ಕೇರಳದ ಮಾಜಿ ಸಿಎಂ ಪಿಣರಾಯಿ ವಿಜಯನ್ ಮನೆ ಮೇಲೆ ಇ.ಡಿ.ದಾಳಿ

ಮಾಜಿ ಸಿಎಂ ಮಗಳು, ಅಳಿಯನಿಗೂ ಇ.ಡಿ. ದಾಳಿಯ ಶಾಕ್‌

ತಿರುವನಂತಪುರಂ: ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಅಧಿಕಾರದಿಂದ ನಿರ್ಗಮಿಸಿದ ಬೆನ್ನಿಗೆ ಇ.ಡಿ. ದಾಳಿಯ ಬಿಸಿ ತಟ್ಟಿದೆ. ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ (CMRL) ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮನಿ ಲಾಂಡರಿಂಗ್ (ಅಕ್ರಮ ಹಣ ವರ್ಗಾವಣೆ) ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಬುಧವಾರ ಕೇರಳದಾದ್ಯಂತ 10 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ನಿವಾಸ ಹಾಗೂ ಅವರ ಪುತ್ರಿ ಟಿ. ವೀಣಾ ಅವರ ಮನೆಗಳ ಮೇಲೂ ಇ.ಡಿ ಅಧಿಕಾರಿಗಳು ಮುಂಜಾನೆಯೇ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಕೊಚ್ಚಿನ್ ಮಿನರಲ್ಸ್ ಆಂಡ್ ರುಟೈಲ್ ಲಿಮಿಟೆಡ್ ಹಾಗೂ ಪಿಣರಾಯಿ ವಿಜಯನ್ ಅವರ ಪುತ್ರಿ ಟಿ.ವೀಣಾ ಮಾಲೀಕತ್ವದ ‘ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಗಳ ನಡುವೆ ನಡೆದಿರುವ ಹಣಕಾಸು ಅಕ್ರಮಗಳ ತನಿಖೆಯ ಭಾಗವಾಗಿ ಈ ದಾಳಿ ನಡೆಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ತಿಳಿಸಿದ್ದಾರೆ. ಸಿಎಂಆರ್‌ಎಲ್ ಪ್ರಕರಣದ ಇ.ಡಿ ತನಿಖೆಗೆ ತಡೆ ನೀಡಲು ಕೇರಳ ಹೈಕೋರ್ಟ್ ನಿರಾಕರಿಸಿದ ಮರುದಿನವೇ ಈ ಮಹತ್ವದ ದಾಳಿ ನಡೆದಿದೆ.





















































 
 

ಕೋಝಿಕ್ಕೋಡ್‌ನಲ್ಲಿರುವ ಮಾಜಿ ಸಚಿವ ಹಾಗೂ ಹಾಲಿ ಶಾಸಕ ಪಿ.ಎ. ಮುಹಮ್ಮದ್ ರಿಯಾಸ್ ಅವರ ನಿವಾಸದ ಮೇಲೂ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ರಿಯಾಸ್ ಅವರು ಟಿ. ವೀಣಾ ಅವರ ಪತಿಯಾಗಿದ್ದಾರೆ.

ಸಿಂಥೆಟಿಕ್ ರುಟೈಲ್ ಮತ್ತು ಕೈಗಾರಿಕಾ ರಾಸಾಯನಿಕಗಳ ಉತ್ಪಾದನೆಯಲ್ಲಿ ತೊಡಗಿರುವ ಕೇರಳ ಮೂಲದ ಸಿಎಂಆರ್‌ಎಲ್ ಕಂಪನಿಯು ಲಂಚ ಹಾಗೂ ಮನಿ ಲಾಂಡರಿಂಗ್ ಆರೋಪದಡಿ ತನಿಖೆ ಎದುರಿಸುತ್ತಿದೆ. ಯಾವುದೇ ಸೇವೆಗಳನ್ನು ನೀಡದಿದ್ದರೂ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಕಂಪನಿಯು ಸಿಎಂಆರ್‌ಎಲ್‌ನಿಂದ ದೊಡ್ಡ ಮೊತ್ತದ ಹಣವನ್ನು ಪಡೆದಿದೆ ಎಂಬುದು ಮುಖ್ಯ ಆರೋಪವಾಗಿದೆ. ಈ ಪ್ರಕರಣದಲ್ಲಿ ಪಿಣರಾಯಿ ವಿಜಯನ್ ಅವರ ಹೆಸರು ನೇರವಾಗಿ ಆರೋಪಿಗಳ ಪಟ್ಟಿಯಲ್ಲಿ ಇಲ್ಲದಿದ್ದರೂ, ಇದು ಕೇರಳ ರಾಜಕೀಯದಲ್ಲಿ ಭಾರಿ ಬಿರುಗಾಳಿ ಎಬ್ಬಿಸಿದೆ. ವಿಶೇಷವೆಂದರೆ, ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮವು ಸಿಎಂಆರ್‌ಎಲ್ ಕಂಪನಿಯಲ್ಲಿ ಶೇಕಡಾ 13.4 ರಷ್ಟು ಪಾಲು ಹೊಂದಿದೆ.

