ಪುತ್ತೂರು: ಮಕ್ಕಳ ಸರ್ವತೋಮುಖ ವಿಕಾಸದಲ್ಲಿ ಶಿಕ್ಷಕರ ಜೊತೆಗೆ ಪಾಲಕರ ಪಾತ್ರ ಮಹತ್ವದ್ದಾಗಿದೆ. ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಅವರ ಶೈಕ್ಷಣಿಕ ಸಾಧನೆಗಳ ವಿಶ್ಲೇಷಣೆಗೆ ಪೂರಕವಾದ, ವಿದ್ಯಾರ್ಥಿಗಳ ವರ್ತನೆ, ನೈತಿಕತೆ, ಕಲಿಕಾ ಪ್ರಗತಿಗೆ ಪೂರಕವಾದ ವಿಚಾರಗಳ ಬಗ್ಗೆ ಚರ್ಚಿಸಿ ಕ್ರಮ ತೆಗೆದುಕೊಳ್ಳಬೇಕು.ಇದು ದೇಶದ ಸುಂದರ ಭವಿಷ್ಯ ನಿರ್ಮಾಣದ ಹೆಜ್ಜೆಗಳಾಗಲಿ ಎಂದು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿ ರೂಪಲೇಖ ಹೇಳಿದರು.
ನರೇಂದ್ರ ಪ.ಪೂ.ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರ ಮಹಾಸಭೆಯಲ್ಲಿ ಅವರು ಮಾತನಾಡಿದರು.
ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಶ್ರೀಕಾಂತ ಕೊಳತ್ತಾಯ ಮಾತನಾಡಿ, ಇಂತಹ ಸಭೆಗಳು ಶಿಕ್ಷಣ ಮತ್ತು ಪಾಲನೆಯ ವಿಷಯಗಳಲ್ಲಿ ಪೋಷಕರ ಉಪಕ್ರಮವನ್ನು ಹೆಚ್ಚಿಸುತ್ತದೆ. ಪೋಷಕರು ಮಕ್ಕಳ ಕಲಿಕೆಗೆ ವಿಶೇಷ ಗಮನ ನೀಡಿದಲ್ಲಿ ಅವರ ಉಜ್ವಲ ಭವಿಷ್ಯದ ಯಶಸ್ಸಿನ ಮಾರ್ಗ ಸುಲಭವಾಗುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲ ಪ್ರಸಾದ್ ಶ್ಯಾನಭಾಗ್ ಮಾತನಾಡಿ, ವಿದ್ಯಾರ್ಥಿಗಳಿಗೆ ಸಮಾಜದಲ್ಲಿ ಬದುಕಲು ಬೇಕಾಗುವ ಕೌಶಲಗಳನ್ನು, ಸಕರಾತ್ಮಕ ವ್ಯಕ್ತಿತ್ವವನ್ನು ರೂಪುಗೊಳಿಸುವಲ್ಲಿ ಶಿಕ್ಷಣದ ಪಾತ್ರ ಮಹತ್ವದ್ದಾಗಿದೆ ಎಂದರು.
ವೇದಿಕೆಯಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಸಂತೋಷ ಬಿ. ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಕ್ಷಕ-ಶಿಕ್ಷಕ ಸಂಘದ ಪದಾಧಿಕಾರಿಗಳು,ಎಲ್ಲಾ ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಪೋಷಕರು,ಕಾಲೇಜಿನ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಭಾಗವಹಿಸಿದ್ದರು.
ಉಪನ್ಯಾಸಕಿ ಕು. ಅನಘಾ ಸ್ವಾಗತಿಸಿ, ಸೌಮ್ಯ ವಂದಿಸಿದರು. ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.
























