ತುಳುನಾಡಿನ ದೈವಗಳಿಗೆ ಅವಮಾನ ಮಾಡಬೇಡಿ-ಕಾಂತಾರ-2 ಬೇಡ ಎಂದು ಒತ್ತಾಯ
ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮುಂಬೈ ಇಂಡಿಯನ್ಸ್ ಮತ್ತು ಆರ್‌ಸಿಬಿ ಐಪಿಎಲ್ ಪಂದ್ಯದಲ್ಲಿ ಅಭಿಮಾನಿಯೊಬ್ಬ ಪಂಜುರ್ಲಿ ದೈವದ ವೇಷ ಹಾಕಿಕೊಂಡು ಬಂದಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ತನ್ನ ನೆಚ್ಚಿನ ತಂಡಕ್ಕೆ ಬೆಂಬಲ ನೀಡಲು ಆತ ಪಂಜುರ್ಲಿ ವೇಷ ಹಾಕಿದ್ದಾನೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಈ ಫೋಟೊವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದೆ. ಕ್ರೀಡಾಂಗಣದಲ್ಲಿ ದೈವದ ವೇಷ ಹಾಕಿದ್ದನ್ನು ನೋಡಿ ತುಳುವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ರೀತಿ ದೈವದ ವೇಷವನ್ನು ಹಾಕುವ ಮೂಲಕ ತುಳುನಾಡಿನ ದೈವಗಳಿಗೆ ಅವಮಾನ ಮಾಡಬೇಡಿ ಎಂದು ಒತ್ತಾಯಿಸಿದ್ದಾರೆ. ಆರ್‌ಸಿಬಿ ಫ್ರಾಂಚೈಸಿ ಈ ರೀತಿಯ ಚಿತ್ರಗಳನ್ನು ಹಂಚಿಕೊಳ್ಳಬಾರದು ಎಂದು ಹೇಳಿರುವ ಹಲವರು, ಈ ರೀತಿಯ ವೇಷ ಹಾಕಿಕೊಂಡು ಬಂದವರಿಗೆ ಕ್ರೀಡಾಂಗಣದ ಒಳಗಡೆ ಪ್ರವೇಶ ನೀಡದಂತೆ ಆಗ್ರಹಿಸಿದ್ದಾರೆ.
ಕಾಂತಾರ ಚಲನಚಿತ್ರ ಬಿಡುಗಡೆಗೆ ಮುನ್ನ ತುಳುನಾಡಿನ ದೈವಗಳ ಬಗ್ಗೆ ಹೊರಗಿನ ಜನರಿಗೆ ಹೆಚ್ಚಿನ ಮಾಹಿತಿ ಇರಲಿಲ್ಲ. ಆದರೆ, ಚಿತ್ರ ಬಿಡುಗಡೆಯಾದ ಬಳಿಕ ಪಂಜುರ್ಲಿ, ಗುಳಿಗ ದೈವಗಳ ಬಗ್ಗೆ ಸಾಕಷ್ಟು ಚರ್ಚೆಯಾಯಿತು. ಕರಾವಳಿ ಭಾಗದಲ್ಲಿ ಜನರ ಆರಾಧ್ಯ ದೈವಗಳಿಗೆ ಅದರದ್ದೇ ಆದ ಪ್ರಾಮುಖ್ಯತೆ ಇದೆ. ದೈವಗಳ ಬಗ್ಗೆ ಅಲ್ಲಿನ ಜನ ಸಾಕಷ್ಟು ಗೌರವ, ಭಕ್ತಿ ಭಾವನೆ ಹೊಂದಿದ್ದಾರೆ. ಮೋಜಿಗಾಗಿ ಅಂತಹ ದೈವಗಳ ವೇಷ ಹಾಕುವುದು ಅಲ್ಲಿನ ಜನರ ನಂಬಿಕೆಗಳಿಗೆ ಮಾಡುವ ಅವಮಾನ ಎಂದು ಹಲವರು ಹೇಳಿದ್ದಾರೆ. ಮುಂದಿನ ಪಂದ್ಯಗಳಲ್ಲಿ ಈ ರೀತಿ ವೇಷ ಹಾಕಿ ಬರುವವರನ್ನು ಕ್ರೀಡಾಂಗಣದ ಒಳಕ್ಕೆ ಪ್ರವೇಶ ನೀಡದಂತೆ ಒತ್ತಾಯ ಮಾಡಿದ್ದಾರೆ.
