ಸ್ವಾರ್ಥಿ ರಾಜಕಾರಣಿಗಳ ನಡುವೆ ಭಿನ್ನವಾಗಿ ಕಾಣುವ ಹಾಲಾಡಿ
ಕರಾವಳಿಯ ವಾಜಪೇಯಿ ಎಂದೇ ಖ್ಯಾತಿ ಪಡೆದಿದ್ದ ಕುಂದಾಪುರ ವಿಧಾನಸಭಾ ಕ್ಷೇತ್ರದಿಂದ ಐದು ಬಾರಿ ಶಾಸಕರಾಗಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಈ ಬಾರಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ. 1999ರಿಂದ ಇಲ್ಲಿಯವರೆಗೆ ಸೋಲಿಲ್ಲದ ಸರದಾರ ಎನಿಸಿಕೊಂಡಿದ್ದ 72 ವರ್ಷದ ಹಾಲಾಡಿ ಶ್ರೀನಿವಾಸ್ ಶೆಟ್ಟಿ ಅವರ ಈ ನಡೆ ಅಚ್ಚರಿ ಮೂಡಿಸಿರುವುದರ ಜತೆಗೆ ನಾಡಿನಾದ್ಯಂತ ಚರ್ಚೆಗೂ ಕಾರಣವಾಗಿದೆ.
ಶ್ರೀನಿವಾಸ ಶೆಟ್ಟಿಯವರು ಓರ್ವ ಮಾದರಿ ಜನನಾಯಕ ಎಂದು ಧಾರಾಳವಾಗಿ ಹೇಳಬಹುದು. ಸತತ ಐದು ಬಾರಿ ಗೆಲುವು ಸಾಧಿಸಿದ್ದಾರೆ ಎನ್ನುವುದೊಂದೇ ಅವರ ಹೆಗ್ಗಳಿಕೆಯಲ್ಲ. ಶಾಸಕರಾಗಿ ಅವರು ಮಾಡಿದ ಕಾರ್ಯಗಳು ಬಹಳಷ್ಟಿವೆ. ಇದಕ್ಕೂ ಮಿಗಿಲಾಗಿ ಸುದೀರ್ಘ ಸಾರ್ವಜನಿಕ ಬದುಕಿನಲ್ಲಿ ತನ್ನ ಮೇಲೆ ಒಂದು ಚುಕ್ಕೆಯಷ್ಟು ಕೂಡ ಕಳಂಕ ಮೆತ್ತಿಕೊಳ್ಳದಂತೆ ನೋಡಿಕೊಂಡದ್ದು ಸಣ್ಣ ಸಾಧನೆಯಲ್ಲ. ಒಂದು ಅವಧಿಗೆ ಶಾಸಕರಾದವರೇ ಒಂದು ತಲೆಮಾರು ತಿಂದು ಮುಗಿದರೂ ಕರಗದಷ್ಟು ಆಸ್ತಿ ಮಾಡಿಡುವ ಕಾಲದಲ್ಲಿ ಶ್ರೀನಿವಾಸ ಶೆಟ್ಟಿಯವರು ಐದು ಅವಧಿಗೆ ಶಾಸಕರಾದರೂ ಭ್ರಷ್ಟಾಚಾರದ ಒಂದೇ ಒಂದು ಆರೋಪವಿಲ್ಲದೆ ರಾಜಕೀಯ ಬದುಕನ್ನು ನಿಭಾಯಿಸಿಕೊಂಡು ಬಂದಿದ್ದಾರೆ. ರಾಜಕೀಯದಲ್ಲಿ ಅವರು ಗಳಿಸಿದ್ದಕ್ಕಿಂತ ಕಳೆದುಕೊಂಡದ್ದೇ ಹೆಚ್ಚು ಎನ್ನುವುದನ್ನು ಅವರ ಕ್ಷೇತ್ರದ ಪ್ರತಿಯೊಬ್ಬ ಮತದಾರ ಹೇಳುತ್ತಾರೆ. ಇದು ಅವರ ನಿಷ್ಕಳಂಕ ವ್ಯಕ್ತಿತ್ವದ ಒಂದು ಝಲಕ್. ಇಂಥವರು ವರ್ತಮಾನದ ರಾಜಕೀಯದಲ್ಲಿ ಅಪರೂಪ.
