ಮೂರೇ ದಿನದ ಅಂತರದಲ್ಲಿ ಮತ್ತೆ ಹೆಚ್ಚಳವಾದ ಇಂಧನ ಬೆಲೆ; ಇನ್ನಷ್ಟು ಏರುವ ಸಾಧ್ಯತೆ
ನವದೆಹಲಿ : ಪೆಟ್ರೋಲು ಮತ್ತು ಡೀಸೆಲ್ ಬೆಲೆಯನ್ನು ಮತ್ತೆ ಏರಿಸಲಾಗಿದೆ. ಮಂಗಳವಾರ ಪೆಟ್ರೋಲು ಮತ್ತು ಡೀಸೆಲ್ ಬೆಲೆಯಲ್ಲಿ ಸುಮಾರು ೯೦ ಪೈಸೆಯಷ್ಟು ಏರಿಕೆ ಮಾಡಲಾಗಿದ್ದು, ಈ ಮೂಲಕ ಮತ್ತೊಮ್ಮೆ ಜನರಿಗೆ ಬೆಲೆ ಏರಿಕೆಯ ಬರೆ ಎಳೆಯಲಾಗಿದೆ. ಕಳೆದ ಶುಕ್ರವಾರವಷ್ಟೇ ಇಂಧನ ದರ 3 ರೂ.ನಷ್ಟು ಏರಿಕೆಯಾಗಿತ್ತು. ಇಂದು ಬೆಳ್ಳಂಬೆಳಗ್ಗೆ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ದರದಲ್ಲಿ 90 ಪೈಸೆ ಏರಿಕೆಯಾಗಿದ್ದು, ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಗ್ರಾಹಕರಿಗೆ ಶಾಕ್ ಕೊಟ್ಟಿವೆ. ಒಂದೇ ವಾರದಲ್ಲಿ ಎರಡನೇ ಬಾರಿ ತೈಲ ಬೆಲೆ ಏರಿಕೆಯಾಗಿದ್ದು, ಇದರಿಂದ ಸಾರ್ವಜನಿಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳಲಿದೆ.
ಮೂರು ದಿನಗಳ ಹಿಂದಷ್ಟೇ ದೇಶಾದ್ಯಂತ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪ್ರತಿ ಲೀಟರ್‌ಗೆ ತಲಾ 3 ರೂಪಾಯಿಗಳಷ್ಟು ಹೆಚ್ಚಿಸಿತ್ತು. ನವದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 94.77 ರೂಪಾಯಿಯಿಂದ 97.77 ರೂಪಾಯಿಗೆ ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 87.67 ರೂಪಾಯಿಯಿಂದ 90.67 ರೂಪಾಯಿಗೆ ಏರಿಕೆಯಾಗಿದೆ.
ಪಶ್ಚಿಮ ಏಷ್ಯಾ ಸಂಘರ್ಷದ ನಡುವೆ ಪ್ರಪಂಚ ಇಂಧನ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಪ್ರಮುಖ ಸಮುದ್ರ ವ್ಯಾಪಾರ ಮಾರ್ಗವಾದ ‘ಹಾರ್ಮುಜ್ ಜಲಸಂಧಿ’ಯಲ್ಲಿ ಉಂಟಾದ ದಿಗ್ಬಂಧನದ ಹಿನ್ನೆಲೆಯಲ್ಲಿ ಇಂಧನ ಉಳಿತಾಯಕ್ಕೆ ಕರೆ ನೀಡಲಾಗಿದೆ. ಈ ಬೆಳವಣಿಗೆಗಳ ನಡುವೆಯೇ ಬೆಲೆ ಏರಿಕೆಯ ನಿರ್ಧಾರ ಹೊರಬಂದಿದೆ.
ಈ ವರ್ಷದ ಫೆಬ್ರವರಿ 28ರಂದು ಪ್ರಾರಂಭವಾದ ಅಮೆರಿಕ-ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಹಿನ್ನೆಲೆಯಲ್ಲಿ ಕಚ್ಚಾತೈಲ ಬೆಲೆ ದಾಖಲೆ ಮಟ್ಟಕ್ಕೆ ತಲುಪಿದೆ. ಈ ಪ್ರದೇಶದಲ್ಲಿ ದೀರ್ಘಕಾಲದ ಕದನ ವಿರಾಮಕ್ಕಾಗಿ ಅಮೆರಿಕ ಮತ್ತು ಇರಾನ್ ಮಧ್ಯಸ್ಥಿಕೆಗೆ ಪ್ರಯತ್ನಿಸುತ್ತಿರುವ ನಡುವೆಯೇ ಕಚ್ಚಾತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ 100 ಯುಎಸ್ ಡಾಲರ್‌ಗಿಂತ ಹೆಚ್ಚಿನ ಮಟ್ಟದಲ್ಲಿ ಮುಂದುವರಿದಿದೆ.
ಯುದ್ಧದ ವ್ಯಾಪ್ತಿಯು ವಿಸ್ತರಿಸುತ್ತಾ ಇಂಧನದ ಪ್ರಮುಖ ಪೂರೈಕೆದಾರರಾದ ಪಶ್ಚಿಮ ಏಷ್ಯಾದ ದೇಶಗಳನ್ನು ಆವರಿಸಿಕೊಂಡಿದೆ. ಆದಾಗ್ಯೂ, ಭಾರತದಲ್ಲಿ ಇಂಧನದ ಕೊರತೆಯಿಲ್ಲ ಮತ್ತು ದೇಶವು ಸಾಕಷ್ಟು ಇಂಧನ ಪೂರೈಕೆಯನ್ನು ಹೊಂದಿದೆ ಎಂದು ಸರ್ಕಾರ ಪ್ರತಿಪಾದಿಸಿದೆ.
























