ಕಲಬುರ್ಗಿ: ರಸ್ತೆ ನಡುವೆ ನಿಂತಿದ್ದ ಅಟೋವನ್ನು ಪಕ್ಕಕ್ಕೆ ನಿಲ್ಲಿಸುವಂತೆ ಮನವಿ ಮಾಡಿದ ವಿಷಯದಲ್ಲಿ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದ ಘಟನೆ ಭೀಮಳ್ಳಿಯಲ್ಲಿ ನಡೆದಿದೆ.
ಚಿತ್ತಾಪುರದ ನಾಲವಾರ ನಿವಾಸಿಗಳಾದ ತೋಟೇಂದ್ರ ಮತ್ತು ಸುನಿಲ್ ಎಂಬಿಬ್ಬರು ಸಹೋದರರು ತಮ್ಮ ಸಹೋದರಿಯ ಮನೆಯ ಕಾರ್ಯಕ್ರಮಕ್ಕೆ ತೆರಳಿದ್ದರು. ಕಾರ್ಯಕ್ರಮ ಮುಗಿಸಿ ಸಹೋದರಿಯನ್ನು ಮನೆಗೆ ಬಿಡುವ ಸಲುವಾಗಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ರಸ್ತೆಯ ಮಧ್ಯೆ ಆಟೋ ಒಂದು ನಿಲ್ಲಿಸಲಾಗಿದ್ದು, ಅದನ್ನು ಪಕ್ಕಕ್ಕೆ ಹಾಕುವಂತೆ ಸಹೋದರರು ಮನವಿ ಮಾಡಿದ್ದಾರೆ. ಆದರೆ ಈ ವೇಳೆ ಮಾತಿನ ಚಕಮಕಿ ನಡೆದು ಗಲಾಟೆ ಆರಂಭವಾಗಿದೆ. ಆರೋಪಿಗಳು ತೋಟೇಂದ್ರ ಮತ್ತು ಸುನಿಲ್ ಮೇಲೆ ಮನಸೋ ಇಚ್ಛೆ ಹೊಡೆದಿದ್ದಾರೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

























