ಮೂಡಬಿದ್ರೆ: ದೈವದ ಭಂಡಾರ ಆಗಮನದ ವೇಳೆ ಕಾಲು ಸಂಕ ಮುರಿದು ಬಿದ್ದ ಪರಿಣಾಮ ಅವಘಡ ಸಂಭವಿಸಿದ ಘಟನೆ ಪುಚ್ಚೆಮೊಗರು ಗ್ರಾಮದ ಬಾವದಬೈಲಿನಲ್ಲಿ ನಡೆದಿದೆ.
ಈ ದುರಂತದಲ್ಲಿ ಎಂಟು ಮಂದಿಗೆ ಗಾಯಗಳಾಗಿದ್ದು, ಅವರನ್ನು ಚಿಕಿತ್ಸಾ ಹಿನ್ನೆಲೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತಾಕೋಡೆ ಬರ್ಕೆ ಧರ್ಮ ನೇಮದ ಹಿನ್ನೆಲೆ ಪಲ್ಲಕ್ಕಿಯಲ್ಲಿ ಹೊತ್ತು ದೈವದ ಭಂಡಾರವನ್ನು ಮೆರವಣಿಗೆಯ ಮೂಲಕ ಕೊಂಡೊಯ್ಯಲಾಗುತ್ತಿತ್ತು. ಈ ವೇಳೆ ಕಾಲು ಸಂಕ ಮುರಿದು ಬಿದ್ದಿದ್ದು, ