ಪುತ್ತೂರು: ಎಪಿಎಂಸಿ ರಸ್ತೆಯಲ್ಲಿನ ಮನೆಯೊಂದರಿಂದ ಸುಮಾರು 3.10 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಕಾಣೆಯಾಗಿದ್ದು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆಗೆ ಕೆಲಸಕ್ಕೆ ಬರುತ್ತಿದ್ದ ಮಹಿಳೆಯ ಮೇಲೆ ಕಳ್ಳತನದ ಸಂದೇಹ ಬಂದಿದೆ.
ಎಪಿಎಂಸಿ ರಸ್ತೆಯ ಮಹಾಲಿಂಗೇಶ್ವರ ನಿಲಯದ ಕೆ. ಎಸ್. ಮಹಾದೇವಸ್ವಾಮಿ ಅವರು ಮನೆ ಕೆಲಸಕ್ಕೆ ಮೈಸೂರಿನ ಮಹಿಳೆಯನ್ನು ಕಳೆದ ಜನವರಿ ತಿಂಗಳಿನಲ್ಲಿ ಕರೆದುಕೊಂಡು ಬಂದಿದ್ದರು. ಜ. 2 – 25 ರ ವರೆಗೆ ಮನೆಗೆಲಸ ಮಾಡಿದ್ದ ಆಕೆ ಬಳಿಕ ಕೆಲಸ ಬಿಟ್ಟು ಸ್ವಗ್ರಾಮಕ್ಕೆ ತೆರಳಿದ್ದರು.
ಇತ್ತೀಚೆಗೆ ಮನೆಯ ಬಾರಿ ತೆರೆದಾಗ ಅದರಲ್ಲಿದ್ದ ನಗ – ನಗದು ಕಳವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಮನೆಕೆಲಸಕ್ಕಿದ್ದ ಮಹಿಳೆ ಆ ಸಮಯದಲ್ಲೇ ಹಣ, ಚಿನ್ನ ಕದ್ದಿರುವ ಬಗ್ಗೆ ಖಚಿತ ಮಾಹಿತಿ, ಬಲವಾದ ಸಂದೇಹ ವ್ಯಕ್ತಪಡಿಸಿದ್ದಾರೆ.

























