ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆ ವಾಣಿಜ್ಯ ಬೆಳೆಯ ಜಿಲ್ಲೆಯಾಗಿ ಇಂದು ಪರಿವರ್ತನೆಯಾಗಿ ಅಡಿಕೆ ಈ ಜಿಲ್ಲೆಯ ಪ್ರಮುಖ ಆರ್ಥಿಕ ಬೆಳೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 4000 ದಿಂದ 5000 ಮಿಲಿ ಮೀಟರ್ ಮಳೆಯಾಗುತ್ತಿದ್ದು ಪ್ರಕೃತ ವರ್ಷದಲ್ಲಿ ಮೇ ತಿಂಗಳಲ್ಲಿ ಆರಂಭವಾದ ಮಳೆ ಸಪ್ಟೆಂಬರ್ ತನಕವು ನಿರಂತರವಾಗಿ ಸುರಿಯುತ್ತಿದ್ದು ಜಿಲ್ಲೆಯಲ್ಲಿ ಅತೀವೃಷ್ಟಿಯಾಗಿದ್ದು ಪ್ರಮುಖವಾಗಿ ಕೃಷಿಕರು ಅಪಾರ ಕೃಷಿ ಹಾನಿ ಅನುಭವಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರ ರೈತರ ಪರವಾಗಿ ನಿಲ್ಲಬೇಕು ಎಂದು ದ.ಕ.ಜಿಲ್ಲಾ ಕೃಷಿಕ ಸಮಾಜದ ನಿರ್ದೇಶಕ, ಮಾಜಿ ಶಾಸಕ ಸಂಜೀವ ಮಠಂದೂರು ಆಗ್ರಹಿಸಿದರು.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಿಂದೆ ಶೋಭಾ ಕರಂದ್ಲಾಜೆ ಸಚಿವರಾಗಿದ್ದಾಗ ಒಟ್ಟು 64 ಕೋಟಿ ಅನುದಾನ ಬಿಡುಗಡೆಯಾಗಿತ್ತು. ಈ ಪೈಕಿ ಕೇಂದ್ರದ್ದು 34 ಕೋಟಿ ರೂ. ಹಾಗೂ ರಾಜ್ಯದ್ದು 27 ಕೋಟಿ ರೂ. ಅನುದಾನ ಬಿಡುಗಡೆಗೊಂಡಿತ್ತು. ಆದರೆ ಈ ಮೊತ್ತದ ಪೈಕಿ ದ.ಕ. ಜಿಲ್ಲೆಗೆ ಕೇವಲ 60.59 ಲಕ್ಷ ಈ ಆರ್ಥಿಕ ವರ್ಷದಲ್ಲಿ ಬಿಡುಗಡೆಯಾಗಿದೆ. ರೈತರಿಗೆ 15 ಲಕ್ಷ ರೂ. ಹಂಚಿಕೆಯಾಗಿದೆ. ಅಂದರೆ ಒಂದು ಎಕ್ರೆಗೆ ಕೇವಲ 3 ಸಾವಿರ ರೂಪಾಯಿ ಬಿಡುಗಡೆಯಾದದ್ದು. ಇದು ಎಲ್ಲಿಗೆ ಸಾಕಾಗುತ್ತೆ ಎಂದ ಅವರು, ಪ್ರಸ್ತುತ ದ.ಕ. ಜಿಲ್ಲೆಯ ರೈತರಿಗೆ ರಾಜ್ಯ ಸರಕಾರ ಪರ್ಯಾಯ ಬೆಳೆಗೆ ಅವಕಾಶ ನೀಡಬೇಕು ಎಂದರು.
