ಲೆಬನಾನ್‌ ಮೇಲೆ ಇಸ್ರೇಲ್‌ ಭೀಕರ ದಾಳಿ : 250ಕ್ಕೂ ಹೆಚ್ಚು ಮಂದಿ ಸಾವು

10 ನಿಮಿಷದಲ್ಲಿ 100ಕ್ಕೂ ಹೆಚ್ಚು ಕ್ಷಿಪಣಿ ಅಟ್ಯಾಕ್‌

ಹೊರ್ಮುಜ್‌ ಜಲಸಂಧಿಯನ್ನು ಮತ್ತೆ ಮುಚ್ಚಿದ ಇರಾನ್‌

ಟೆಲ್‌ ಅವಿವ್‌: ಕದನ ವಿರಾಮ ಘೋಷಣೆಯಾಗಿದ್ದರೂ ಇದನ್ನು ಕ್ಯಾರೇ ಮಾಡದ ಇಸ್ರೇಲ್‌ ವಾಯುಪಡೆ ಲೆಬನಾನ್‌ ಮೇಲೆ ಕೇವಲ 10 ನಿಮಿಷಗಳಲ್ಲಿ 100 ಕ್ಷಿಪಣಿ ದಾಳಿ ನಡೆಸಿದೆ. ಇದನ್ನು ಈ ಯುದ್ಧದ ಅತ್ಯಂತ ದೊಡ್ಡ ಸಂಘಟಿತ ದಾಳಿ ಎಂದು ಇಸ್ರೇಲ್ ಬಣ್ಣಿಸಿದೆ. ಈ ಬೆಳವಣಿಗೆ ಬೆನ್ನಲ್ಲೇ ಇರಾನ್‌ ಹೊರ್ಮುಜ್‌ ಜಲಸಂಧಿಯನ್ನು ಮತ್ತೆ ಮುಚ್ಚಿದೆ.























































 
 

ರಾಜಧಾನಿ ಬೈರೂತ್ ಮಧ್ಯಭಾಗ, ಬೆಕಾ ವ್ಯಾಲಿ ಮತ್ತು ದಕ್ಷಿಣ ಲೆಬನಾನ್‌ನ ಹಿಜ್ಬುಲ್ಲಾ ಕಮಾಂಡ್ ಕೇಂದ್ರಗಳು ಹಾಗೂ ಶಸ್ತ್ರಾಸ್ತ್ರ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದೆ. ಲೆಬನಾನ್ ಆರೋಗ್ಯ ಸಚಿವಾಲಯದ ವರದಿ ಪ್ರಕಾರ ಈ ಭೀಕರ ದಾಳಿಯಲ್ಲಿ ಕನಿಷ್ಠ 254 ಜನರು ಸಾವನ್ನಪ್ಪಿದ್ದಾರೆ ಮತ್ತು 800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಅಮೆರಿಕ ಮತ್ತು ಇರಾನ್ ನಡುವೆ ಕದನ ವಿರಾಮ ಘೋಷಣೆಯಾದ ಕೆಲವೇ ಗಂಟೆಗಳಲ್ಲಿ ಈ ದಾಳಿ ನಡೆದಿವುದು ವಿಶೇಷ. ಲೆಬನಾನ್ ಮೇಲಿನ ಕಾರ್ಯಾಚರಣೆಗೆ ಈ ಕದನ ವಿರಾಮ ಅನ್ವಯಿಸುವುದಿಲ್ಲ ಎಂದು ಇಸ್ರೇಲ್ ಪ್ರಧಾನಿ ನೆತನ್ಯಾಹು ಸ್ಪಷ್ಟಪಡಿಸಿದ್ದಾರೆ.

ಇಸ್ರೇಲ್‌ನ ದಾಳಿಗಳಿಗೆ ಪ್ರತಿಯಾಗಿ ಹಿಜ್ಬುಲ್ಲಾ ಉಗ್ರ ಸಂಘಟನೆ ಕೂಡ ಉತ್ತರ ಇಸ್ರೇಲ್‌ನ ಸೇನಾ ನೆಲೆಗಳು ಮತ್ತು ಹೈಫಾ ತೈಲ ಸಂಸ್ಕರಣಾಗಾರದ ಮೇಲೆ ಕ್ಷಿಪಣಿ ದಾಳಿಗಳನ್ನು ನಡೆಸಿದೆ. ಈ ಸಂಘರ್ಷದಿಂದಾಗಿ ಲೆಬನಾನ್‌ನಲ್ಲಿ ಈವರೆಗೆ 1,500ಕ್ಕೂ ಹೆಚ್ಚು ಜನರು ಬಲಿಯಾಗಿದ್ದಾರೆ.

ವಿಧ್ವಕ್ಕೆ ತೈಲ ಪೂರೈಸುವ ಪ್ರಮುಖ ಜಲಮಾರ್ಗವಾದ ಹೊರ್ಮುಜ್‌ ಜಲಸಂಧಿಯನ್ನು ಮತ್ತೆ ಮುಚ್ಚಲಾಗಿದೆ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಸುದ್ದಿಸಂಸ್ಥೆ ಫಾರ್ಸ್‌ ವರದಿ ಮಾಡಿದೆ. ಇಸ್ರೇಲ್‌ ಕದನ ವಿರಾಮ ಉಲ್ಲಂಘಿಸಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಜಲಸಂಧಿಯನ್ನು ಮುಚ್ಚುವ ಮೊದಲು ಎರದು ಹಡಗುಗಳಿಗೆ ಹಾದುಹೋಗಲು ಅನುಮತಿ ನೀಡಲಾಗಿತ್ತು. ಜಲಸಂಧಿಯನ್ನು ಕೂಡಲೇ ತೆರೆಯಬೇಕೆಂದು ಟ್ರಂಫ್‌ ಹೇಳಿದ್ದಾರೆ.

error: Content is protected !!
Scroll to Top