ರೌಡಿಶೀಟರ್‌ ಆರಿಫ್‌ ಕೊಲೆ ಪ್ರಕರಣ : 7 ಆರೋಪಿಗಳ ಬಂಧನ

ಮಾ.27ರಂದು ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಕೊಲೆಯಾಗಿದ್ದ ಆರಿಫ್‌

ಮಂಗಳೂರು: ಕಿನ್ಯ ಅಜ್ಜಿನಡ್ಕ ನಿವಾಸಿ ರೌಡಿಶೀಟರ್ ಆರಿಫ್ ಕೊಲೆ ಪ್ರಕರಣದ ಏಳು ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳನ್ನು ಹಲ್ಲೆಯಲ್ಲಿ ನೇರವಾಗಿ ಭಾಗಿಯಾಗಿದ್ದ ರಿಫಾತ್, ಜುಟ್ಟು ಅಶ್ಫಾಕ್, ಖಲೀಲ್, ಶಾಕಿರ್, ಇರ್ಫಾನ್ ಮತ್ತು ರಿಜ್ವಾನ್ ಕೊಲೆಕೃತ್ಯಕ್ಕೆ ಸಹಕರಿಸಿದ ಇರ್ಷಾದ್ ಎಂದು ಗುರುತಿಸಲಾಗಿದೆ.

ಮಾರ್ಚ್ 27ರ ನಸುಕಿನ ಹೊತ್ತು ಆರಿಫ್ ತನ್ನ ಬೈಕ್‌ನಲ್ಲಿ ಬಂದರ್ ಮೀನು ಮಾರುಕಟ್ಟೆಯ ಕಡೆಗೆ ಪ್ರಯಾಣಿಸುತ್ತಿದ್ದಾಗ ತೊಕ್ಕೊಟ್ಟು ಫ್ಲೈಓವರ್ ತಲುಪುತ್ತಿದ್ದಂತೆ ಹಿಂಬಾಲಿಸಿಕೊಂಡು ಬಂದ ಇನ್ನೊವಾ ಕಾರು ಉದ್ದೇಶಪೂರ್ವಕವಾಗಿ ಹಿಂದಿನಿಂದ ಅವರ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದಿದೆ. ಆರಿಫ್ ನೆಲಕ್ಕೆ ಬಿದ್ದಾಗ, ಮಾರಕ ಆಯುಧಗಳನ್ನು ಹೊಂದಿದ್ದ ಗುಂಪು ಅವರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ ಹತ್ಯೆಗೈದು ಸ್ಥಳದಿಂದ ಪರಾರಿಯಾಗಿತ್ತು.























































 
 

ಈ ಭೀಕರ ಹತ್ಯೆಯ ವ್ಯವಸ್ಥಿತ ಸಂಚು ತನಿಖೆಯಿಂದ ಬಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಬಂಧಿತರಲ್ಲಿ ಒಬ್ಬನಾದ ಇರ್ಷಾದ್ ಹಂತಕರಿಗೆ ವಸತಿ ವ್ಯವಸ್ಥೆ ಮಾಡುವಲ್ಲಿ ಮತ್ತು ಅವರನ್ನು ಅಪರಾಧ ಸ್ಥಳಕ್ಕೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ. ಪ್ರಾಥಮಿಕ ತನಿಖೆಗಳು ಹಳೆಯ ದ್ವೇಷವೇ ಕೊಲೆಗೆ ಪ್ರಮುಖ ಕಾರಣ ಎಂದು ಕಂಡು ಬಂದಿದೆ.

ಆರೋಪಿಗಳ ಪ್ರಯಾಣ ಮತ್ತು ವಾಸ್ತವ್ಯಕ್ಕೆ ಅಗತ್ಯವಾದ ಆರ್ಥಿಕ ನೆರವನ್ನು ವಿದೇಶದಲ್ಲಿ ನೆಲೆಸಿರುವ ಮುಸ್ತಫಾ ಮತ್ತು ಅಶ್ವೀರ್ ಒದಗಿಸಿದ್ದಾರೆ ಎಂದು ತನಿಖೆ ದೃಢಪಡಿಸಿದೆ. ಪ್ರಕರಣದಲ್ಲಿ ಇನ್ನೂ ಹೆಚ್ಚಿನ ಜನರು ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಪ್ರಸ್ತುತ ತಲೆಮರೆಸಿಕೊಂಡಿರುವ ಉಳಿದ ಆರೋಪಿಗಳನ್ನು ಬಂಧಿಸಲು ಶೋಧ ಕಾರ್ಯ ಆರಂಭಿಸಲಾಗಿದೆ.

error: Content is protected !!
Scroll to Top