ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರ ಬಂಡಾಯ
ಬೆಂಗಳೂರು: ದಾವಣಗೆರೆ ಉಪಚುನಾವಣೆ ಹಿನ್ನೆಲೆಯಲ್ಲಿ ಶುರುವಾಗಿರುವ ಕಾಂಗ್ರೆಸ್ಸಿನ ಮುಸ್ಲಿಂ ನಾಯಕರ ಬಂಡಾಯ ಸದ್ಯಕ್ಕೆ ಶಮನವಾಗುವಂತೆ ಕಾಣಿಸುತ್ತಿಲ್ಲ. ಇದೀಗ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ಎಂಎಲ್‌ಸಿ ನಜೀರ್ ಅಹ್ಮದ್ ರಾಜೀನಾಮೆ ನೀಡಿದ್ದಾರೆ.
ನಜೀರ್ ಅಹ್ಮದ್ ಅವರು ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿ ಪತ್ರವನ್ನು ಸಿಎಂ ಸಿದ್ದರಾಮಯ್ಯನವರಿಗೆ ರವಾನಿಸಿದ್ದಾರೆ.
ಸೋಮವಾರ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಕೊಡುವಂತೆ ನಜೀರ್ ಅಹ್ಮದ್‌ಗೆ ಡೆಡ್‌ಲೈನ್ ನೀಡಿದ್ದರು. ಜೊತೆಗೆ ಸಂಜೆಯೊಳಗೆ ರಾಜೀನಾಮೆ ನೀಡಬೇಕೆಂದು ಸೂಚಿಸಿದ್ದರು.
ಒಂದು ವೇಳೆ ಸಂಜೆಯೊಳಗೆ ನಜೀರ್ ಅಹಮ್ಮದ್ ರಾಜೀನಾಮೆ ಕೊಡದಿದ್ದರೆ ಅವರನ್ನು ರಾಜಕೀಯ ಕಾರ್ಯದರ್ಶಿ ಸ್ಥಾನದಿಂದ ವಜಾ ಮಾಡಲು ಸಿಎಂ ಸಿದ್ದರಾಮಯ್ಯ ಅವರಿಗೆ ಸೂಚಿಸುವುದಾಗಿ ತಿಳಿಸಿದ್ದರು. ಕಡೆ ಗಳಿಗೆಯಲ್ಲಿ ನಜೀರ್ ಅಹಮ್ಮದ್ ರಾಜೀನಾಮೆ ಪತ್ರ ರವಾನಿಸಿದ್ದಾರೆ.

























