ಬೆಳ್ತಂಗಡಿ ತಾಲೂಕಿನಲ್ಲಿ ಮಳೆಯಿಂದ ಅಪಾರ ಹಾನಿ
ಬೆಳ್ತಂಗಡಿ: ಬೆಳ್ತಂಗಡಿಯ ಎಲ್ಲೆಡೆ ಸೋಮವಾರ ಸಂಜೆ, ಗುಡುಗು, ಮಿಂಚು ಸಹಿತ ಭಾರಿ ಮಳೆಯಾಗಿದ್ದು ಅಪಾರ ಪ್ರಮಾಣದ ಹಾನಿ ಉಂಟಾಗಿದೆ. ಉಜಿರೆಯ ಸಮೀಪ ಚಲಿಸುತ್ತಿದ್ದ ಕಾರಿನ ಮೇಲೆ ಮರದ ಬೃಹತ್ ಗಾತ್ರದ ರೆಂಬೆಯೊಂದು ಮುರಿದುಬಿದ್ದು ಕಾರಿಗೆ ಹಾನಿಯಾಗಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತರೊಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಮುಂಡಾಜೆ ಗ್ರಾ.ಪಂ. ವ್ಯಾಪ್ತಿಯ ಚಾಮುಂಡಿ ನಗರ ಪರಿಸರದಲ್ಲಿ ರಾಮಕ್ಕ ಎಂಬವರ ಮನೆಗೆ ಮರ ಬಿದ್ದು ಸಂಪೂರ್ಣ ಹಾನಿಯಾಗಿದೆ. ಈ ಪ್ರದೇಶದ ಇನ್ನೂ ನಾಲ್ಕು ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ದಿಡುಪೆ-ಮುಂಡಾಜೆ ರಸ್ತೆಯ ಕುರುಡ್ಯ ಎಂಬಲ್ಲಿ ರಸ್ತೆಗೆ ಮರ ಬಿದ್ದು ಸಂಚಾರ ವ್ಯತ್ಯಯ ಉಂಟಾಯಿತು. ಮಂಜುಶ್ರೀ ನಗರದ ಶ್ರೀಪತಿ ಆಚಾರ್ಯ ಎಂಬವರ ಮನೆ ಮೇಲೆ ತೆಂಗಿನ ಮರ ಮುರಿದು ಬಿದ್ದು ಹಾನಿ ಉಂಟಾಗಿದೆ. ದಿನೇಶ್ ಆಚಾರ್ಯ ಎಂಬವರ ಕಾರಿನ ಮೇಲೆ ಮರ ಬಿದ್ದು ಹಾನಿ ಸಂಭವಿಸಿದೆ. ಕುಳೂರು ಪ್ರದೇಶದ ರಾಧಾ ಪೂಜಾರಿ ಎಂಬವರ ಮನೆಯ ಹೆಂಚುಗಳು ಗಾಳಿಗೆ ಹಾರಿಹೋಗಿವೆ. ಮನೆ ಪರಿಸರದಲ್ಲಿ ನಾಲ್ಕು ಮರಗಳು ಉರುಳಿ ಬಿದ್ದಿವೆ.
ಯಶೋದಾ ಎಂಬವರ ಮನೆಯ ಶೀಟುಗಳಿಗೆ ಹಾನಿ ಉಂಟಾಗಿದೆ. ಮುಂಡಾಜೆಯ ಜನತಾ ಕಾಲೋನಿಯಲ್ಲಿ ನಾಲ್ಕು ಮನೆಗಳಿಗೆ ಹಾನಿ ಸಂಭವಿಸಿದೆ. ಅಲ್ಲಲ್ಲಿ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ನೂರಾರು ಅಡಕೆ, ರಬ್ಬರ್ ಗಿಡಗಳು ಧರಾಶಾಯಿಯಾಗಿವೆ. ತಾಲೂಕಿನಾದ್ಯಂತ ವಿದ್ಯುತ್ ಪೂರೈಕೆ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿದೆ. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ತಂಡದವರು, ಸ್ಥಳೀಯರು ಮರಗಳ ತೆರವಿಗೆ ಸಹಕಾರ ನೀಡಿದ್ದಾರೆ. ಉಜಿರೆ ಮತ್ತು ಇಂದಬೆಟ್ಟು ರಸ್ತೆಯ ಸಂಪರ್ಕ ಕೊಂಡಿಯಾಗಿರುವ ಅಂಬಡಬೆಟ್ಟು ಎಂಬಲ್ಲಿ ನೂತನ ಸೇತುವೆ ನಿರ್ಮಾಣವಾಗುತ್ತಿದ್ದು ಇಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ರಸ್ತೆ ಭಾರಿ ಮಳೆಗೆ ಕುಸಿದಿದೆ. ಇಲ್ಲಿ ವಾಹನಗಳು ಓಡಾಡದ ಪರಿಸ್ಥಿತಿ ಎದುರಾಗಿದೆ.
ಸಿಡಿಲು ಬಡಿದು ಮೂರು ಹಸುಗಳ ಸಾವು
ಮೂಡುಬಿದಿರೆ ತಾಲೂಕಿನ ದರೆಗುಡ್ಡೆ ಗ್ರಾಮದ ಕೆಲ್ಲಪುತ್ತಿಗೆ ಪರಾರಿ ಎಂಬಲ್ಲಿ ಸೋಮವಾರ ಸಂಜೆ ಸಿಡಿಲು ಬಡಿದು ಮೂರು ದನಗಳು ಮೃತಪಟ್ಟಿವೆ. ಆನಂದ ಮೇರ ಎಂಬವರಿಗೆ ಸೇರಿದ ಹಸುಗಳು ಕೊಟ್ಟಿಗೆಯಲ್ಲಿರುವಾಗಲೇ ಈ ದುರ್ಘಟನೆ ಸಂಭವಿಸಿದೆ.
ಸೋಮವಾರ ಸಂಜೆ ವೇಳೆ ಮೂಡುಬಿದಿರೆ ತಾಲೂಕಿನಾದ್ಯಂತ ಸಿಡಿಲಿನ ಅಬ್ಬರ ಹೆಚ್ಚಾಗಿದ್ದು, ಭಾರಿ ಮಳೆಯೂ ಸುರಿದಿದೆ. ಆನಂದ ಮೇರ ಈ ಮೂರು ದನಗಳಿಂದ ಹಾಲು ಸಂಗ್ರಹಿಸಿ ಡೈರಿಗೆ ನೀಡುತ್ತಿದ್ದರು. ಸಿಡಿಲು ಬಡಿದ ತೀವ್ರತೆಗೆ ಕೊಟ್ಟಿಗೆಯಲ್ಲಿದ್ದ ದನಗಳು ಸ್ಥಳದಲ್ಲೇ ಸಾವನ್ನಪ್ಪಿವೆ.

