ದುರ್ಗಾದಾಸ್ ರಾಮದಾಸ್ ಕಟೀಲ್ ಎನ್ನುವವರು ಇಂಥ ಚಿತ್ರಗಳನ್ನು ನೋಡೋದಕ್ಕೆ ಬಹಳ ಬೇಸರವಾಗುತ್ತದೆ. ಇನ್ನೂ ಕೆಲವರು ರಿಷಬ್ ಶೆಟ್ಟಿಯವರೆ ನೀವು ಕಾಂತಾರದ 2ನೇ ಭಾಗದ ಚಿತ್ರವನ್ನು ಮಾಡೋದು ಬೇಡ ಇದು ನಮ್ಮ ಕಳಕಳಿಯ ಮನವಿ ಎಂದು ಬರೆದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಿನ್ನೆ ಆರ್‌ಸಿಬಿ ಮತ್ತು ಮುಂಬೈ ನಡುವಿನ ಪಂದ್ಯದಲ್ಲಿ ಇದನ್ನು ನೋಡಿ ತುಂಬಾ ಬೇಸರವಾಯಿತು. ಕರಾವಳಿ ಕರ್ನಾಟಕದಲ್ಲಿ ದೈವಾರಾಧನೆ ಒಂದು ಆಚರಣೆಯಾಗಿದ್ದು, ಮುಂದಿನ ಪಂದ್ಯಗಳಲ್ಲಿ ದೈವಾರಾಧನೆಯನ್ನು ಬಳಸದಂತೆ ಅಭಿಮಾನಿಗಳಲ್ಲಿ ವಿನಂತಿಸಲಾಗಿದೆ. ನಾವು ತುಳುವರು ಈ ಸಂಪ್ರದಾಯವನ್ನು ಗೌರವದಿಂದ ಪರಿಗಣಿಸುತ್ತೇವೆ ಎಂದು ದುರ್ಗಾದಾಸ್ ಕಟೀಲ್ ಬರೆದುಕೊಂಡಿದ್ದಾರೆ. ಕಾಂತಾರದ ಯಾವುದೇ ಪ್ರೀಕ್ವೆಲ್ ಅಥವಾ ಸೀಕ್ವೆಲ್‌ಅನ್ನು ಮಾಡಬೇಡಿ ಎಂದು ನಿಮ್ಮನ್ನು ವಿನಂತಿಸುತ್ತೇನೆ… ಇಲ್ಲದಿದ್ದರೆ ಈ ಪವಿತ್ರ ಸಂಪ್ರದಾಯ ಪ್ರಪಂಚದ ಮುಂದೆ ತಮಾಷೆಯಾಗಿ ಕೊನೆಗೊಳ್ಳುತ್ತದೆ ಎಂದು ರಿಷಬ್ ಶೆಟ್ಟಿಗೆ ಟ್ಯಾಗ್ ಮಾಡಿ ಸುದೀಪ್ ಶೆಟ್ಟಿ ಎನ್ನುವವರು ಟ್ವೀಟ್ ಮಾಡಿದ್ದಾರೆ. ಪ್ಲೀಸ್ ಇದರ ಸೀಕ್ವೆಲ್ ಮಾಡಬೇಡಿ. ಕಾಂತಾರ -2 ಬೇಡ ಶೆಟ್ರೆ, ಕಾಂತಾರಾ-2 ಮಾಡಬೇಡಿ. ಇದು ಕರಾವಳಿ ನಿವಾಸಿಗಳ ಮನವಿ ಎಂದುಕೊಳ್ಳಿ ಎಂದು ಪವನಜ ಶೆಟ್ಟಿ ಎನ್ನುವವರು ಟ್ವೀಟ್ ಮಾಡಿದ್ದಾರೆ.
