ಮುಡಾ ಹಗರಣ : 22 ಕೋಟಿ ರೂ. ಲಂಚ ನುಂಗಿದ ಮಾಜಿ ಆಯುಕ್ತ

700 ಕೋ. ರೂ. ಮೌಲ್ಯದ 1,095 ನಿವೇಶನಗಳು ಅಕ್ರಮವಾಗಿ ಮಂಜೂರು

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸುತ್ತಿಕೊಂಡಿದ್ದ ಮುಡಾ ಹಗರಣದ ಒಂದೊಂದೇ ಭ್ರಷ್ಟಾಚಾರ ಈಗ ಬಯಲಾಗತೊಡಗಿದೆ. ಜಾರಿ ನಿರ್ದೇಶನಾಲಯದ ತನಿಖೆಯಲ್ಲಿ ಮುಡಾದ ಮಾಜಿ ಆಯುಕ್ತ ಜಿಟಿ ದಿನೇಶ್ ಕುಮಾರ್ ತಮ್ಮ ಅಧಿಕಾರಾವಧಿಯಲ್ಲಿ 140 ಕೋಟಿ ರೂ. ಮೌಲ್ಯದ 283 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದ್ದರು ಮತ್ತು ಅದಕ್ಕಾಗಿ 22.47 ಕೋಟಿ ರೂ. ಲಂಚ ಪಡೆದಿದ್ದರು ಎಂಬುದು ತಿಳಿದುಬಂದಿದೆ.

ಮನಿ ಲಾಂಡರಿಂಗ್ ಆ್ಯಕ್ಟ್ (ಪಿಎಂಎಲ್‌ಎ) ಅಡಿಯಲ್ಲಿ ನಡೆಸಲಾದ ತನಿಖೆಯಲ್ಲಿ ಸುಮಾರು 700 ಕೋಟಿ ರೂ. ಮೌಲ್ಯದ 1,095 ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಲಾಗಿರುವುದು ಪತ್ತೆಯಾಗಿದೆ ಎಂದು ಮೂಲಗಳು ತಿಳಿಸಿವೆ. ಈ 1,095 ನಿವೇಶನಗಳ ಪಟ್ಟಿಯನ್ನು ಹಾಲಿ ಮುಡಾ ಆಯುಕ್ತರು ತನಿಖೆ ವೇಳೆ ಇ.ಡಿಗೆ ಸಲ್ಲಿಸಿದ್ದಾರೆ.





















































 
 

ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಇಡೀ ಹಗರಣದ ಸೂತ್ರಧಾರಿ ಎಂಬುದು ಇಡಿ ತನಿಖೆಯಿಂಗ ಗೊತ್ತಾಗಿದೆ. ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲು ಅವರು ನಗದು, ಚರ ಮತ್ತು ಸ್ಥಿರ ಆಸ್ತಿಗಳ ರೂಪದಲ್ಲಿ ಲಂಚ ಪಡೆದಿದ್ದಾರೆ ಎಂಬುದು ಬಹಿರಂಗವಾಗಿದೆ. ದಿನೇಶ್ ಕುಮಾರ್ ಪಡೆದ 22.47 ಕೋಟಿ ರೂ. ಲಂಚದ ಪೈಕಿ, 34.65 ಲಕ್ಷ ರೂ. ನಗದು ಆಗಿದೆ. ಹೈ ಸೆಕ್ಯೂರಿಟಿ ಬಾಂಡ್ ಪೇಪರ್​ಗಳನ್ನು ದುರುಪಯೋಗಪಡಿಸಿಕೊಂಡು 8.28 ಕೋಟಿ ರೂ. ಪಡೆದಿದ್ದಾರೆ. ಚಾಮುಂಡೇಶ್ವರಿ ನಗರ ಸರ್ವೋದಯ ಸಂಘದ ಸದಸ್ಯರ ಮೂಲಕ 5.86 ಕೋಟಿ ರೂ., ಅಬ್ದುಲ್ ವಹೀದ್ ಅವರಿಂದ 3.62 ಕೋಟಿ ರೂ., ಕ್ಯಾಥೆಡ್ರಲ್ ಪ್ಯಾರಿಷ್ ಸೊಸೈಟಿಯಿಂದ 1.70 ಕೋಟಿ ರೂ., ನಿಂಗಮ್ಮ ಅವರಿಂದ 1.13 ಕೋಟಿ ರೂ., ಜೆಎಸ್‌ಎಸ್ ಮಹಾವಿದ್ಯಾಪೀಠ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದಿಂದ 1.02 ಕೋಟಿ ರೂ. ಮತ್ತು ನಿಂಗಮ್ಮ ಅವರಿಂದ 49 ಲಕ್ಷ ರೂ.ಗಳನ್ನು ಪಡೆದಿದ್ದಾರೆ. ಈ ಮೊತ್ತವನ್ನು ಪರಿಹಾರ ನಿವೇಶನಗಳನ್ನು ಅಕ್ರಮವಾಗಿ ಹಂಚಿದ್ದಕ್ಕೆ ಪ್ರತಿಯಾಗಿ ಪಡೆದಿದ್ದಾರೆ ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ.

ಅಕ್ರಮ ನಿವೇಶನ ಹಂಚಿಕೆ ಮತ್ತು ಮಾರಾಟದ ಮೂಲಕ ಅಕ್ರಮವಾಗಿ ಹಣ ಗಳಿಸಿದವರಲ್ಲಿ ಹಲವಾರು ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳು ಶಾಮೀಲಾಗಿರುವುದು ಕಂಡುಬಂದಿದೆ.

error: Content is protected !!
Scroll to Top