ಕುಂದಾಪುರ ಕ್ಷೇತ್ರದಲ್ಲಿ ಶ್ರೀನಿವಾಸ ಶೆಟ್ಟಿಯವರು ಹೊಂದಿದ್ದ ಜನಪ್ರಿಯತೆ, ಪ್ರಭಾವಕ್ಕೆ ಸಂಬಂಧಿಸಿದಂತೆ ದಂತ ಕಥೆಗಳೇ ಇವೆ. ಕುಂದಾಪುರದಲ್ಲಿ ಶ್ರೀನಿವಾಸ ಶೆಟ್ಟರು ಪಕ್ಷವನ್ನೂ ಮೀರಿ ಬೆಳೆದಿದ್ದರು. ಇದನ್ನು ಅವರು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದುಬಂದು ನಿರೂಪಿಸಿ ತೋರಿಸಿದ್ದಾರೆ. ಕುಂದಾಪುರದ ಮಟ್ಟಿಗೆ ಹೇಳುವುದಾದರೆ ಅಲ್ಲಿ ಶ್ರೀನಿವಾಸ ಶೆಟ್ಟಿಯವರಿಗೆ ಬಿಜೆಪಿಗಿಂತ ಬಿಜೆಪಿಗೆ ಶ್ರೀನಿವಾಸ ಶೆಟ್ಟಿಯವರ ಅಗತ್ಯ ಬಹಳವಿತ್ತು. ಶ್ರೀನಿವಾಸ ಶೆಟ್ಟಿಯವರ ರಾಜಕೀಯ ನಿರ್ಗಮನ ಬಿಜೆಪಿಯನ್ನು ಬಾಧಿಸಲಿದೆ.
ಆದರೆ ತನಗಿದ್ದ ಈ ಎಲ್ಲ ಖ್ಯಾತಿ, ವರ್ಚಸ್ಸನ್ನು ಶ್ರೀನಿವಾಸ ಶೆಟ್ಟಿಯವರು ಕುಂದಾಪುರದಾಚೆಗೆ ಬೆಳೆಸಲು ಯತ್ನಿಸಲೇ ಇಲ್ಲ. ಇದು ಅವರು ರಾಜಕೀಯದಲ್ಲಿ ಅವರ ವ್ಯಾಪ್ತಿಗೆ ಮಿತಿಯನ್ನು ಹಾಕಿತು. ನಾನು ಮತ್ತು ನನ್ನ ಕ್ಷೇತ್ರದ ಜನರು ಎಂಬ ಧೋರಣೆಯನ್ನು ಪಾಲಿಸಕೊಂಡು ಬಂದ ಕಾರಣ ಶ್ರೀನಿವಾಸ ಶೆಟ್ಟಿಯವರು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದಲ್ಲಿ ಮಿಂಚಲಿಲ್ಲ. ಖಂಡಿತ ಶ್ರೀನಿವಾಸ ಶೆಟ್ಟಿಯವರಲ್ಲಿ ಸಚಿವರಾಗುವ ಎಲ್ಲ ಯೋಗ್ಯತೆಗಳೂ ಇದ್ದವು. ಐದು ಸಲ ಶಾಸಕರಾದವರನ್ನು ಕನಿಷ್ಟ ಒಂದು ಅವಧಿಗಾದರೂ ಮಂತ್ರಿ ಮಾಡದೆ ಇದ್ದದ್ದು ಬಿಜೆಪಿ ನಾಯಕತ್ವದ ತಪ್ಪು. ಈ ಮೂಲಕ ಪ್ರಾಮಾಣಿಕ ನಾಯಕನೊಬ್ಬನ ಸೇವೆಯನ್ನು ಪಡೆಯುವ ಭಾಗ್ಯದಿಂದ ಈ ರಾಜ್ಯ ವಂಚಿತವಾಯಿತು. ಎರಡೆರಡು ಸಲ ಮಂತ್ರಿಪಟ್ಟದ ಹೊಸಿಲ ತನಕ ಹೋಗಿ ವಾಪಸಾದವರು ಶ್ರೀನಿವಾಸ ಶೆಟ್ಟಿಯವರು. ಆಗ ಅವರಿಗಾದ ನಿರಾಶೆ ಅಷ್ಟಿಷ್ಟಲ್ಲ. ಹಾಗೆಂದು ಅವರು ಸಚಿವ ಪದವಿಗಾಗಿ ಹಾತೊರೆದವರೂ ಅಲ್ಲ. ಕೊಡುತ್ತೇನೆ ಎಂದು ಹೇಳಿ ಕೊನೆಕ್ಷಣದಲ್ಲಿ ಕೈಕೊಟ್ಟ ಕಾರಣ ಒಂದು ಸಲ ಬಂಡೆದ್ದದ್ದು ಬಿಟ್ಟರೆ ಶ್ರೀನಿವಾಸ ಶೆಟ್ಟಿಯವರು ಸಚಿವ ಸ್ಥಾನ ಸಿಕ್ಕಿಲ್ಲ ಎಂಬ ಕಾರಣಕ್ಕೆ ಪಕ್ಷದ ವಿರುದ್ಧ ಮುನಿಸಿಕೊಂಡವರೂ ಅಲ್ಲ. ಅಧಿಕಾರ ದಾಹ ಅವರಿಗೆ ಒಂದಿನಿತೂ ಇರಲಿಲ್ಲ. ಇಂಥ ನಾಯಕರು ಈಗ ಬಹಳ ವಿರಳ.
