ಹೌಸ್‌ಪಾರ್ಟಿ ಮದ್ಯದ ಪರ್ಮಿಟ್‌ ಶುಲ್ಕ ಏರಿಕೆ

ಮೆಹಂದಿ, ಬರ್ತ್‌ಡೇಯಂಥ ಹೌಸ್‌ ಪಾರ್ಟಿಗಳ ಮದ್ಯದ ಪರ್ಮಿಟ್‌ ಶುಲ್ಕ ದುಪ್ಪಟ್ಟು

ಬೆಂಗಳೂರು : ಬರ್ತ್​ ಡೇ, ಮೆಹಂದಿ, ಮದುವೆ, ಗೆಟ್-ಟು-ಗೆದರ್ ಎಂದು ಮನೆಯಲ್ಲಿ ಪಾರ್ಟಿಗಳಲ್ಲಿ ಮದ್ಯ ಸರಬರಾಜು ಮಾಡಲು ನೀಡಲಾಗುವ ತಾತ್ಕಾಲಿಕ ಮದ್ಯದ ಪರ್ಮಿಟ್ (CL-5 ಲೈಸೆನ್ಸ್) ಶುಲ್ಕವನ್ನು ಸರ್ಕಾರ ಬಹುತೇಕ ದುಪ್ಪಟ್ಟು ಮಾಡಿದೆ. ಆರ್ಥಿಕ ಇಲಾಖೆ ಹೊರಡಿಸಿರುವ ಹೊಸ ನಿಯಮಗಳ ಪ್ರಕಾರ ವಾಣಿಜ್ಯೇತರ ಮತ್ತು ವಾಣಿಜ್ಯ ಉದ್ದೇಶದ ಪಾರ್ಟಿಗಳ ಮದ್ಯದ ಪರ್ಮಿಟ್ ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಲಾಗಿದೆ.

ಹೌಸ್ ಪಾರ್ಟಿಗಳಲ್ಲಿ ಇದುವರೆಗೆ ಪ್ರತಿದಿನಕ್ಕೆ 11,500 ರೂ. ಇದ್ದ ಶುಲ್ಕವನ್ನು ಈಗ 20,000 ರೂ.ಗೆ ಹೆಚ್ಚಿಸಲಾಗಿದೆ. ಈ ಪರ್ಮಿಟ್‌ ಅನ್ನು ಕನಿಷ್ಠ 7 ದಿನಗಳ ಮುಂಚಿತವಾಗಿಯೇ ಪಡೆಯಬೇಕು. ಒಂದು ವೇಳೆ ಕಾರ್ಯಕ್ರಮಕ್ಕೆ 24 ಗಂಟೆಗಳ ಮುಂಚೆ ತುರ್ತಾಗಿ ಅನುಮತಿ ಬೇಕಿದ್ದರೆ, ತತ್ಕಾಲ್ ಯೋಜನೆಯಡಿ ಪ್ರತಿದಿನಕ್ಕೆ ಬರೋಬ್ಬರಿ 40,000 ರೂ.ಪಾವತಿಸಬೇಕಾಗುತ್ತದೆ.





















































 
 

ರಸಮಂಜರಿ, ಸಾಂಸ್ಕೃತಿಕ ಕಾರ್ಯಕ್ರಮಗಳು, ಪ್ರದರ್ಶನಗಳು, ಕಾರ್ಪೊರೇಟ್ ಈವೆಂಟ್‌ಗಳು ಮತ್ತು ಹೊಸ ವರ್ಷದ ಆಚರಣೆಗಳಂತಹ ವಾಣಿಜ್ಯ ಪಾರ್ಟಿಗಳಿಗೆ ಶುಲ್ಕವನ್ನು ಭಾರಿ ಪ್ರಮಾಣದಲ್ಲಿ ಏರಿಸಲಾಗಿದ್ದು, ಪ್ರತಿದಿನಕ್ಕೆ 75,000 ರೂ. ನಿಗದಿಪಡಿಸಲಾಗಿದೆ. ತುರ್ತು ಅನುಮತಿಗಾಗಿ ಪ್ರತಿದಿನಕ್ಕೆ 1.5 ಲಕ್ಷ ರೂ. ದಂಡ ತೆರಬೇಕಾಗುತ್ತದೆ.

ಮನೆಯಲ್ಲಿ ಸಣ್ಣ ಪ್ರಮಾಣದ ಪಾರ್ಟಿ ಮಾಡುವವರಿಗೆ ಅಬಕಾರಿ ಇಲಾಖೆ ಒಂದು ಸಣ್ಣ ವಿನಾಯಿತಿ ನೀಡಿದೆ. ಖಾಸಗಿ ಪಾರ್ಟಿಗಳಲ್ಲಿ 9 ಲೀಟರ್ ಮದ್ಯ ಮತ್ತು 18 ಲೀಟರ್ ಬಿಯರ್ ಅಥವಾ ವೈನ್ ಮಿತಿಯೊಳಗೆ ಮದ್ಯ ಬಳಸಲು ಯಾವುದೇ ರೀತಿಯ ಅಬಕಾರಿ ಪರವಾನಗಿ ಪಡೆಯುವ ಅಗತ್ಯವಿಲ್ಲ ಎಂದು ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಆದರೆ, ಈ ಮಿತಿ ದಾಟಿದರೆ ಕಡ್ಡಾಯವಾಗಿ CL-5 ಲೈಸೆನ್ಸ್ ಪಡೆಯಲೇಬೇಕು.

ರಾಜ್ಯ ಸರ್ಕಾರದ ಆದಾಯ ಸಂಗ್ರಹಣೆಯನ್ನು ಹೆಚ್ಚಿಸುವ ಉದ್ದೇಶದಿಂದ ಈ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದ್ದು, ಸಾರ್ವಜನಿಕ ಸ್ಥಳಗಳಲ್ಲಿ ನಡೆಯುವ ವಾಣಿಜ್ಯೇತರ ಕಾರ್ಯಕ್ರಮಗಳಿಗೂ ಇನ್ಮುಂದೆ ಕಡ್ಡಾಯವಾಗಿ CL-5 ಲೈಸೆನ್ಸ್ ಪಡೆಯಬೇಕಾಗುತ್ತದೆ ಎಂದು ಅಬಕಾರಿ ಆಯುಕ್ತ ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

error: Content is protected !!
Scroll to Top