ಆನೆಯಡಿಗೆ ಬಿದ್ದು ಮಹಿಳೆ ಮೃತಪಟ್ಟ ಬಳಿಕ ಕಟ್ಟುನಿಟ್ಟಿನ ಆದೇಶ ಹೊರಡಿಸಿದ ಅರಣ್ಯ ಇಲಾಖೆ
ಬೆಂಗಳೂರು: ಮಡಿಕೇರಿಯ ದುಬಾರೆ ಆನೆ ಶಿಬಿರದಲ್ಲಿ ಸೋಮವಾರ ಎರಡು ಆನೆಗಳ ಕಾದಾಟದ ವೇಳೆ ಮಹಿಳೆಯೊಬ್ಬರು ಸಾವನ್ನಪ್ಪಿದ ದುರಂತ ಘಟನೆ ಸಂಭವಿಸಿದ ಬಳಿಕ ಎಚ್ಚೆತ್ತಿರುವ ಅರಣ್ಯ ಇಲಾಖೆ ಆನೆ ವೀಕ್ಷಣೆಗೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿದೆ.
ರಾಜ್ಯದಲ್ಲಿರುವ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಮಾಣಿತ ಕಾರ್ಯಾಚರಣೆ ವಿಧಾನ (SOP) ರೂಪಿಸುವಂತೆ ಮತ್ತು 100 ಅಡಿ ದೂರದಲ್ಲಿ ನಿಂತು ಆನೆಗಳ ಸ್ನಾನ ವೀಕ್ಷಿಸಲು ಅವಕಾಶ ನೀಡುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ದೇಶ ನೀಡಿದ್ದಾರೆ.
ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಈ ಸಂಬಂಧ ಸೂಚನೆ ನೀಡಿರುವ ಅವರು, ದುಬಾರೆ ಸಾಕಾನೆ ಶಿಬಿರದಲ್ಲಿ ಎರಡು ಆನೆಗಳ ನಡುವೆ ನಡೆದ ಕಾದಾಟದ ವೇಳೆ ಮಹಿಳೆ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಎಂದಿದ್ದಾರೆ.
ರಾಜ್ಯದಲ್ಲಿರುವ ಎಲ್ಲ ಸಾಕಾನೆ ಶಿಬಿರದಲ್ಲಿ ತಕ್ಷಣದಿಂದಲೇ ಪ್ರವಾಸಿಗರು ಆನೆಯ ಬಳಿ ಹೋಗದಂತೆ, ಕನಿಷ್ಠ 100 ಅಡಿ ದೂರದಲ್ಲಿ ನಿಂತು ಆನೆ ಮೈತೊಳೆಯುವುದನ್ನು ವೀಕ್ಷಿಸುವಂತೆ ಮತ್ತು ಯಾವುದೇ ಕಾರಣಕ್ಕೂ ಆನೆಗಳ ಬಳಿ ಹೋಗಿ ಸೆಲ್ಫಿ, ಫೋಟೋ ತೆಗೆಸಿಕೊಳ್ಳಲು, ಮೈತೊಳೆಯಲು ಅವಕಾಶ ನೀಡದಂತೆ ಮತ್ತು ಬಾಳೆಹಣ್ಣು, ಬೆಲ್ಲ, ಕಬ್ಬು ಇತ್ಯಾದಿ ಯಾವುದೇ ಆಹಾರವನ್ನು ಪ್ರವಾಸಿಗರ ಕೈಯಿಂದ ತಿನ್ನಸದಂತೆ ಆದೇಶ ಹೊರಡಿಸಲು ಸೂಚಿಸಿದ್ದಾರೆ.
ಎರಡು ಸಾಕಾನೆಗಳ ಕಾದಾಟದಲ್ಲಿ ಪ್ರವಾಸಿ ಮಹಿಳೆಯೊಬ್ಬಳು ಸಾವಿಗೀಡಾದ ದುರ್ಘಟನೆ ಕುಶಾಲನಗರ ತಾಲೂಕಿನ ದುಬಾರೆ ಶಿಬಿರದಲ್ಲಿ ನಿನ್ನೆ ನಡೆದಿದೆ.
ಚೆನೈ ಮೂಲದ ಜಿನ್ಮು (33) ಸಾವಿಗೀಡಾದ ದುರ್ದೈವಿ. ಸೋಮವಾರ ಬೆಳಗ್ಗೆ ಮಹಿಳೆ ಹಾಗೂ ಅವರ ಪತಿ ಜೋಯಲ್ ದುಬಾರೆ ಸಾಕಾನೆ ಶಿಬಿರಕ್ಕೆ ಅಗಮಿಸಿದ್ದರು. ಕೆಲ ಸಮಯ ಸಾಕಾನೆಗಳೊಂದಿಗೆ ಫೋಟೋ ಸಹ ತೆಗೆಸಿಕೊಂಡಿದ್ದರು. ಬಳಿಕ ಸಾಕಾನೆಗಳಿಗೆ ಸ್ನಾನ ಮಾಡಿಸಿ ನೀರು ಕುಡಿಸಲು ಮಾವುತರು ಹಾಗೂ ಕಾವಾಡಿಗಳು ತೆರಳಿದ ಸಂದರ್ಭದಲ್ಲಿ, ಕೆಲ ಪ್ರವಾಸಿಗರು ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದಾರೆ.
