ಜೀಪಿಗೆ ಮೀನು ಸಾಗಿಸುವ ಲಾರಿ ಡಿಕ್ಕಿಯಾಗಿ ಸಂಭವಿಸಿದ ಅಪಘಾತ
ಉಡುಪಿ: ಮೀನು ಸಾಗಾಟದ ಲಾರಿ ಹಾಗೂ ಜೀಪ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕೇರಳದ ಇಬ್ಬರು ಪ್ರವಾಸಿಗರು ಸಾವನ್ನಪ್ಪಿರುವ ಘಟನೆ ಕೊಲ್ಲೂರಿನ ಕೊಡಚಾದ್ರಿಯ ದಳಿ ಎಂಬಲ್ಲಿ ನಡೆದಿದೆ. ಕುಂದಾಪುರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಜ್ಯೋತಿ(35) ಮತ್ತು ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆರ್ಯ ಅನೂಪ್ (28) ಮೃತಪಟ್ಟಿದ್ದಾರೆ.
ಜೀಪಿನಲ್ಲಿದ್ದ ಮೂವರು ಮಕ್ಕಳು, ಸ್ಥಳೀಯ ಜೀಪ್ ಚಾಲಕ ಸೇರಿ ಎಂಟು ಮಂದಿ ಗಂಭೀರ ಗಾಯಗೊಂಡಿದ್ದಾರೆ. ಕೊಲ್ಲೂರಿಗೆ ಆಗಮಿಸಿದ್ದ ಕೇರಳದ ಪ್ರವಾಸಿಗರು ಕೊಲ್ಲೂರು ದೇವಿಯ ದರ್ಶನ ಮುಗಿಸಿ ಕೊಡಚಾದ್ರಿಗೆ ತೆರಳಿದ್ದರು. ಸ್ಥಳೀಯ ಪ್ರವಾಸಿ ಜೀಪ್‌ನಲ್ಲಿ ಕೊಡಚಾದ್ರಿಗೆ ತೆರಳಿ ವಾಪಾಸ್ ಆಗುವ ವೇಳೆ ಮಲ್ಪೆಯಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ಮೀನು ಸಾಗಾಟದ ವಾಹನ ಡಿಕ್ಕಿ ಹೊಡೆದಿದೆ. ಇಳಿಜಾರು ಪ್ರದೇಶವಾದ ಹಿನ್ನೆಲೆ ಅಪಘಾತ ಸಂಭವಿಸಿದೆ.
ಅಯನ್ (5), ಅವನಿ (8), ಅರ್ಜುನ್ (9), ಮಿನಿ (60), ಅಭಿ (36), ಅನೂಪ್ (37), ಜ್ಯೋತಿಷ್ (43) ಮತ್ತು ಜೀಪು ಚಾಲಕ ದೇವರಾಜ್ ಗಾಯಗೊಂಡಿದ್ದಾರೆ. ಮೃತರು ಮತ್ತು ಗಾಯಾಳುಗಳು ಕೇರಳದ ಕೊಟ್ಟಾಯಂ ಮೂಲದವರು ಎಂದು ತಿಳಿದುಬಂದಿದೆ.
ಪ್ರವಾಸಿಗರು ಟೂರಿಸ್ಟ್ ಬಸ್ ಮೂಲಕ ಕೊಲ್ಲೂರಿಗೆ ಆಗಮಿಸಿದ್ದರು. ಗಾಯಾಗೊಂಡ ಪ್ರವಾಸಿಗರಿಗೆ ಕುಂದಾಪುರ, ಉಡುಪಿ, ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕೊಲ್ಲೂರು ಪೊಲೀಸರು ಮೃತ ಹಾಗೂ ಗಾಯಾಳು ಕುಟುಂಬಸ್ಥರ ಆಗಮನಕ್ಕೆ ಕಾಯುತ್ತಿದ್ದಾರೆ.
























