬರಿ 6,84,500 ರೂ. ವಂಚಕರಿಗೆ ನೀಡಿ ಮೋಸ ಹೋಗಿದ್ದಾರೆ. ಈ ಬಗ್ಗೆ ಹಣ ಕಳಕೊಂಡ ಮಹಿಳೆ ನೀಡಿದ ದೂರಿನಂತೆ ಸೆನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾನು ಮಂಗಳೂರಿನಲ್ಲಿ ವಾಸವಾಗಿದ್ದು ಪತಿ ದುಬೈನಲ್ಲಿ ಕೆಲಸ ಮಾಡುತ್ತಾರೆ. ಅಲ್ಲಿಂದ ತನಗೆ ಬೇಕಾಗುವ ವಸ್ತುಗಳನ್ನು ಪಾರ್ಸೆಲ್ ಮೂಲಕ ಕಳುಹಿಸುತ್ತಿದ್ದರು. ಏ.21ರಂದು ಸಂಜೆ ತಾನು ಮನೆಯಲ್ಲಿದ್ದಾಗ ಲಂಡನ್ನಿಂದ ವಾಟ್ಸ್ಆ್ಯಪ್ ಕರೆ ಬಂದಿತ್ತು. ನಿಮ್ಮ ಗಂಡ ಪಾರ್ಸಲ್ ಕಳುಹಿಸಿದ್ದು, ಅದನ್ನು ಫೆಡ್ ಎಕ್ಸ್ ಕಾರ್ಗೋ ಪಾರ್ಸಲ್ಗೆ ಹಾಕುವಂತೆ ಹೇಳಿದ್ದಾರೆ ಎಂದು ತಿಳಿಸಿದ್ದರು. ಏ.27ರಂದು ಸಂಜೆ ಪುನಃ ಕರೆ ಮಾಡಿ ಗಂಡ ಗೋಲ್ಡ್, ಲಂಡನ್ ಪೌಂಡ್ಸ್, ಡೈಮಂಡ್ ವಾಚ್ ಮತ್ತು ಬ್ಯಾಗ್ ಹೀಗೆ 5.5 ಕೋ.ರೂ.ಮೌಲ್ಯದ ವಸ್ತುಗಳನ್ನು ಫೆಡ್ ಎಕ್ಸ್ ಏರ್ ಕಾರ್ಗೊದಲ್ಲಿ ಪಾರ್ಸೆಲ್ ಮಾಡಿರುವುದಾಗಿ ತಿಳಿಸಿದ್ದಾರೆ.
ನಂಬರ್ವೊಂದನ್ನು ನೀಡಿ ಅದಕ್ಕೆ ಕರೆ ಮಾಡುವಂತೆ ತಿಳಿಸಿದ್ದರು. ತಾನು ಕರೆ ಮಾಡಿ ಮಾತನಾಡಿದಾಗ ಪಾರ್ಸಲ್ ವಸ್ತುಗಳು ಡಿಲೆವರಿ ಮಾಡಲು ಕಸ್ಟಮ್ಸ್ ಚಾರ್ಜ್ 1,10,500 ರೂ. ಹಾಕಲು ಸೂಚಿಸಿದರು. ಅದೇ ರೀತಿ ಜಿಎಸ್ಟಿ, ಕಾರ್ಗೊ ಫೀಸ್, ಕರೆನ್ಸಿ ಬದಲಾವಣೆ ಚಾಜ್ ಸಹಿತ ನಾನಾ ಕಾರಣಗಳನ್ನು ನೀಡಿ 6,84,500 ರೂ. ಪಡೆದುಕೊಂಡಿದ್ದರು. ಆದರೆ ತನಗೆ ಯಾವುದೇ ಪಾರ್ಸೆಲ ಬಾರದ ಕಾರಣ ವಂಚನೆಯಾಗಿರುವುದು ಗೊತ್ತಾಗಿದೆ ಎಂದು 44 ವರ್ಷ ಪ್ರಾಯದ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.
























