ಮಾತುಕತೆಗಳು ಮುಗಿಯುವ ತನಕ ಕದನ ವಿರಾಮ ಎಂದ ಟ್ರಂಪ್
ವಾಷಿಂಗ್ಟನ್: ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ಬುಧವಾರ ನಿರ್ಣಾಯಕ ದಿನ. ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪಿಸಲು ಮುಂದಾಗಿರುವ ಪಾಕಿಸ್ತಾನ ಎರಡು ದೇಶಗಳ ನಡುವೆ ಮತ್ತೊಂದು ಕದನ ವಿರಾಮಕ್ಕೆ ಸಂಬಂಧಿಸಿದ ಶಾಂತಿ ಮಾತುಕತೆಯ ಸಭೆ ಆಯೋಜಿಸಿದೆ. ಅಮೆರಿಕ ಇಸ್ಲಾಮಾಬಾದ್‌ಗೆ ಹೊರಟು ನಿಂತರೆ ಇತ್ತ ಇರಾನ್ ಬರುವಿಕೆ ಇನ್ನೂ ಅಸ್ಪಷ್ಟವಾಗಿದೆ. ಈ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾತ್ಕಾಲಿಕ ಕದನ ವಿರಾಮವನ್ನು ವಿಸ್ತರಿಸಿದ್ದಾರೆ.
ಇರಾನ್ ನಾಯಕರು ಏಕೀಕೃತ ಪ್ರಸ್ತಾವವೊಂದನ್ನು ಒಪ್ಪುವ ತನಕ ಹಾಗೂ ಈಗ ನಡೆಯುತ್ತಿರುವ ಮಾತುಕತೆಗಳು ಮುಗಿಯುವ ತನಕ ಕದನ ವಿರಾಮ ಜಾರಿಯಲ್ಲಿರುತ್ತದೆ ಎಂದು ಟ್ರಂಪ್ ಹೇಳಿದ್ದಾರೆ. ರಾಜತಾಂತ್ರಿಕ ಮಾತುಕತೆಗೆ ಅನುಕೂಲವಾಗುವಂತೆ ಸೈನಿಕ ಕಾರ್ಯಾಚರಣೆಗಳನ್ನು ತಡೆ ಹಿಡಿಯಲು ಪಾಕಿಸ್ತಾನ ಮಾಡಿಕೊಂಡ ಮನವಿಯ ಮೇರೆಗೆ ಕದನ ವಿರಾಮ ವಿಸ್ತರಿಸುತ್ತಿದ್ದೇನೆ ಎಂದು ಟ್ರಂಪ್ ತನ್ನ ಸೋಷಿಯಲ್ ಮೀಡಿಯಾ ಖಾತೆ ಟ್ರುತ್ ಸೋಷಿಯಲ್‌ನಲ್ಲಿ ಬರೆದುಕೊಂಡಿದ್ದಾರೆ.
ಪಾಕಿಸ್ತಾನ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ಮತ್ತು ಪ್ರಧಾನಿ ಶೆಹಬಾಜ್ ಷರೀಫ್ ಮಾಡಿದ ನೇರ ಮನವಿಯ ಹಿನ್ನೆಲೆಯಲ್ಲಿ ಕದನ ವಿರಾಮ ವಿಸ್ತರಿಸಿದ್ದೇನೆ ಎಂದು ಟ್ರಂಪ್ ಹೇಳಿಕೊಂಡಿದ್ದಾರೆ. ಸದ್ಯಕ್ಕೆ ದಾಳಿಯನ್ನು ತಡೆಹಿಡಿಯಲು ಹಾಗೂ ಯಾವುದೇ ಕಾರ್ಯಾಚರಣೆಗೆ ಸರ್ವ ಸನ್ನದ್ಧ ಸ್ಥಿತಿಯಲ್ಲಿ ಇರಲು ಸೇನೆಗೆ ಸೂಚಿಸಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಅಮೆರಿಕ ಸಮರ ವಿಸ್ತರಣೆ ಮಾಡುವ ಕೆಲವೇ ಕ್ಷಣಗಳ ಮೊದಲು ಇರಾನ್ ಸಚಿವ ಅಬ್ಬಾಸ್ ಅರಘ್ಚಿ ಬಂದರುಗಳಿಗೆ ದಿಗ್ಬಂಧನ ವಿಧಿಸಿರುವುದು ಕದನ ವಿರಾಮದ ಸ್ಪಷ್ಟ ಉಲ್ಲಂಘನೆ ಮತ್ತು ಯುದ್ಧಕ್ಕೆ ಆಹ್ವಾನ ಎಂದು ಪರಿಗಣಿಸುತ್ತೇವೆ ಎಂದು ಹೇಳಿದ್ದಾರೆ.
