ಗೃಹ ಸಚಿವ, ರಕ್ಷಣಾ ಸಚಿವ, ರಾಜ್ಯಪಾಲರಾಗಿ ಸೇವೆ ಸಲ್ಲಿಸಿದ್ದ ಪಾಟೀಲ್
ಮುಂಬಯಿ: ಕೇಂಧ್ರದ ಮಾಜಿ ಕೇಂದ್ರ ಗೃಹ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಶಿವರಾಜ್ ಪಾಟೀಲ್ ಶುಕ್ರವಾರ ಬೆಳಗ್ಗೆ ಮಹಾರಾಷ್ಟ್ರದ ಲಾತೂರ್ನಲ್ಲಿ ನಿಧನರಾದರು. ಅವರಿಗೆ 91 ವರ್ಷವಾಗಿತ್ತು. ವಯೋಸಹಜ ಕಾಯಿಲೆಗಳಿಂದ ಉಂಟಾದ ದೀರ್ಘಕಾಲದ ಅನಾರೋಗ್ಯದಿಂದಾಗಿ ಪಾಟೀಲ್ ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಅವರ ನಿಧನಕ್ಕೆ ಕಾಂಗ್ರೆಸ್ ಪಕ್ಷದ ನಾಯಕರು, ಕಾರ್ಯಕರ್ತರು ಸೇರಿ ಹಲವು ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ.
ಶಿವರಾಜ್ ಪಾಟೀಲ್ 1980, 1984, 1989, 1991, 1996, 1998 ಮತ್ತು 1999ರಲ್ಲಿ ಗೆಲುವು ಸಾಧಿಸಿದ್ದರು. ನಂತರ 2004ರಲ್ಲಿ ಬಿಜೆಪಿಯ ರೂಪಾತಾಯಿ ಪಾಟೀಲ್ ನೀಲಂಗೇಕರ್ ವಿರುದ್ಧ ಸೋತರು. 1972 ಮತ್ತು 1978ರಲ್ಲಿ ಅವರು ಲಾತೂರ್ ವಿಧಾನಸಭಾ ಸ್ಥಾನದಲ್ಲಿ ಗೆದ್ದಿದ್ದರು.
ಶಿವರಾಜ್ ಪಾಟೀಲ್ ಲೋಕಸಭಾ ಸ್ಪೀಕರ್, ರಕ್ಷಣಾ ಸಚಿವ, ಗೃಹ ಸಚಿವ ಮತ್ತು ಪಂಜಾಬ್ ರಾಜ್ಯಪಾಲರು ಸೇರಿದಂತೆ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿದ್ದರು. ಅಕ್ಟೋಬರ್ 12, 1935ರಂದು ಲಾತೂರ್ ಜಿಲ್ಲೆಯ ಚಾಕೂರ್ ಗ್ರಾಮದಲ್ಲಿ ಜನಿಸಿದ ಶಿವರಾಜ್ ಪಾಟೀಲ್ ಕಾಂಗ್ರೆಸ್ ಮೂಲಕ ಸಕ್ರಿಯವಾಗಿ ರಾಜಕೀಯ ಪ್ರವೇಶಿಸಿದರು. ಅವರು ಲಾತೂರ್ ಲೋಕಸಭಾ ಕ್ಷೇತ್ರದಿಂದ ಏಳು ಬಾರಿ ಗೆದ್ದಿದ್ದರು. 2004ರಲ್ಲಿ ಸೋಲಿನ ನಂತರವೂ ಅವರ ಪ್ರಭಾವ ಕಡಿಮೆಯಾಗಿರಲಿಲ್ಲ. ಅವರು ರಾಜ್ಯಸಭೆಯ ಮೂಲಕ ಕೇಂದ್ರ ರಾಜಕೀಯಕ್ಕೆ ಮರಳಿದರು ಮತ್ತು 2004 ರಿಂದ 2008 ರವರೆಗೆ ಕೇಂದ್ರ ಗೃಹ ಸಚಿವ ಹುದ್ದೆಯನ್ನು ಅಲಂಕರಿಸಿದ್ದರು.
ಇಂದಿರಾ ಗಾಂಧಿ ಮತ್ತು ರಾಜೀವ್ ಗಾಂಧಿ ಅವರ ಸಚಿವ ಸಂಪುಟಗಳಲ್ಲಿ ರಕ್ಷಣಾ ಸಚಿವರಾಗಿ ಪ್ರಮುಖ ಪಾತ್ರ ವಹಿಸಿದ್ದರು. 1991 ರಿಂದ 1996 ರವರೆಗೆ ಲೋಕಸಭೆಯ 10ನೇ ಸ್ಪೀಕರ್ ಆಗಿದ್ದರು. ಗೃಹ ಸಚಿವರಾಗಿ ಸೇವೆ ಸಲ್ಲಿಸಿದ ನಂತರ ಅವರು 2010 ರಿಂದ 2015 ರವರೆಗೆ ಪಂಜಾಬ್ ರಾಜ್ಯಪಾಲರಾಗಿ ಮತ್ತು ಚಂಡೀಗಢದ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದರು.
2008ರ 26/11 ಮುಂಬೈ ಭಯೋತ್ಪಾದಕ ದಾಳಿಯ ನಂತರ ಬೆಳಕಿಗೆ ಬಂದ ಭದ್ರತಾ ಲೋಪಗಳಿಗಾಗಿ ಅವರನ್ನು ವ್ಯಾಪಕವಾಗಿ ಟೀಕಿಸಲಾಯಿತು. ದಾಳಿಯ ಕೇವಲ ಎರಡು ದಿನಗಳ ನಂತರ ಅವರು 2008ರ ನವೆಂಬರ್ 30 ರಂದು ನೈತಿಕ ಹೊಣೆ ಹೊತ್ತುಗೃಹ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಅವಧಿಯಲ್ಲಿ ಅವರು ಒಂದೇ ದಿನದಲ್ಲಿ ಮೂರು ಬಾರಿ ಬಟ್ಟೆ ಬದಲಾಯಿಸಿದ ವಿಚಾರವೂ ಕೂಡ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
























