ಪುತ್ತೂರು: ಲಂಚ ಪಡೆದ ಆರೋಪದ ಮೇಲೆ ಗ್ರಾಮ ಆಡಳಿತಾಧಿಕಾರಿ ಮಹೇಶ್ ಎಸ್. ಅವರಿಗೆ ಜೈಲು ಶಿಕ್ಷೆ ವಿಧಿಸಿ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಆದೇಶ ನೀಡಿದೆ.
ಪುತ್ತೂರು ಕಸಬಾ ಹಾಗೂ ನರಿಮೊಗರು ಗ್ರಾಮದ ಗ್ರಾಮ ಆಡಳಿತಾಧಿಕಾರಿಯಾಗಿದ್ದ ಮಹೇಶ್ ಎಸ್. ಅವರಿಗೆ 4 ವರ್ಷ ಜೈಲು ಶಿಕ್ಷೆ ಹಾಗೂ 70 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ದಂಡ ಕಟ್ಟಲು ವಿಫಲವಾದರೆ ಮತ್ತೆ 8 ತಿಂಗಳ ಜೈಲು ಶಿಕ್ಷೆಗೆ ಆದೇಶಿಸಲಾಗಿದೆ.
ಅಕ್ರಮ ಸಕ್ರಮದ ಅರ್ಜಿ ವಿಲೇವಾರಿಗೆ ಸುಳ್ಯ ಮಂಡೆಕೋಲಿನ ವ್ಯಕ್ತಿಯೋರ್ವರಿಂದ 60 ಸಾವಿರ ರೂ. ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ. 2016ರ ಜೂನ್ 7ರಂದು 45 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಮಂಗಳೂರು ಭ್ರಷ್ಟ ನಿಗ್ರಹ ದಳ ಪೊಲೀಸರು ಬಂಧಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ. ಜಕಾತಿ ಅವರು ಮಾರ್ಚ್ 2ರಂದು ತೀರ್ಪು ನೀಡಿದ್ದಾರೆ. ಸರಕಾರದ ಪರ ಕರ್ನಾಟಕ ಲೋಕಾಯುಕ್ತದ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪಾಡಿ ಅವರು ವಾದಿಸಿದ್ದರು.
























