ನಾಳೆಗೆ ಮುಕ್ತಾಯವಾಗಲಿದೆ ತಾತ್ಕಾಲಿಕ ಕದನ ವಿರಾಮ
ಟೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಎರಡನೇ ಸುತ್ತಿನ ಸಮರ ವಿರಾಮ ಮಾತುಕತೆ ವಿಚಾರ ಇನ್ನೂ ಅತಂತ್ರವಾಗಿಯೇ ಮುಂದುವರಿದಿದೆ. ನಾವು ಪಾಕಿಸ್ತಾನಕ್ಕೆ ಹೋಗುತ್ತಿದ್ದೇವೆ ಎಂದು ಅಮೆರಿಕ ಹೇಳಿದರೆ, ಇತ್ತ ಇರಾನ್ ನಾವು ಹೋಗಲ್ಲ ಎಂದು ಹೇಳುತ್ತಿದೆ. ಇದರ ನಡುವೆಯೇ ಇಸ್ಲಾಮಾಬಾದ್‌ನಲ್ಲಿ ಮಾತ್ರ ಮಾತುಕತೆಗೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಅಮೆರಿಕ ಘೋಷಿಸಿರುವ ತಾತಾಕಲಿಕ ಕದನ ವಿರಾಮ ಏ.22ಕ್ಕೆ ಮುಕ್ತಾಯವಾಗಲಿದ್ದು, ಶಾಂತಿ ಮಾತುಕತೆ ಏರ್ಪಡದಿದ್ದಲ್ಲಿ ಮುಂದಿನ ಸ್ಥಿತಿ ಏನಾಗಬಹುದು ಎಂಬ ಆತಂಕ ಜಗತ್ತನ್ನು ಕಾಡುತ್ತಿದೆ.
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ ಈಗ ಜಾಗತಿಕವಾಗಿ ನೂರಾರು ಸಂಕಷ್ಟಗಳನ್ನು ಸೃಷ್ಟಿಸಿದೆ. ಇದಕ್ಕೆ ಇತಿಶ್ರೀ ಹಾಡಲೆಂದೇ ಪಾಕಿಸ್ತಾನದ ಮಧ್ಯಸ್ತಿಕೆಯಲ್ಲಿ ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಅಮೆರಿಕದ ಷರತ್ತುಗಳನ್ನು ಒಪ್ಪದ ಇರಾನ್ ಮಾತುಕತೆಯ ಮೇಜಿನಿಂದ ಎದ್ದು ನಡೆದಿತ್ತು. ಈಗ ಮತ್ತೊಂದು ಸುತ್ತಿನ ಮಾತುಕತೆಗೆ ಮತ್ತೆ ಅದೇ ಇಸ್ಲಾಮಾಬಾದ್‌ನಲ್ಲಿ ವೇದಿಕೆ ಸೃಷ್ಟಿಯಾಗಿದೆ. ಆದರೆ ಇದು ನಡೆಯೋದು ಬಹುತೇಕ ಡೌಟ್ ಎಂದು ಹೇಳಲಾಗುತ್ತಿದೆ.
ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುವ ಪ್ರಕಾರ ಶಾಂತಿ ಮಾತುಕತೆಗೆ ಈಗಾಗಲೇ ಜೆಡಿ ವ್ಯಾನ್ಸ್ ನೇತೃತ್ವದ ತಂಡ ಪಾಕಿಸ್ತಾನಕ್ಕೆ ಹೊರಟಿದೆ. ಆದರೆ ಅಮೆರಿಕದ ಸ್ಥಳೀಯ ಮಾಧ್ಯಮಗಳು ಹೇಳುವ ಪ್ರಕಾರ ಜೆಡಿ ವ್ಯಾನ್ಸ್ ಇನ್ನೂ ಅಮೆರಿಕದಲ್ಲಿಯೇ ಇದ್ದಾರೆ. ಇತ್ತ ಇರಾನ್ ಅಮೆರಿಕದ ಜೊತೆ ಶಾಂತಿ ಮಾತುಕತೆಗೆ ನಾವು ಬರುವುದಿಲ್ಲ ಎಂದು ಹೇಳಿದೆ. ಅಮೆರಿಕ ತನ್ನ ಬೇಡಿಕೆಯಿಂದ ಹಿಂದೆ ಸರಿಯುವವರೆಗೂ ಮಾತುಕತೆಯಲ್ಲಿ ಭಾಗಿಯಾಗಲ್ಲ ಎಂದು ಇರಾನ್ ಅಧ್ಯಕ್ಷ ಪೆಜೆಶ್ಕಿಯಾನ್ ಹೇಳಿದ್ದಾರೆ. ಮತ್ತೊಂದು ಕಡೆ ವಿದೇಶಾಂಗ ಇಲಾಖೆ ವಕ್ತಾರ ಇಸ್ಮಾಯಿಲ್ ಬರಾಖಿ ನಾವು ಇನ್ನೂ ಮಾತುಕತೆಯಲ್ಲಿ ಭಾಗಿಯಾಗುವ ಬಗ್ಗೆ ನಿರ್ಧಾರ ಮಾಡಿಲ್ಲ ಎಂದು ಹೇಳಿದ್ದಾರೆ. ಈ ಮೂಲಕ ಇರಾನ್ ಶಾಂತಿ ಮಾತುಕತೆ ವಿಚಾರದಲ್ಲಿ ಅನೇಕ ಗೊಂದಲಗಳನ್ನು ಮೂಡಿಸುತ್ತಿದೆ. ಕಳೆದ ಬಾರಿ ಇದೇ ರೀತಿ ನಾವು ಬರಲ್ಲ ಎಂದಿದ್ದ ಇರಾನ್ ಕೊನೆಗೂ ಅಬ್ಬಾಸ್ ಅರಗ್ಚಿ ನೇತೃತ್ವದ ನಿಯೋಗವನ್ನು ಕಳುಹಿಸಿಕೊಟ್ಟಿತ್ತು.
