ಪುತ್ತೂರು : ಮನುಷ್ಯನಿಗೆ ಬದುಕಿನ ತಳಪಾಯ ಧರ್ಮ. ಅನುಷ್ಠಾನದಿಂದ ಮಾತ್ರ ಧರ್ಮದ ಸಂರಕ್ಷಣೆ ಸಾಧ್ಯ. ಧರ್ಮ ರಕ್ಷಣೆಯಾಗದಿದ್ದಲ್ಲಿ ಸಮಾಜದಲ್ಲಿ ದ್ವೇಷ ಹುಟ್ಟಿಕೊಳ್ಳುತ್ತದೆ. ಇದಕ್ಕೆ ಧರ್ಮ ಪ್ರಜ್ಞೆಯ ಕೊರತೆ ಕಾರಣ. ಈ ನಿಟ್ಟಿನಲ್ಲಿ ಸಮಾಜದಲ್ಲಿ ಗುಣಾತ್ಮಕ ವಿಷಯ ನಂಬಬೇಕಾದ ಅಗತ್ಯವಿದೆ ಎಂದು ಒಡಿಯೂರು ಶ್ರೀ ಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಮಂಗಳವಾರ ಒಡಿಯೂರು ಶ್ರೀ ಗುರುದೇವ ಸೇವಾ ಬಳಗ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ, ಶ್ರೀ ವಜ್ರಮಾತಾ ಮಹಿಳಾ ಮಂಡಳಿ, ಒಡಿಯೂರು ಶ್ರೀ ವಿವಿಧೋದ್ಧೇಶ ಸಹಕಾರ ಸಂಘದ ಆಶ್ರಯದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಹಕಾರದೊಂದಿಗೆ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನಡೆದ ಒಡಿಯೂರು ಶ್ರೀ ಗುರುದೇವ ಸೇವಾ ಬಳದ ವಾರ್ಷಿಕೋತ್ಸವದ ಅಂಗವಾಗಿ ನಡೆದ ಶ್ರೀ ಸತ್ಯದತ್ತ ವೃತ ಪೂಜೆ ಸಂದರ್ಭ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.

ಗುರು ಎಂದರೆ ಜೇಷ್ಠ. ಗುರುವಿನ ಅನುಗ್ರಹ ಪಡೆದರೆ ಭವಸಾಗರಕ್ಕೂ ಕೊಂಡೊಯ್ಯಬಹುದು. ಕ್ಷಿಪ್ರ ಅನುಗ್ರಹ ಪಡೆಯಬೇಕಾದರೆ ದತ್ತಾತ್ರೇಯನ ಪೂಜೆಯ ಸಂಕಲ್ಪ ಮಾಡಿಕೊಳ್ಳಬೇಕು. ಇದಕ್ಕೆ ಸಮರ್ಪಣಾ ಮನಸ್ಸು ಬೇಕು ಎಂದು ನುಡಿದರು.

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮ ಇಲ್ಲದೆ ಬದುಕಲು ಅಸಾಧ್ಯ. ಧರ್ಮವನ್ನು ಉಳಿಸುವ ಕಾರ್ಯ ನಮ್ಮ ಹೃದಯದಲ್ಲಿ ಬರಬೇಕು. ಇಂದು ಹಿಂದೂ ಸಮಾಜದಲ್ಲಿ ಹಲವಾರು ಸವಾಲುಗಳಿದ್ದು, ನಮ್ಮ ಸಂಸ್ಕೃತಿ, ವಿಚಾರಧಾರೆಗಳ ಕುರಿತು ಚರ್ಚಿಸಬೇಕಾದ ಅಗತ್ಯವಿದ್ದು, ಒಡಿಯೂರು ಕ್ಷೇತ್ರದ ಸ್ವಾಮೀಜಿಯವರು ಈ ಕುರಿತು ತಮ್ಮ ಕ್ಷೇತ್ರದ ಮೂಲಕ ಸಾಕಾರ ಮಾಡುತ್ತಿದ್ದಾರೆ ಎಂದರು. ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕಿರಣ್, ಒಡಿಯೂರು ಶ್ರೀ ಗುರುದೇವ ಸೌಹಾರ್ದ ಸಹಕಾರಿ ಸಂಘದ ಸುರೇಶ್ ರೈ ಎಂ.ಜೆ., ಉಪಸ್ಥಿತರಿದ್ದರು. ಶಾಂತಾ ಕುಂಠಿನಿ ಪ್ರಾರ್ಥನೆ ಹಾಡಿದರು. ಒಡಿಯೂರು ಶ್ರೀ ಗುರುದೇವ ಸೇವಾ ಬಳಗದ ತಾಲೂಕು ಅಧ್ಯಕ್ಷ ಸುಧೀರ್ ನೋಂಡಾ ಸ್ವಾಗತಿಸಿದರು. ವಿದ್ಯಾಶ್ರೀ ಹಾಗೂ ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ದೇವಸ್ಥಾನದ ಬಳಿಯಿಂದ ಒಡಿಯೂರು ಶ್ರೀಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ವೇದಿಕೆಗೆ ಕರೆತರಲಾಯಿತು. ಬಳಿಕ ಶ್ರೀಗಳ ಪಾದಪೂಜೆ ನಡೆಯಿತು. ನಂತರ ಶ್ರೀ ಸತ್ಯದತ್ತ ವೃ ಪೂಜೆಯ ಮಂಗಳಾರತಿ ಜರಗಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು.
