ಚುನಾವಣೆಗೆ ಸ್ಪರ್ಧಿಸದಿರುವ ಅವರ ನಿರ್ಧಾರವನ್ನು ನಾನಾ ರೀತಿಯಲ್ಲಿ ವ್ಯಾಖ್ಯಾನಿಸಲಾಗುತ್ತಿದೆ. ಬಿಜೆಪಿಯಲ್ಲೇ 75 ದಾಟಿದವರಿಗೆ ಚುನಾವಣಾ ರಾಜಕೀಯದಿಂದ ವಿಶ್ರಾಂತಿ ನೀಡುವ ಪರಂಪರೆಯೂ ಇದೆ. ಇದಕ್ಕೆ ಕೆಲವೊಂದು ಅಪವಾದಗಳು ಇದ್ದರೂ ಇಂಥ ಒಂದು ನಿಯಮ ಈ ಕಾಲಘಟ್ಟದಲ್ಲಿ ಉತ್ತಮ ಸಂಪ್ರದಾಯ ಎನ್ನುವುದು ನಿಜ. ಆದರೆ ಶ್ರೀನಿವಾಸ ಶೆಟ್ಟಿಯವರಿಗೆ 75 ಆಗಲು ಇನ್ನೂ 3 ವರ್ಷ ಬಾಕಿಯಿದೆ. ಇನ್ನೊಂದು ಅವಧಿಗೆ ಶಾಸಕರಾಗಿ ಸೇವೆ ಸಲ್ಲಿಸುವ ದೈಹಿಕ ಸಾಮರ್ಥ್ಯ ಅವರಿಗೆ ಇದೆ. ಹೀಗಿರುವಾಗ ದಿಢೀರ್ ಎಂದು ಶ್ರೀನಿವಾಸ ಶೆಟ್ಟಿಯವರು ಚುನಾವಣೆಗೆ ಸ್ಪರ್ಧಿಸುವುದು ಬೇಡ ಎಂದು ನಿರ್ಧರಿಸುವುದು ಅಚ್ಚರಿಗೆ ಕಾರಣವಾಗಿದೆ.
ಎದ್ದು ನಡೆಯುವಷ್ಟು ತಾಕತ್ತು ಇಲ್ಲದಿದ್ದರೂ ತನಗಲ್ಲವಾದರೆ ಹೆಂಡತಿಗೆ, ಮಗನಿಗೆ, ತಪ್ಪಿದರೆ ಮೊಮ್ಮಗನಿಗೆ, ಅಳಿಯ, ಸೊಸೆಗೆ ಟಿಕೆಟ್ ಕೊಡಿ ಎಂದು ದುಂಬಾಲು ಬಿದ್ದು ರಂಪಾಟ ಮಾಡುವ ಸ್ವಾರ್ಥಿ ರಾಜಕಾರಣಿಗಳ ನಡುವೆ ಶ್ರೀನಿವಾಸ ಶೆಟ್ಟಿಯವರ ಇನ್ನು ಸಾಕು ಎಂಬ ನಿರ್ಧಾರ ಗ್ರೇಟ್ ಎಂದೆನಿಸುತ್ತದೆ. ಇಂಥ ನಡೆಯನ್ನು ಅನುಕರಿಸಬೇಕಾದ ಸಾಕಷ್ಟು ರಾಜಕಾರಣಿಗಳು ಕರ್ನಾಟಕದಲ್ಲೇ ಇದ್ದಾರೆ. ಕನಿಷ್ಠ ಅವರ ಪಕ್ಷದ ಕೆಲವು ನಾಯಕರಾದರೂ ಇಂಥ ನಿರ್ಧಾರವನ್ನು ಕೈಗೊಳ್ಳಬೇಕಾಗಿದೆ.
