ಟ್ರಂಪ್ ಈ ಮೊದಲು ಘೋಷಿಸಿದ ಕದನ ವಿರಾಮ ಇಂದಿಗೆ ಕೊನೆಗೊಳ್ಳುತ್ತದೆ. ಹೀಗಾಗಿ ಮಧ್ಯಪ್ರಾಚ್ಯದಲ್ಲಿ ಏರ್ಪಟ್ಟಿರುವ ಸಂಘರ್ಷವನ್ನ ಅಂತ್ಯಗೊಳಿಸುವ ನಿಟ್ಟಿನಲ್ಲಿ ಬುಧವಾರ ಅತ್ಯಂತ ನಿರ್ಣಾಯಕ ದಿನ. ಅಮೆರಿಕ ಮತ್ತು ಇರಾನ್ ನಡುವೆ ಇಂದು 2ನೇ ಸುತ್ತಿನ ಶಾಂತಿ ಮಾತುಕತೆ ನಡೆಯುವ ಸಾಧ್ಯತೆಗಳಿವೆ. ಇಸ್ಲಾಮಾಬಾದ್‌ನಲ್ಲಿ ಸಭೆ ಆಯೋಜಿಸಿರುವ ಪಾಕಿಸ್ತಾನದ ನಾಯಕರು ಎರಡು ದೇಶಗಳ ನಾಯಕತ ಬರುವಿಕೆ ಕಾಯುತ್ತಿದ್ದಾರೆ.
ಪಾಕ್ ನಲ್ಲಿ ನಡೆಯಲಿರುವ ಸಭೆಯಲ್ಲಿ ಭಾಗಿಯಾಗಲು ಅಮೆರಿಕದ ಉಪಾಧ್ಯಕ್ಷ ಜೆ.ಡಿ ವ್ಯಾನ್ಸ್ ನೇತೃತ್ವದ ನಿಯೋಗ ಈಗಾಗಲೇ ಅಮೆರಿಕದಿಂದ ಹೊರಟಿದೆ. ಭದ್ರತೆಯ ಕಾರಣಗಳಿಗಾಗಿ ನಿಯೋಗದಲ್ಲಿ ಯಾರಿದ್ದಾರೆ ಮತ್ತು ಅವರು ಯಾವ ಸಮಯಕ್ಕೆ ಪಾಕ್ ತಲುಪಲಿದ್ದಾರೆ ಎನ್ನುವ ಮಾಹಿತಿ ಗೌಪ್ಯವಾಗಿಡಲಾಗಿದೆ. ಆದರೆ ಸಭೆಯಲ್ಲಿ ಇರಾನ್‌ನ ನಿಯೋಗ ಪಾಲ್ಗೊಳ್ಳುತ್ತದೆಯೇ ಮತ್ತು ಪಾಲ್ಗೊಂಡರೆ ಅದರ ನೇತೃತ್ವವನ್ನು ಯಾರು ವಹಿಸುತ್ತಾರೆ ಎಂಬ ಬಗ್ಗೆ ಇರಾನ್ ಯಾವುದೇ ಮಾಹಿತಿ ನೀಡಿಲ್ಲ. ಈನ ಡುವೆ ಇರಾನ್‍ನಿಂದ ಯಾವುದೇ ನಿಯೋಗ ಇಸ್ಲಾಮಾಬಾದ್‌ಗೆ ಭೇಟಿ ನೀಡಿಲ್ಲ ಎಂದು ಇರಾನ್‍ನ ಸರಕಾರಿ ಸ್ವಾಮ್ಯದ ಸುದ್ದಿ ವಾಹಿನಿ ಹೇಳಿಕೆ ನೀಡಿದೆ.

























