ಸೋಷಿಯಲ್ ಮೀಡಿಯಾ ಮೂಲಕ ಪರಿಚಯವಾದ ಯುವಕರಿಂದ ಯುವತಿಗೆ ಮೋಸ
ಉಡುಪಿ: ಪ್ರೀತಿಸುವ ನಾಟಕವಾಡಿ ಅಪ್ರಾಪ್ತ ವಯಸ್ಸಿನ ಯುವತಿಯ ಮೇಲೆ ಅತ್ಯಾಚಾರ ಎಸಗಿದ್ದಲ್ಲದೆ ಆಕೆಯನ್ನು ಬ್ಲ್ಯಾಕ್ಮೇಲ್ ಮಾಡಿ ಮನೆಯಿಂದ ಲಕ್ಷಗಟ್ಟಲೆ ಬೆಲೆಬಾಳುವ ಆಭರಣಗಳನ್ನು ತರಿಸಿಕೊಂಡು ವಂಚಿಸಿದ ಇಬ್ಬರು ಪಾತಕಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ಸಮೀಪದ ತೆಕ್ಕಟ್ಟೆ ಕುಂಭಾಶಿಯ ಜಿತೇಂದ್ರ ಶೆಟ್ಟಿ (25) ಹಾಗೂ ಕುರ್ವಾಡಿಯ ಸುಶಾನ್ ಪೂಜಾರಿ ಬಂಧಿತ ಪಾತಕಿಗಳು. ಅವರ ವಿರುದ್ಧ ಪೋಕ್ಸೋ, ಜೇವ ಬೆದರಿಕೆ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಲಾಗಿದೆ.
ಮಲ್ಪೆಯ ಕೊಡವೂರಿನ 17ರ ಹರೆಯದ ಯುವತಿಗೆ ಸ್ನ್ಯಾಪ್ಚಾಟ್ ಸೋಷಿಯಲ್ ಮೀಡಿಯಾ ಅಕೌಂಟ್ ಮೂಲಕ ಸುಶಾನ್ ಪೂಜಾರಿಯ ಪರಿಚಯವಾಗಿತ್ತು. ಈತ ಅಕೆಯನ್ನು ಜಿತೇಂದ್ರ ಶೆಟ್ಟಿಗೆ ಪರಿಚಯಿಸಿದ್ದ.
ಯುವತಿಯನ್ನು ಪ್ರೀತಿಸುವ ನಾಟಕವಾಡಿದ ಜಿತೇಂದ್ರ ಶೆಟ್ಟಿ ಮೂರು ಸಲು ಉಡುಪಿಯ ಬೇರೆ ಬೇರೆ ಲಾಡ್ಜ್ಗಳಿಗೆ ಕರೆದೊಯ್ದು ಮದುವೆಯಾಗುವ ಭರವಸೆ ನೀಡಿ ಅತ್ಯಾಚಾರ ಎಸಗಿದ್ದ. ನಂತರ ಯುವತಿಗೆ ಈ ವಿಷಯವನ್ನು ಯಾರಿಗೂ ತಿಳಿಸಬಾರದೆಂದು ಬೆದರಿಕೆಯೊಡ್ಡಿದ್ದ. ಸುಶಾನ್ ಪೂಜಾರಿ ಈ ಕೃತ್ಯಕ್ಕೆ ಸಹಕಾರ ನೀಡಿದ್ದ.
ಜಿತೇಂದ್ರ ಶೆಟ್ಟಿ ತನ್ನ ತಂದೆ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು, ಚಿಕಿತ್ಸೆಗೆ ಬಹಳ ಹಣ ಬೇಕಾಗಿದೆ. ಮನೆಯಿಂದ ಚಿನ್ನಾಭರಣ ತಂದುಕೊಡು ಒಂದು ವಾರದಲ್ಲಿ ಬಿಡಿಸಿಕೊಡುತ್ತೇನೆ ಎಂದು ವಾಟ್ಸಾಪ್ ಸಂದೇಶ ಕಳುಹಿಸಿದ್ದ. ಯುವತಿ ಇದನ್ನು ನಂಬಿ ಮನೆಯಿಂದ ಕಿವಿಯೋಲೆ, ಉಂಗುರ, ಪೆಂಡೆಂಟ್ ಸೇರಿ ಹಲವು ಲಕ್ಷ ರೂಪಾಯಿಯ ಆಭರಣಗಳನ್ನು ಒಯ್ದು ಅವನಿಗೆ ಕೊಟ್ಟಿದ್ದಳು. 15 ದಿನ ಬಿಟ್ಟು ಯುವತಿ ಚಿನ್ನ ಬಿಡಿಸಿಕೊಡಿ ಎಂದು ಹೇಳಿದಾಗ ಜಿತೇಂದ್ರ ಮತ್ತು ಸುಶಾನ್ ಇನ್ನಷ್ಟು ಆಭರಣ ತಂದುಕೊಡದಿದ್ದರೆ ಎಲ್ಲ ವಿಷಯ ಬಹಿರಂಗಗೊಳಿಸುವುದಾಗಿ ಬೆದರಿಕೆ ಹಾಕಿದ್ದಾರೆ.
ಹೆದರಿದ ಯುವತಿ ಮತ್ತೆ ಮನೆಯಲ್ಲಿದ್ದ ಎರಡು ಚೈನ್, ಒಂದು ಪೆಂಡೆಂಟ್, ಒಂದು ಉಂಗುರ ತಂದುಕೊಟ್ಟಿದ್ದಾಳೆ. ಒಟ್ಟಾರೆ ಆರೋಪಿಗಳು 71 ಗ್ರಾಂ ಚಿನ್ನವನ್ನು ಯುವತಿಯಿಂದ ದೋಚಿದ್ದಾರೆ.
ಮನೆಯಲ್ಲಿದ್ದ ಚಿನ್ನಾಭರಣ ನಾಪತ್ತೆಯಾಗಿದ್ದು, ಮತ್ತು ಯುವತಿಯ ವರ್ತನೆಯಲ್ಲಿ ಹಠಾತ್ ಬದಲಾವಣೆ ಕಂಡುಬಂದಾಗ ಆಕೆಯ ತಾಯಿ ಗಾಬರಿಯಾಗಿ ವಿಚಾರಿಸಿದ್ದಾರೆ. ಆಗ ಯುವತಿ ತಾನು ಯುವಕರಿಂದ ಮೋಸ ಹೋಗಿರುವ ವಿಚಾರವನ್ನು ಬಾಯಿಬಿಟ್ಟಿದ್ದಾಳೆ. ಕೂಡಲೇ ತಾಯಿ ಯುವತಿಯನ್ನು ಕರೆದುಕೊಂಡು ಮಹಿಳಾ ಠಾಣೆಗೆ ಹೋಗಿ ದೂರು ದಾಖಲಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಈ ಆರೋಪಿಗಳು ಇನ್ನಷ್ಟು ಯುವತಿಯರಿಗೆ ಇದೇ ರೀತಿ ಮೋಸ ಮಾಡಿರುವ ಸಾಧ್ಯತೆಯಿದ್ದು, ಆ ನಿಟ್ಟಿನಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
























