ಬೀದರ್: ಪತ್ನಿಗೆ ಅನೈತಿಕ ಸಂಬಂಧ ಇರುವ ಸಂದೇಹದಲ್ಲಿ ಗಂಡನೊಬ್ಬ ಆಕೆಯ ಮೇಲೆ ಕಲ್ಲು ಎತ್ತಿ ಹಾಕಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಮನ್ನಳ್ಳಿ ಗ್ರಾಮದಲ್ಲಿ ನಡೆದಿದೆ.
ಮೃತ ಮಹಿಳೆಯನ್ನು ಅಶ್ವಿನಿ(28) ಎಂದು ಗುರುತಿಸಲಾಗಿದೆ. ಕಿಶನ್ ಎಂಬವನೇ ಆರೋಪಿ.
ಕಿಶನ್ ಮಹಾರಾಷ್ಟ್ರದ ಡಾಬಾ ಒಂದರಲ್ಲಿ ಕೆಲಸ ಮಾಡುತ್ತಿದ್ದ. ಅಶ್ವಿನಿ ಮೂವರು ಮಕ್ಕಳ ಜೊತೆಗೆ ಮನ್ನಳ್ಳಿಯಲ್ಲೇ ವಾಸವಿದ್ದಳು. ಕಿಶನ್ ತನ್ನ ಪತ್ನಿಗೆ ಅಕ್ರಮ ಸಂಬಂಧ ಇದೆ ಎಂದು ಹೇಳಿ ಪ್ರತಿನಿತ್ಯ ಆಕೆಯ ಜೊತೆಗೆ ಜಗಳವಾಡುತ್ತಿದ್ದ. ಬೇರೊಬ್ಬ ವ್ಯಕ್ತಿಯ ಜೊತೆ ಆಕೆ ಸಂಬಂಧ ಆರಿಸಿಕೊಂಡ ಅನುಮಾನ ಅವನಲ್ಲಿ ಮನೆ ಮಾಡಿತ್ತು.
ಕೆಲ ದಿನಗಳ ಹಿಂದಷ್ಟೇ ಪತಿ ತನ್ನ ಶೀಲ ಶಂಕಿಸಿ ಜಗಳವಾಡುತ್ತಿರುವ ಬಗ್ಗೆ ಅಶ್ವಿನಿ ತನ್ನ ಪೋಷಕರಿಗೆ ತಿಳಿಸಿದ್ದಳು. ಅವರು ಕಿಶನ್ಗೆೆ ಬುದ್ಧಿವಾದ ಹೇಳುವ ಕೆಲಸವನ್ನೂ ಮಾಡಿದ್ದರು. ಆದರೆ ಮರುದಿನವೇ ಜಗಳ ವಿಕೋಪಕ್ಕೆ ಹೋಗಿ ಆತ ಕಲ್ಲು ಎತ್ತಿ ಹಾಕಿ ಪತ್ನಿಯನ್ನು ಕೊಂದಿದ್ದಾನೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
