ಪ್ರಾಕೃತಿಕ ವಿಕೋಪದಡಿ ರೈತೆರಿಗೆ 1 ಅಡಿಕೆ ಮರಕ್ಕೆ 16.92 ರೂ. ಅಂದರೆ ಒಂದು ಹೆಕ್ಟೇರ್ ಗೆ 22 ಸಾವಿರ. ಅದರಲ್ಲೂ ಕೇರಳದಲ್ಲಿ 10 ಅಡಿಕೆ ಮರ ನಾಶವಾದರೂ, ಎಕ್ರೆ ನಾಶವಾದರೂ ಪರಿಹಾರ ಸಿಗುತ್ತದೆ. ಆದರೆ ಕರ್ನಾಟಕದಲ್ಲಿ ಶೇ.33 ಹಾನಿಯಾದರೆ ಮಾತ್ರ ಪರಿಹಾರ. ಈ ನಿಟ್ಟಿನಲ್ಲಿ ಕೇರಳದಲ್ಲಿ ನೀಡುವ ಪರಿಹಾರದಂತೆ ಕರ್ನಾಟಕದ ರೈತರಿಗೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರಸ್ತುತ ಜಿಲ್ಲೆಯಲ್ಲಿ 27,602 ಹೆಕ್ಟರ್ ತೆಂಗು ಬೆಳೆ 1,02,106 ಹೆಕ್ಟೇರ್ ಅಡಿಕೆ ಬೆಳೆ 38,011 ಹೆಕ್ಟರ್ ಕಾಳು ಮೆಣಸು ಬೆಳೆಯುತ್ತಿದ್ದು ಜಿಲೆಯ ಬೆಳ್ತಂಗಡಿ, ಕಡಬ, ಪುತ್ತೂರು, ಸುಳ್ಯ, ಬಂಟ್ವಾಳ ತಾಲೂಕಿನ ರೈತಾಪಿ ವರ್ಗ ಕುಂಭ ದ್ರೋಣ ಮಳೆಯಿಂದ ಅಡಿಕೆ, ಕಾಳುಮೆಣಸು ಹಾಗು ತೆಂಗು ಬೆಳೆ ನಾಶವಾಗಿ ಇಂದು ಆರ್ಥಿಕ ಹೊಡೆತ ಅನುಭವಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಅಡಿಕೆ ಬೆಳೆಯ 70% ಬೆಳೆ ಮಳೆಯಿಂದಾಗಿ ಹಾನಿಯಾಗಿದ್ದು, ಪ್ರಾಕೃತಿಕ ವಿಕೋಪ, ಗಾಳಿ, ಸಿಡಿಲು, ಭೂ ಕುಸಿತ ಇದರಿಂದಾಗಿ ಜಿಲ್ಲೆಯಲ್ಲಿ ಅಡಿಕೆ ಕೃಷಿಕರಿಗೆ ಅಪಾರ ಹಾನಿಯಾಗಿದ್ದು ಪ್ರಸ್ತುತ ಕಾಡುಪ್ರಾಣಿಗಳಿಂದ ರೈತರು ಸಮಸ್ಯೆಯನ್ನು ಕೂಡ ಎದುರಿಸುತ್ತಿದ್ದಾರೆ.
ಸುಳ್ಯ, ಮಡಿಕೇರಿ ತಾಲೂಕಿನಲ್ಲಿ ಕಾಣಿಸಿಕೊಂಡ ಅಡಿಕೆಯ ಹಳದಿ ರೋಗ ಪ್ರಸ್ತುತ ಕಡಬ, ಪುತ್ತೂರು ಹಾಗೂ ಬಂಟ್ವಾಳ ತಾಲೂಕಿಗು ವ್ಯಾಪಿಸಿದೆ ಎಲೆಚುಕ್ಕಿರೋಗ ಪ್ರತಿವರ್ಷ ಅಡಿಕೆ ಮರಕ್ಕೆ ಬಾದಿಸುತ್ತಿದ್ದು ಅಡಿಕೆಮರ ಸತ್ತು ಹೋಗುವಂತಹದ್ದು ಹಾಗೂ ಇಳುವರಿ ಕಡಿಮೆ ಯಾಗುವಂತಹದು ನಿರಂತರವಾಗಿ ನಡೆಯುತ್ತಾ ಇದೆ. ಈ ಮಳೆಗಾಲದಲ್ಲಿ ರೈತರಿಗೆ ಅಡಿಕೆ ಮರಕ್ಕೆ ಬೋರ್ಡೋ ಸಿಂಪಡಣೆಗೆ ಮಳೆಯಿಂದಾಗಿ ಅವಕಾಶ ಸಿಗದೆ ಪ್ರತಿಯೊಬ್ಬ ಅಡಿಕೆ ಬೆಳೆಗಾರ ಸಂಕಷ್ಟದಲ್ಲಿ ಇರುವ ಸಂದರ್ಭದಲ್ಲಿ ಕರ್ನಾಟಕ ಸರಕಾರ ರೈತರಿಗೆ ನೀಡುವ ಅಲ್ಪಾವಧಿ ಬೆಳೆ ಸಾಲ ಮನ್ನಾ ಮಾಡಬೇಕು. ಅಡಿಕೆ ಮರ ನಾಶ ಹೊಂದಿರುವ ರೈತರಿಗೆ ಮರು ನಾಟಿ ಮಾಡಲು ಕೇರಳ ಮಾದರಿಯಲ್ಲಿ ಸಹಾಯಧನ ನೀಡಬೇಕು. ಸರಕಾರ ತಕ್ಷಣ ಜಿಲ್ಲೆಯಲ್ಲಿ ಅಡಿಕೆ ಬೆಳೆಯ ಹಾನಿಯ ಕುರಿತು ಸರ್ವೆ ಮಾಡಬೇಕು. 2018 ರಲ್ಲಿ ಸರಕಾರ ಅಡಿಕೆಗೆ ಕೊಳೆರೋಗ ಬಂದಾಗ ಪರಿಹಾರ ನೀಡಿ ಉತ್ತಮ ಕೆಲಸ ಮಾಡಿತು. ಈ ವರ್ಷ ಕೂಡ ಅದೇ ರೀತಿಯ ಕೊಳೆರೋಗದಿಂದ ಹಾನಿಯಾದ ಅಡಿಕೆ ಬೆಳೆಗಾರನಿಗೆ ಪರಿಹಾರ ನೀಡಬೇಕು. ಬೆಲೆ ವಿಮಯ ವಿಮಾ ಮೊತ್ತವನ್ನು ಹೆಚ್ಚಿಸುವ ನೆಲೆಯಲ್ಲಿ ಸರಕಾರ ಟರ್ಮ್ ಶೀಟ್ (Term sheet) ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಹಳದಿ ರೋಗ ವ್ಯಾಪಕವಾಗಿ ಹರಡುತ್ತಿದ್ದು ಅದಕ್ಕೆ ಕೇಂದ್ರ ಸರಕಾರ ಕೂಡ ಮಾಡಿದ 37 ಕೋಟಿ ಅನುದಾನಕ್ಕೆ ರಾಜ್ಯವು ಅನುದಾನ ಜೋಡಿಸಿ ರೈತರಿಗೆ ಪರಿಹಾರ ಹಾಗೂ ಪರ್ಯಾಯ ಬೆಳೆಗೆ ಅನುವು ಮಾಡಿಕೊಡಬೇಕು. ಸರಕಾರ ತಕ್ಷಣ ರೈತರ ಹಿತವನ್ನು ಕಾಪಾಡದ ಹೋದರೆ ರಾಜ್ಯದ ಇತರ ಭಾಗದಲ್ಲಿರುವ ರೈತರ ಹಾಗೆ ರೈತ ಆತ್ಮಹತ್ಯೆಗೂ ಶರಣಾಗುವ ಸಮಯ ದೂರ ಇಲ್ಲ ಎನ್ನುವ ವಿಚಾರವನ್ನು ಕೂಡ ಸರಕಾರದ ಮುಂದಿಡುತ್ತಿದ್ದೇವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ಕೊರಂಗ, ಉಪಾಧ್ಯಕ್ಷ ಚಂದ್ರಾ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿ ರಾಕೇಶ್ ರೈ ಕೆಡೆಂಜಿ, ಕೋಶಾಧಿಕಾರಿ ಕುಸುಮಾಧರ ಟಿ. ಉಪಸ್ಥಿತರಿದ್ದರು.
























