ಬಾಡಿಗೆ ರೂಮ್‌ನಲ್ಲಿದ್ದುಕೊಂಡು ಡ್ರಗ್ಸ್ ದಂಧೆ ನಡೆಸುತ್ತಿದ್ದ ವಿದ್ಯಾರ್ಥಿಗಳು
ಮಂಗಳೂರು: ಶೈಕ್ಷಣಿಕ ನಗರಿ ಮಂಗಳೂರಿನಲ್ಲಿ ವಿದ್ಯಾರ್ಥಿಗಳನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿದ್ದ ಮಾದಕ ವಸ್ತು ಜಾಲದ ವಿರುದ್ಧ ಪೊಲೀಸರು ಭಾರಿ ಕಾರ್ಯಾಚರಣೆ ನಡೆಸಿದ್ದಾರೆ. ಮಾದಕ ವಸ್ತು ಮಾರಾಟ ಜಾಲದಲ್ಲಿ ತೊಡಗಿದ್ದ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಇವರಿಂದ ಹಲವು ಮಾಹಿತಿಗಳು ಲಭ್ಯವಾಗಿವೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.
ವಿದ್ಯಾರ್ಥಿಯ ಪೋಷಕರೊಬ್ಬರು ತನ್ನ ಮಗನ ಬಳಿ ಸಣ್ಣ ಪ್ಯಾಕೆಟ್ ಗಾಂಜಾ ಸಿಕ್ಕಿದೆ ಎಂದು ಮಾಹಿತಿ ಪೊಲೀಸರಿಗೆ ಕೊಟ್ಟಿದ್ದರು. ಇವರಿಗೆ ಯಾರು ವಿತರಣೆ ಮಾಡ್ತಿದ್ದಾರೆ ಎಂದು ಪರಿಶೋಧಿಸಿದಾಗ ಐವರು ವಿದ್ಯಾರ್ಥಿಗಳು ಬೇರೆ ಬೇರೆ ಕಾಲೇಜಿನ ಹಾಸ್ಟೆಲ್‌ನಲ್ಲಿರದೆ ಹೊರಗಡೆ ರೂಂ ಪಡೆದು ಅಲ್ಲಿಂದಲೇ ಬೇರೆ ಕಡೆಯಿಂದ ಮಾದಕ ವಸ್ತುಗಳನ್ನು ತಂದು ಪ್ಯಾಕೆಟ್ ಮಾಡಿ ವಿತರಣೆ ಮಾಡುತ್ತಿದ್ದಾರೆಂದು ಗೊತ್ತಾಯಿತು. ಇವರು ವಿತರಣೆ ಮಾಡುತ್ತಿದ್ದ ಲಿಂಕ್‌ನಲ್ಲಿ ಆರು ಕಾಲೇಜಿನ ಸುಮಾರು 40 ಮಂದಿ ವಿದ್ಯಾರ್ಥಿಗಳು, ಹತ್ತು ಜನ ಬೇರೆ ಹೊರಗಿನವರು ಇದ್ದಾರೆಂದು ಗೊತ್ತಾಯಿತು. ಈ ಕುರಿತಂತೆ ವಿದ್ಯಾರ್ಥಿಗಳನ್ನು ಹಾಗೂ ಅವರ ಪೋಷಕರನ್ನು ಕೌನ್ಸೆಲಿಂಗ್ ಮಾಡಿಸಲಾಗುವುದು ಎಂದು ಹೇಳಿದ್ದಾರೆ.
ಪೋಷಕರಲ್ಲಿ ವಿನಂತಿ ನಿಮ್ಮ ಮಕ್ಕಳ ನಡತೆಯಲ್ಲಿ ಬದಲಾವಣೆ ಇದ್ದರೆ ಅದನ್ನು ಗಮನಿಸಬೇಕು. ಏನಾದರೂ ಸಮಸ್ಯೆ ಇದ್ದರೆ ಪೊಲೀಸರಿಗೆ ತಿಳಿಸಿ. ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲಿರದೆ ಹೊರಗಡೆ ರೂಂನಲ್ಲಿ ಇರುತ್ತಿದ್ದರೆ ಅವರು ಯಾವ ಕಾರಣಕ್ಕಿದ್ದಾರೆ? ಏನಾದರೂ ಸಮಸ್ಯೆ ಇದೆಯಾ ಎನ್ನುವುದನ್ನು ಮಾನಿಟರ್ ಮಾಡಿಕೊಳ್ಳಿ. ಪೋಷಕರು ಹಾಗೂ ಕಾಲೇಜಿನವರು ಸೇರಿ ಮಾನಿಟರ್ ಮಾಡುತ್ತಿದ್ದರೆ ಇಂಥ ಸಮಸ್ಯೆ ಬರುವುದಿಲ್ಲ. ಯಾವುದೇ ಮಾಹಿತಿ ಅನುಮಾನ ಬಂದ ತಕ್ಷಣ ಪೊಲೀಸ್ ಸ್ಟೇಷನ್‌ಗೆ ಬಂದ್ರೆ ಸಮಸ್ಯೆಯನ್ನು ಪೂರ್ಣವಾಗಿ ನಿವಾರಿಸಲು ಸಾಧ್ಯವಾಗುತ್ತದೆ ಎಂದು ಕಮಿಷನರ್ ಕಿವಿ ಮಾತು ಹೇಳಿದ್ದಾರೆ.

























