ಮೈಸೂರು: ನೀನು ಓದಬಾರದು ಎಂದು ಹೇಳಿ ಪರೀಕ್ಷೆ ಬರೆಯಲು ಹೋಗಿ ಬಂದ ವಿದ್ಯಾರ್ಥಿನಿಯ ಮೇಲೆ ಸೋದರ ಮಾವ ದೊಣ್ಣೆಯಿಂದ ಹಲ್ಲೆ ನಡೆಸಿರುವ ಘಟನೆ ನಂಜನಗೂಡಿನ ಪಾಳ್ಯಾ ಎಂಬಲ್ಲಿ ನಡೆದಿದೆ.
ಹಲ್ಲೆಗೆೊಳಗಾದ ವಿದ್ಯಾರ್ಥಿನಿಯನ್ನು ಪೂರ್ಣಿಮಾ ಎಂದು ಗುರುತಿಸಲಾಗಿದೆ. ಆಕೆ ದ್ವಿತೀಯ ಪಿಯುಸಿ ಪರೀಕ್ಷೆ ಬರೆದು ಮನೆಗೆ ಬಂದಿದ್ದು, ಆವೇಳೆ ಮನೆಗೆ ನುಗ್ಗಿದ ಸೋದರ ಮಾವ ಆಕೆಯ ಮೇಲೆ ಹಲ್ಲೆ ಮಾಡಿರುವುದಾಗಿದೆ.
ಹಳೆಯ ದ್ವೇಷದ ಕಾರಣಕ್ಕೆ ಆತ ಹಲ್ಲೆ ನಡೆಸಿದ್ದಾಗಿ ತಿಳಿದು ಬಂದಿದೆ. ಈ ವೇಳೆ ವಿದ್ಯಾರ್ಥಿನಿಯನ್ನು ಕಾಪಾಡಲು ಬಂದ ಕುಟುಂಬದ ಸದಸ್ಯರ ಮೇಲೆಯೂ ಆತ ಹಲ್ಲೆ ನಡೆಸಿದ್ದಾನೆ. ಆಕೆ ಓದಬಾರದು, ಅವಳ ಭವಿಷ್ಯ ಚೆನ್ನಾಗಿ ಇರಬಾರದು ಎನ್ನುವ ಉದ್ದೇಶದಿಂದ ಆತ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದೆ. ಪೂರ್ಣಿಮಾಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಆಕೆಯ ಸೋದರ ಮಾವ ಆರೋಪಿ ಸೋಮಣ್ಣ ಸೇರಿದಂತೆ ಒಟ್ಟು ಏಳು ಜನರ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
























