ಪಾಳಿಗಳಲ್ಲಿ ನಮಾಜು ಮಾಡಿ : ಯೋಗಿ ಆದಿತ್ಯನಾಥ್‌ ಸಲಹೆ

ರಸ್ತೆಗಳಲ್ಲಿ ನಮಾಜ್‌ ಮಾಡಿದರೆ ಕಟ್ಟುನಿಟ್ಟಿನ ಕ್ರಮದ ಎಚ್ಚರಿಕೆ

ಲಖನೌ: ಮಸೀದಿಯಲ್ಲಿ ಜಾಗದ ಕೊರತೆಯಿದ್ದರೆ ಒಂದೇ ಜಾಗದಲ್ಲಿ ಬೇರೆ ಬೇರೆ ಪಾಳಿಯಲ್ಲಿ ನಮಾಜ್ ಮಾಡಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಉತ್ತರ ಪ್ರದೇಶದಲ್ಲಿ ರಸ್ತೆಗಳ ಮೇಲೆ ನಮಾಜ್ ನಡೆಯುತ್ತದೆಯೇ ಎಂದು ಜನರು ನನ್ನನ್ನು ಕೇಳುತ್ತಾರೆ. ನಾನು ಖಂಡಿತ ಇಲ್ಲ ಎಂದೇ ಹೇಳುತ್ತೇನೆ. ಕೆಲವರು ನನ್ನ ಬಳಿ ಬಂದು, ನಮ್ಮ ಸಂಖ್ಯೆ (ಜನಸಂಖ್ಯೆ) ಹೆಚ್ಚಿದೆ, ಮಸೀದಿಯಲ್ಲಿ ಜಾಗ ಸಾಲುವುದಿಲ್ಲ, ಹೇಗೆ ಮಾಡುವುದು? ಎಂದು ಕೇಳಿದರು. ಅದಕ್ಕೆ ನಾನು, ನಿಮ್ಮ ಸಂಖ್ಯೆ ಹೆಚ್ಚಿದ್ದರೆ ಶಿಫ್ಟ್‌ಗಳಲ್ಲಿ ನಮಾಜ್ ಮಾಡಿ ಎಂದು ಉತ್ತರಿಸಿದೆ ಎಂದು ಹೇಳಿದರು.

ಮಸೀದಿಗಳಲ್ಲಾಗಲಿ ಅಥವಾ ನಿಮ್ಮ ಮನೆಗಳಲ್ಲಾಗಲಿ ಪ್ರಾರ್ಥನೆ ಮಾಡಲು ಜಾಗ ಸಾಲುತ್ತಿಲ್ಲ ಎನ್ನುವುದಾದರೆ, ಮೊದಲು ನಿಮ್ಮ ಜನಸಂಖ್ಯೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ. ಅಷ್ಟೊಂದು ಜನರನ್ನು ನಿಭಾಯಿಸುವ ಸಾಮರ್ಥ್ಯ ನಿಮಗಿಲ್ಲ ಎಂದಮೇಲೆ, ಜನಸಂಖ್ಯೆಯನ್ನು ನಿರಂತರವಾಗಿ ಯಾಕೆ ಹೆಚ್ಚಿಸುತ್ತಿದ್ದೀರಿ? ಎಂದು ಮುಸ್ಲಿಂ ಸಮುದಾಯವನ್ನು ನೇರವಾಗಿ ಪ್ರಶ್ನಿಸಿದ್ದಾರೆ.





















































 
 

ನಿಮಗೆ ನಮಾಜ್ ಮಾಡುವುದು ಅತ್ಯಗತ್ಯವಾಗಿದ್ದರೆ, ಖಂಡಿತ ಮಾಡಿ, ಅದಕ್ಕೆ ನಮ್ಮ ತಡೆಯಿಲ್ಲ. ಆದರೆ ಅದನ್ನು ನಿಗದಿತ ಶಿಫ್ಟ್‌ಗಳಲ್ಲಿ ನಿಮ್ಮ ಮಸೀದಿ ಅಥವಾ ಆವರಣದ ಒಳಗಡೆ ಮಾತ್ರ ಮಾಡಿ, ಸಾರ್ವಜನಿಕ ರಸ್ತೆಗಳ ಮೇಲಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜನಸಂಖ್ಯೆ ಹೆಚ್ಚಿದೆ ಎಂಬ ಕಾರಣ ಒಡ್ಡಿ ಸಾರ್ವಜನಿಕ ರಸ್ತೆಗಳನ್ನು ಬಂದ್‌ ಮಾಡಿ ಧಾರ್ಮಿಕ ಕಾರ್ಯಕ್ರಮ ಮಾಡುವುದನ್ನು ಒಪ್ಪಲು ಸಾಧ್ಯವಿಲ್ಲ. ರಸ್ತೆಗಳು ಕೇವಲ ಸಾರ್ವಜನಿಕರ, ರೋಗಿಗಳ ಮತ್ತು ಉದ್ಯೋಗಿಗಳ ಸಂಚಾರಕ್ಕೆ ಇರುವಂತಹದ್ದು ಎಂದಿದ್ದಾರೆ.

ನೀವು ಈ ದೇಶದ ವ್ಯವಸ್ಥೆಯೊಳಗೆ ಬದುಕಬೇಕಾದರೆ, ಇಲ್ಲಿನ ಕಾನೂನು ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ಕಾನೂನಿನ ನಿಯಮಗಳು ಎಲ್ಲರಿಗೂ ಸಮಾನವಾಗಿ ಅನ್ವಯಿಸುತ್ತವೆ. ನಾವು ಮೊದಲಿಗೆ ನಿಯಮಗಳನ್ನು ಪ್ರೀತಿಯಿಂದ ಮನವರಿಕೆ ಮಾಡಿಕೊಡುತ್ತೇವೆ. ಪ್ರೀತಿಯಿಂದ ಒಪ್ಪಿಕೊಂಡರೆ ಒಳ್ಳೆಯದು, ಒಂದು ವೇಳೆ ಕಾನೂನನ್ನು ಗೌರವಿಸದೆ ಹೋದರೆ, ನಾವು ಬೇರೆ ಮಾರ್ಗಗಳನ್ನು ಬಳಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

error: Content is protected !!
Scroll to Top