ಗೃಹ ಸಚಿವ ಪರಮೇಶ್ವರ್‌ ವಿರುದ್ಧವೇ ಎಫ್‌ಐಆರ್‌!

ಬೆಟ್ಟಿಂಗ್‌ ಪ್ರಕರಣದಲ್ಲಿ ಕೇಸ್‌ ದಾಖಲಿಸಿ ತನಿಖೆ ಮಾಡಲು ಆದೇಶಿಸಿದ ನ್ಯಾಯಾಲಯ

ಬೆಂಗಳೂರು: ಕಬಡ್ಡಿ ಪಂದ್ಯಾವಳಿಯೊಂದರಲ್ಲಿ ಕೇವಲ 500 ರೂಪಾಯಿ ಬೆಟ್ಟಿಂಗ್ ಕಟ್ಟಿದ್ದಾಗಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ನ್ಯಾಯಾಲಯ ಆದೇಶಿಸಿದೆ. ಕಬಡ್ಡಿ ಪಂದ್ಯಾವಳಿ ವೇಳೆ ಬೆಟ್ಟಿಂಗ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಗೃಹಸಚಿವ ಜಿ. ಪರಮೇಶ್ವರ್‌ ವಿರುದ್ಧವೇ ಎಫ್‌ಐಆರ್‌ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಆದೇಶಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲು ನಾಗಭೂಷಣ್ ಎಂಬುವವರು ಕೋರ್ಟ್‌ಗೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ಕೋರ್ಟ್‌, ಗೃಹಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಕೊಡಿಗೆಹಳ್ಳಿ ಪೊಲೀಸ್ ಠಾಣೆಗೆ ಸೂಚನೆ ನೀಡಿದೆ.























































 
 

ತಾನು ನೀಡಿದ ಹೇಳಿಕೆಯೇ ಈಗ ಪರಮೇಶ್ವರ್‌ಗೆ ಮುಳುವಾಗಿದೆ. ತುಮಕೂರಿನಲ್ಲಿ ನಡೆದ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಗೃಹ ಸಚಿವ ಡಾ. ಜಿ. ಪರಮೇಶ್ವರ್ ವಿಜಯಪುರ ತಂಡ ಗೆಲ್ಲುತ್ತದೆ ಎಂದು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರೊಂದಿಗೆ 500 ರೂಪಾಯಿ ಬಾಜಿ ಕಟ್ಟಿದ್ದರು. ಅಂತಿಮ ಪಂದ್ಯದಲ್ಲಿ ದಕ್ಷಿಣ ಕನ್ನಡ ತಂಡವು 36-26 ಅಂಕಗಳಿಂದ ವಿಜಯಪುರ ತಂಡವನ್ನು ಸೋಲಿಸಿತು. ಇದರಿಂದಾಗಿ ಬಾಜಿ ಹಣವನ್ನು ಕಳೆದುಕೊಂಡ ಸಚಿವ ಪರಮೇಶ್ವರ್ ವಿಜೇತ ತಂಡಕ್ಕೆ ಪ್ರಶಸ್ತಿ ವಿತರಿಸುವಾಗ ಈ ವಿಷಯವನ್ನು ಸ್ವತಃ ಬಹಿರಂಗಪಡಿಸಿದ್ದರು. ಇದೀಗ ಇದುವೇ ಅವರಿಗೆ ಸಮಸ್ಯೆಯಾಗಿದೆ.

ಕೆಲವು ದಿನಗಳ ಹಿಂದೆ ನಡೆದ ಕಬಡ್ಡಿ ಟೂರ್ನಿಯಲ್ಲಿ ಗೃಹ ಸಚಿವರು ತಮಾಷೆಗಾಗಿ ಯಾರು ಗೆಲ್ಲುತ್ತಾರೆ ಎಂದು 500 ರೂಪಾಯಿ ಬೆಟ್ಟಿಂಗ್ ಕಟ್ಟೋಣ ಎಂದು ಹೇಳಿಕೆ ನೀಡಿದ್ದರು. ಆದರೆ, ಸಾರ್ವಜನಿಕವಾಗಿ ಬೆಟ್ಟಿಂಗ್ ಕಟ್ಟುವುದು ಅಥವಾ ಅದನ್ನು ಪ್ರೋತ್ಸಾಹಿಸುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ. ಈ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ ಎಚ್.ಆರ್. ನಾಗಭೂಷಣ್ ಎಂಬವರು ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ 42ನೇ ಎಸಿಜೆಎಂ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎನ್. ಶಿವಕುಮಾರ್ ಅವರು ಕೆಲವೊಂದು ಸೂಚನೆಯನ್ನು ನೀಡಿದ್ದಾರೆ.

ಗೃಹ ಸಚಿವರ ವಿರುದ್ಧ ತಕ್ಷಣ ಎಫ್‌ಐಆರ್ ದಾಖಲಿಸಿ ಸಮಗ್ರ ತನಿಖೆ ನಡೆಸುವಂತೆ ತುಮಕೂರಿನ ಕೊಡಿಗೇಹಳ್ಳಿ ಪೊಲೀಸರಿಗೆ ಸೂಚನೆ ನೀಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜವಾಬ್ದಾರಿಯುತ ಸ್ಥಾನದಲ್ಲಿರುವವರು ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ಮಾತನಾಡುವುದು ಸರಿಯಲ್ಲ ಎಂಬ ಅಂಶದ ಮೇಲೆ ದೂರು ದಾಖಲಾಗಿದೆ. ಬೆಟ್ಟಿಂಗ್ ಹಣ ಚಿಕ್ಕದಾಗಿದ್ದರೂ, ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕಾದ ಗೃಹ ಸಚಿವರೇ ಇಂತಹ ಹೇಳಿಕೆ ನೀಡಿರುವುದು ವಿರೋಧ ಪಕ್ಷಗಳಿಗೂ ಆಹಾರವಾಗಿದೆ. ಈಗ ಪೊಲೀಸರು ತಮ್ಮದೇ ಇಲಾಖೆಯ ಮುಖ್ಯಸ್ಥರ ವಿರುದ್ಧ ತನಿಖೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

error: Content is protected !!
Scroll to Top