ಭೂತಕೋಲಕ್ಕೆ ಸಂಬಂಧಿಸಿದ ಅಂಶಗಳನ್ನು ಮನರಂಜನೆಗಾಗಿ ಬಳಸಬೇಡಿ ಎಂದು ಬಲವಾಗಿ ಜನರನ್ನು ಒತ್ತಾಯಿಸಿ….ಇದು ಕಾಂತಾರರಿಂದ ಪ್ರಾರಂಭವಾಗಿದೆ. ಇದನ್ನು ಜನರಿಗೆ ನೀವೇ ಹೇಳಬೇಕು ಎಂದು ರಿಷಭ್ ಶೆಟ್ಟಿ ಹಾಗೂ ಹೊಂಬಾಳೆ ಫಿಲಂ ಅವರನ್ನು ಟ್ಯಾಗ್ ಮಾಡಿ ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ದೈವಾರಾಧನೆ ಎಲ್ಲೂ ಬಳಸಬಹುದಾದ ಜಾನಪದ ನೃತ್ಯವಲ್ಲ. ಇದು ತನ್ನದೇ ಆದ ಶ್ರೀಮಂತ ಸಂಪ್ರದಾಯವನ್ನು ಹೊಂದಿದೆ. ಇದು ಧಾರ್ವಿುಕ ಆಚರಣೆಗಳೊಂದಿಗೆ ಸಂಪರ್ಕ ಹೊಂದಿದೆ. ದಯವಿಟ್ಟು ಆರಾಧನೆಯನ್ನು ಅಗೌರವಗೊಳಿಸಬೇಡಿ ಎಂದು ಕರಾವಳಿ ಭಾಗದ ಇನ್ನೊಬ್ಬರು ಬರೆದಿದ್ದಾರೆ.
‘ಕಾಂತಾರದ ಯಶಸ್ಸನ್ನು ಸಂಭ್ರಮ ಮಾಡಿದವರು ನೀವೇ ಅಲ್ಲವೇ? ಆದರೆ, ಈ ವಿಚಾರವೀಗ ಮುಖ್ಯಭೂಮಿಕೆಯಲ್ಲಿದೆ, ಜನರು ಇದನ್ನು ಇಲ್ಲಿಗೆ ನಿಲ್ಲಿಸೋದಿಲ್ಲ. ಇಷ್ಟು ದೈವಿ ರೂಪದ ವಿಚಾರವಾಗಿದ್ದರೆ ಅದನ್ನು ಸಿನಿಮಾ ಮಾಡಲು ಬಿಟ್ಟಿದ್ದೇಕೆ ಎಂದು ಗಣೇಶ್ ಎನ್ನುವವರು ಮಾಡಿರುವ ಪ್ರಶ್ನೆಗೆ, ಕಾಂತಾರದ ಶೈಲಿಯಲ್ಲಿಯೇ, ‘ಒಳ್ಳೆಯ ಪ್ರಶ್ನೆ’ ಎನ್ನುವ ಕಾಮೆಂಟ್ ಬಂದಿದೆ. ಇದಕ್ಕೆ ಅಖಿಲ್ ಪ್ರಭು ಎನ್ನುವವರು ಕಾಮೆಂಟ್ ಮಾಡಿದ್ದು, ‘ಅಣ್ಣಾ ನಿನ್ನ ಈ ಪ್ರಶ್ನೆಗೆ ಖಂಡಿತವಾಗಿ ಉತ್ತರ ಪಡೆದುಕೊಳ್ಳುತ್ತೀರಿ. ಕೊರಗಜ್ಜ ದೇವಸ್ಥಾನದಲ್ಲಿ ಚೇಷ್ಟೆ ಮಾಡಿದವರು ಅನುಭವಿಸಿದಂತೆಯೇ ನೀನು ಪಾಠ ಕಲಿಯುತ್ತೀಯ’ ಎಂದು ಟ್ವೀಟ್ ಮಾಡಿದ್ದಾರೆ.
























