ಟ್ರೆಕ್ಕಿಂಗ್‌ಗೆ ಹೋಗಿ ದಾರಿ ತಪ್ಪಿ ಕಾಡಿನ ಪಾಳು ಬಂಗಲೆಯಲ್ಲಿದ್ದ ಕೇರಳದ ಯುವತಿ
ಮಡಿಕೇರಿ: ತಡಿಯಂಡಮೋಳ ಬೆಟ್ಟಕ್ಕೆ ಚಾರಣಕ್ಕೆ ತೆರಳಿ ನಾಪತ್ತೆಯಾಗಿದ್ದ ಕೇರಳ ಮೂಲದ ಐಟಿ ಉದ್ಯೋಗಿ ಶರಣ್ಯ ಎಂಬಾಕೆ ನಾಲ್ಕು ದಿನಗಳ ಸತತ ಹುಡುಕಾಟದ ಬಳಿಕ ಕೊನೆಗೂ ಪತ್ತೆ ಆಗಿದ್ದಾರೆ. ಆ ಮೂಲಕ ನಾಲ್ಕು ದಿನಗಳ ಕಾರ್ಯಾಚರಣೆ ಯಶಸ್ವಿ ಆಗಿದ್ದು, ಪೊಲೀಸರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ. ರಸ್ತೆ ಅರಿವಾಗದೆ ಪಾಳುಬಿದ್ದ ಬಂಗಲೆಯೊಂದರಲ್ಲಿ ಶರಣ್ಯ ಉಳಿದುಕೊಂಡಿದ್ದರು. ಸ್ಥಳೀಯ ಕುಡಿಯ ಯುವಕರು ಅವರನ್ನು ರಕ್ಷಿಸಿ ಕಾಡಿನಿಂದ ಹೊರಗೆ ಕರೆತಂದಿದ್ದಾರೆ.
ಕೇರಳದಿಂದ ಕೊಡಗು ಜಿಲ್ಲೆಗೆ ಚಾರಣಕ್ಕಾಗಿ ಬಂದು ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದರು. ದಾರಿ ತಪ್ಪಿ ಕಾಡಿನಲ್ಲಿ ಕಳೆದುಹೋಗಿದ್ದ ಶರಣ್ಯಗಾಗಿ ಬುಡಕಟ್ಟು ಜನಾಂಗದ ಜೊತೆ ಅರಣ್ಯ ಸಿಬ್ಬಂದಿ 4 ದಿನದಿಂದ ನಿರಂತರ ಹುಡುಕಾಟ ನಡೆಸಿದ್ದರು.
ಯುವತಿ ಶರಣ್ಯ ಕಾಡಿನಲ್ಲಿ ನಡೆದು ನಡೆದು ಪಾಳುಬಿದ್ದ ಬಂಗಲೆ ಸೇರಿದ್ದರು. ರಸ್ತೆ ಅರಿವಾಗದೆ ಅಲ್ಲೇ ಉಳಿದಿದ್ದರು. ಏಪ್ರಿಲ್ 2ರಿಂದ ಕಾಡಿನಲ್ಲಿ ಅಲೆದು ನಿತ್ರಾಣಗೊಂಡಿದ್ದ ಶರಣ್ಯರನ್ನುಯಶಸ್ವಿಯಾಗಿ ರಕ್ಷಣೆ ಮಾಡಲಾಗಿದೆ.
35 ವರ್ಷದ ಶರಣ್ಯ ಕೇರಳದ ಕೋಯಿಕ್ಕೋಡ್ ನಿವಾಸಿ ಹಾಗೂ ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿದ್ದಾರೆ. ಗುರುವಾರ ಬೆಳಗ್ಗೆ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದಕ್ಕೆ ಆಗಮಿಸಿದ್ದ ಈಕೆ ಬೆಳಗ್ಗೆ 8.30ರ ಸುಮಾರಿಗೆ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಹೋಗುವ ಅರಣ್ಯ ಇಲಾಖೆಯ ಚೆಕ್ಪೋಸ್ಟ್ಗೆ ಆಗಮಿಸಿದ್ದರು. ಆದರೆ ಒಬ್ಬೊಬ್ಬರನ್ನೇ ಟ್ರೆಕ್ಕಿಂಗ್ ಬಿಡುವುದಿಲ್ಲ ಎಂಬ ಕಾರಣಕ್ಕೆ ಬೇರೊಂದು ಗ್ರೂಪ್ ಬಂದ ಬಳಿಕ ಅವರ ಜೊತೆ ಈಕೆಯನ್ನು ಕಳುಹಿಸಲಾಗಿತ್ತು.
ಮಧ್ಯಾಹ್ನ 1.30ರ ಸುಮಾರಿಗೆ ಈಕೆ ಇದೇ ಚೆಕ್‌ಪೋಸ್ಟ್ ಬಳಿಗೆ ಹಿಂದಿರುಗಬೇಕಿತ್ತು. ಈಕೆಯನ್ನ ಕರೆತರಲೆಂದು ಹೋಮಸ್ಟೇ ಮಾಲಿಕ ನಂದ ತಮ್ಮ ಸ್ಕೂಟಿಯಲ್ಲಿ ಇಲ್ಲಿಗೆ ಬಂದು ಕರೆ ಮಾಡಿದಾಗ ನಾಟ್ ರೀಚೇಬಲ್ ಬಂದಿದೆ. ಮತ್ತೆರಡು ಬಾರಿ ಪ್ರಯತ್ನಿಸಿದಾಗ ಕರೆ ಸ್ವೀಕರಿಸಿದ ಆಕೆ ತಾನು ದಾರಿ ತಪ್ಪಿದ್ದೇನೆ ಎಂದು ಹೇಳಿದ್ದಳು. ಸಿಬ್ಬಂದಿ ಕಾರ್ಯಾಚರಣೆ ನಡೆಸಿದರೂ ಸುಳಿವು ಸಿಕ್ಕಿರಲಿಲ್ಲ.
ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ 40ಕ್ಕೂ ಅಧಿಕ ಸಿಬ್ಬಂದಿ, ಸ್ಥಳೀಯರು ಸೇರಿ ಮತ್ತೆ ಕಾರ್ಯಾಚರಣೆ ಮಾಡಿದ್ದರು. ಶ್ವಾನ ದಳವನ್ನೂ ಕರೆಸಿದರೂ ಸುಳಿವು ಸಿಕ್ಕಿರಲಿಲ್ಲ. ಶರಣ್ಯ ಸುರಕ್ಷಿತವಾಗಿ ಮರಳಿ ಬರಲೆಂದು ಬೆಟ್ಟ ಪ್ರದೇಶದಲ್ಲಿ ವಾಸಿಸುವ ಕುಡಿಯ ಜನಾಂಗ ಮಲೆ ತಮ್ಮಚ್ಚ ದೇವರಿಗೆ ಹರಕೆ ಕೂಡ ಹೊತ್ತಿದ್ದರು. ಇದೀಗ ನಿರಂತರ ಶೋಧ ಬೆನ್ನಲ್ಲೇ ಯುವತಿ ಪತ್ತೆ ಆಗಿದ್ದಾರೆ.

