ಈ ನಡುವೆ ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ, ಇರಾನ್ ರಾಯಭಾರಿ ರೆಜಾ ಅಮಿರಿ ಮೊಘದ್ದಮ್‌ಗೆ ಇಸ್ಲಾಮಾಬಾದ್‌ನಲ್ಲಿ ಮುಂಬರುವ ಶಾಂತಿ ಮಾತುಕತೆಗಳ ವ್ಯವಸ್ಥೆಗಳ ಕುರಿತು ವಿವರಿಸಿದ್ದಾರೆ. ಸಚಿವಾಲಯದ ಹೇಳಿಕೆಯ ಪ್ರಕಾರ, ಪ್ರಾದೇಶಿಕ ಉದ್ವಿಗ್ನತೆಯನ್ನು ಕಡಿಮೆ ಮಾಡಲು ರಾಜತಾಂತ್ರಿಕತೆಯ ಮೂಲಕ ಶಾಶ್ವತ ಪರಿಹಾರದ ಅಗತ್ಯವನ್ನು ಎರಡೂ ಕಡೆಯವರು ಹೇಳಿದ್ದಾರೆ.
ಶಾಂತಿ ಮಾತುಕತೆ ಒಂದು ಕಡೆ ಅನಿಶ್ಚಿತತೆಯಿಂದ ಕೂಡಿದ್ದರೆ ಮತ್ತೊಂದು ಕಡೆ ಏಪ್ರಿಲ್ 22ರಂದು ಇರಾನ್ ಮತ್ತು ಯುಎಸ್ ನಡುವೆ ಘೋಷಣೆಯಾಗಿರೋ ಕದನ ವಿರಾಮ ಮುಗಿಯಲಿದೆ. ಒಂದು ವೇಳೆ ಇರಾನ್ ಶಾಂತಿ ಒಪ್ಪಂದಕ್ಕೆ ಒಪ್ಪದಿದ್ದಲ್ಲಿ ದೊಡ್ಡ ಮಟ್ಟದ ಬಾಂಬ್‌ಗಳ ಸುರಿಮಳೆ ಇರಾನ್ ಮೇಲೆ ಆಗಲಿದೆ. ಇರಾನ್ ಪ್ರಮುಖ ವಿದ್ಯುತ್ ಸ್ಥಾವರಗಳು, ಸೇತುವೆಗಳು ನೆಲಸಮವಾಗಲಿವೆ ಎಂದು ಟ್ರಂಪ್ ಗುಡುಗಿದ್ದಾರೆ. ಅಲ್ಲದೇ ಯಾವುದೇ ಕಾರಣಕ್ಕೂ ಇರಾನ್ ಅಣು ಶಕ್ತಿಯನ್ನು ಹೊಂದುವಂತಿಲ್ಲ ಎಂದು ಮತ್ತೊಮ್ಮೆ ಎಚ್ಚರಿಕೆ ಕೊಟ್ಟಿದ್ದಾರೆ.
ಅಮೆರಿಕದ ವಿಪಕ್ಷಗಳು ಇಸ್ರೇಲ್ ಅಮೆರಿಕವನ್ನು ಅನಗತ್ಯವಾಗಿ ಯುದ್ಧಕ್ಕೆ ಎಳೆದು ತಂದಿದೆ ಎಂಬ ಆರೋಪಗಳಿಗೆ ಉತ್ತರಿಸಿರುವ ಡೊನಾಲ್ಡ್ ಟ್ರಂಪ್, ಇಸ್ರೇಲ್ ನನ್ನ ಜೊತೆ ಇರಾನ್ ವಿರುದ್ಧದ ಯುದ್ಧದ ಬಗ್ಗೆ ಎಂದಿಗೂ ಮಾತನಾಡಿಲ್ಲ. ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ನಡೆದ ದಾಳಿ ಉದ್ದೇಶವೇ ಹಾಗಿದೆ. ಇರಾನ್ ಅನ್ನು ಎಂದಿಗೂ ನ್ಯೂಕ್ಲಿಯರ್ ಶಕ್ತಿ ಹೊಂದಲು ಬಿಡುವುದಿಲ್ಲ ಎಂದು ಟ್ರಂಪ್ ಟ್ರುತ್‌ನಲ್ಲಿ ಬರೆದುಕೊಂಡಿದ್ದಾರೆ.

























