ಮಂಗಳೂರು: ನೈಟ್ ಬೀಟ್ ಡ್ಯೂಟಿಯಲ್ಲಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿದ ಇಬ್ಬರು ಆರೋಪಿಗಳನ್ನು ಕೇರಳದ ಕಾಞಂಗಾಡ್ನಲ್ಲಿ ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಬಂಧಿತರನ್ನು ಸಚಿನ್ ಕೆ. ಆರ್. ಮತ್ತು ಚಂದನ್ ಎಂದು ಗುರುತಿಸಲಾಗಿದೆ.
ಆರೋಪಿ ಸಚಿನ್ ಬೆಳ್ತಂಗಡಿ ತಾಲೂಕಿನ ಹತ್ಯಡ್ಕ ನಿವಾಸಿಯಾಗಿದ್ದು, ಮಂಗಳೂರಿನ ಕುಂಟಿಕಾನದಲ್ಲಿರುವ PON PON Sweets ಫ್ಯಾಕ್ಟರಿಯಲ್ಲಿ ಚಾಲಕನಾಗಿದ್ದ. ಆರೋಪಿ ಚಂದನ್ ಪುತ್ತೂರು ತಾಲೂಕಿನ ನೆಲ್ಯಾಡಿ ನಿವಾಸಿಯಾಗಿದ್ದು, ಕೂಳೂರಿನ ಅದ್ವತ್ ಕಿಯಾ ಶೋರೂಮ್ನಲ್ಲಿ ಟೆಕ್ನಿಷಿಯನ್ ಆಗಿ ಕಾರ್ಯನಿರ್ವಹಿಸುತ್ತಿದ್ದ.
ಆರೋಪಿಗಳು ಮಂಗಳೂರಿನ ಅಶೋಕನಗರದ ಫಲ್ಗುಣಿ ನಗರದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮಧ್ಯರಾತ್ರಿ ವೇಳೆ ನಗರದಲ್ಲಿ ಸುತ್ತಾಡುತ್ತಿದ್ದ ಆರೋಪಿಗಳನ್ನು ಬೀಟ್ ಪೊಲೀಸರು ತಡೆದು ಪ್ರಶ್ನಿಸಿದ ವೇಳೆ ಉಂಟಾದ ವಾಗ್ವಾದದ ಹಿನ್ನೆಲೆ ಆರೋಪಿಗಳು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ತನಿಖೆಯಿಂದ ಬೆಳಕಿಗೆ ಬಂದಿದೆ.
ಈ ಬಗ್ಗೆ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಖಚಿತ ಮಾಹಿತಿಯ ಆಧಾರದಲ್ಲಿ ಆರೋಪಿಗಳನ್ನು ಮೇ 26ರಂದು ಕೇರಳದ ಕಾಂಞಗಾಡ್ನಲ್ಲಿ ಪತ್ತೆಹಚ್ಚಿ ವಶಕ್ಕೆ ಪಡೆದು ಮುಂದಿನ ಕ್ರಮಕ್ಕಾಗಿ ಉರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ. ಪ್ರಕರಣದಲ್ಲಿ ಬಳಸಿದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದ್ದು, ತನಿಖೆ ಮುಂದುವರಿದಿದೆ.
