ಈ ದಂಪತಿ ಸಹ ಸಾಕಾನೆಗಳಿಗೆ ಸ್ನಾನ ಮಾಡಿಸಲು ಮುಂದಾಗಿದ್ದರು. ಈ ವೇಳೆ ಮಾರ್ತಾಂಡ ಹಾಗೂ ಕಂಜನ್ ಆನೆಗಳ ನಡುವೆ ನದಿಯಲ್ಲೇ ಕಾದಾಟ ಶುರುವಾಗಿ ನೋಡು ನೋಡುತ್ತಿದ್ದಂತೆ ಸಾಕಾನೆಗಳ ಕಾದಾಟ ವಿಕೋಪಕ್ಕೆ ತಿರುಗಿದೆ. ಈ ವೇಳೆ ಮಾರ್ತಾಂಡ ಮಹಿಳೆಯ ಮೇಲೆ ಬಿದ್ದಿದೆ. ಆನೆ ಬಿದ್ದ ಪರಿಣಾಮ, ಜಿನ್ಮು ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರ ಪತಿ ಜೋಯಲ್‌ಗೆ ಗಂಭೀರ ಗಾಯಗಳಾಗಿವೆ. ಉಳಿದ ಪ್ರವಾಸಿಗರು ಜೋಯಲ್ ಅವರನ್ನು ಕುಶಾಲನಗರ ಸರ್ಕಾರಿ ಅಸ್ಪತ್ರೆಗೆ ದಾಖಲಿಸಿದ್ದಾರೆ. ಆನೆಗಳ ಕಾದಾಟದಿಂದ ದುಬಾರೆ ಸಾಕಾನೆ ಶಿಬಿರಕ್ಕೆ ಅಗಮಿಸಿದ ಪ್ರವಾಸಿಗರು ಬೆಚ್ಚಿಬಿದ್ದಿದ್ದಾರೆ.
ಕಂಜನ್ ಆನೆ ಮೈಸೂರು ದಸರಾದಲ್ಲೂ ಇದೇ ರೀತಿಯಲ್ಲಿ ಗಲಾಟೆ ಮಾಡಿಕೊಂಡು ಅರಮನೆಯಿಂದ ಹೊರಗೆ ಓಡಿ ಬಂದಿತ್ತು. ಇದರಿಂದ ಜನ ಅತಂಕಕ್ಕೆ ಒಳಗಾಗಿದ್ದರು. ದುಬಾರೆ ಸಾಕಾನೆ ಶಿಬಿರದಲ್ಲೂ ಗಲಾಟೆ ಮಾಡಿ ಸಾಕಾನೆಗಳ ಮೇಲೆ ದಾಳಿ ನಡೆಸಿತ್ತು. ಈಗ ಮಾರ್ತಾಂಡನ ಮೇಲೆ ದಾಳಿ ಮಾಡಿ, ಮಹಿಳೆಯ ಸಾವಿಗೆ ಕಾರಣವಾಗಿದೆ.
ಆನೆಗಳ ಕಾದಾಟದ ವೇಳೆ ಅವುಗಳ ಕಾಲಿನ ಸಮೀಪ ಸಿಲುಕಿಕೊಂಡಿದ್ದ ಮಹಿಳೆ ಜಿನ್ಶು ರಕ್ಷಣೆಗೆ ಶಕ್ತಿಮೀರಿ ಪ್ರಯತ್ನಿಸಿದರೂ ಅದು ಸಾಧ್ಯವಾಗಿಲ್ಲ. ಆನೆಗಳ ನಿಯಂತ್ರಣಕ್ಕೆ ಮಾವುತರು ಸತತ ಪ್ರಯತ್ನ ನಡೆಸಿರುವ ಹೊರತಾಗಿ, ಮಹಿಳೆಯ ರಕ್ಷಣೆಗೆ ಮಗುವನ್ನು ಕೈನಲ್ಲಿ ಹಿಡಿದ್ದ ವ್ಯಕ್ತಿ ಸೇರಿ ಕೆಲವರು ಯತ್ನಿಸಿದರಾದರೂ ಅದು ಫಲಪ್ರದವಾಗಿಲ್ಲ. ಅಲ್ಲೇ ಇದ್ದ ಇನ್ನು ಕೆಲ ಪ್ರವಾಸಿಗರು ಆನೆಗಳ ಕಾದಾಟಕ್ಕೆ ಬೆದರಿ ಕಾಲ್ಕಿತ್ತು ಓಡಿದ್ದು, ಅದೃಷ್ಟವಶಾತ್ ಎಂಬಂತೆ ಅವರೆಲ್ಲ ಬಚಾವ್ ಆಗಿದ್ದಾರೆ. ಆದರೆ ಪ್ರವಾಸಕ್ಕೆಂದು ಬಂದಿದ್ದ ಅಮಾಯಕ ಮಹಿಳೆಯ ಜೀವವನ್ನು ಸಾಕಾನೆಗಳು ಬಲಿ ಪಡೆದಿವೆ. ಘಟನೆ ಸಂಬಂಧ ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
