ಏನಿದು ಸಿಎಂಆರ್‌ಎಲ್ ಪ್ರಕರಣ?

2017 ಮತ್ತು 2020ರ ನಡುವೆ ಯಾವುದೇ ಸೇವೆಗಳನ್ನು ಒದಗಿಸದಿದ್ದರೂ ಎಕ್ಸಾಲಾಜಿಕ್ ಕಂಪನಿಯು ಸಿಎಂಆರ್‌ಎಲ್‌ನಿಂದ 1.72 ಕೋಟಿ ರೂಪಾಯಿಗಳನ್ನು ಪಡೆದಿದೆ ಎಂದು ಆಗಸ್ಟ್ 2023ರಲ್ಲಿ ವರದಿಗಳು ಹೊರಬಂದಾಗ ಈ ಹಗರಣ ಮೊದಲ ಬಾರಿಗೆ ಬೆಳಕಿಗೆ ಬಂದಿತು. ಈ ಆಘಾತಕಾರಿ ಮಾಹಿತಿ ಬಹಿರಂಗಗೊಂಡ ಬೆನ್ನಲ್ಲೇ, ಕೇಂದ್ರ ಸರ್ಕಾರ ಈ ಬಗ್ಗೆ ವಿವರವಾದ ತನಿಖೆ ನಡೆಸುವಂತೆ ಗಂಭೀರ ವಂಚನೆ ತನಿಖಾ ಕಚೇರಿಗೆ (SFIO) ಆದೇಶಿಸಿತ್ತು.

ಎಸ್‌ಎಫ್‌ಐಒ ಸಲ್ಲಿಸಿರುವ 160 ಪುಟಗಳ ದೋಷಾರೋಪ ಪಟ್ಟಿಯಲ್ಲಿ ಟಿ.ವೀಣಾ, ಸಿಎಂಆರ್‌ಎಲ್ ವ್ಯವಸ್ಥಾಪಕ ನಿರ್ದೇಶಕ ಶಶಿಧರನ್ ಕರ್ತ ಸೇರಿದಂತೆ 25 ಜನರನ್ನು ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಇದರೊಂದಿಗೆ ಸಿಎಂಆರ್‌ಎಲ್, ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಮತ್ತು ಅದರ ಅಂಗಸಂಸ್ಥೆಯಾದ ಎಂಪವರ್ ಇಂಡಿಯಾ ಕ್ಯಾಪಿಟಲ್ ಇನ್ವೆಸ್ಟ್‌ಮೆಂಟ್ಸ್ ಸೇರಿದಂತೆ ಹಲವು ಕಂಪನಿಗಳನ್ನು ಆರೋಪಿಗಳ ಪಟ್ಟಿಗೆ ಸೇರಿಸಲಾಗಿದೆ.

ಎಸ್‌ಎಫ್‌ಐಒ ವರದಿಯ ಪ್ರಕಾರ, ವೀಣಾ ಅವರ ಕಂಪನಿಯು ಸಿಎಂಆರ್‌ಎಲ್‌ನಿಂದ ಒಟ್ಟು 2.70 ಕೋಟಿ ರೂಪಾಯಿಗಳನ್ನು ಪಡೆದಿದೆ. ಇದಲ್ಲದೆ, ಸಿಎಂಆರ್‌ಎಲ್ ಉದ್ಯೋಗಿಗಳ ಹೇಳಿಕೆಗಳನ್ನು ಉಲ್ಲೇಖಿಸಿ, 1.72 ಕೋಟಿ ರೂಪಾಯಿ ಪಾವತಿಸಲಾಗಿದೆ ಎಂದು ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿಯು (ITISB) 2023ರಲ್ಲೇ ವರದಿ ನೀಡಿತ್ತು.

ಈ ಕಾನೂನುಬಾಹಿರ ಹಣ ಪಾವತಿಗೆ ಸಂಬಂಧಿಸಿದಂತೆ, ಕೇಂದ್ರ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯವು ಏಪ್ರಿಲ್ 2025 ರಲ್ಲಿ ಟಿ.ವೀಣಾ ವಿರುದ್ಧ ಕಾನೂನು ಕ್ರಮ ಜರುಗಿಸಲು ಅನುಮೋದನೆ ನೀಡಿತ್ತು. ಪ್ರಸ್ತುತ ವೀಣಾ ವಿರುದ್ಧ ಕಂಪನಿಗಳ ಕಾಯ್ದೆ 2013ರ ಸೆಕ್ಷನ್ 447 ರ ಅಡಿಯಲ್ಲಿ ಕಾರ್ಪೊರೇಟ್ ವಂಚನೆ ಪ್ರಕರಣ ದಾಖಲಿಸಲಾಗಿದೆ. ಈ ಅಪರಾಧ ಸಾಬೀತಾದರೆ 6 ತಿಂಗಳಿಂದ 10 ವರ್ಷಗಳವರೆಗೆ ಜೈಲು ಶಿಕ್ಷೆ ಹಾಗೂ ವಂಚನೆಯಾಗಿರುವ ಮೊತ್ತದ ಮೂರು ಪಟ್ಟು ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ.

error: Content is protected !!
Scroll to Top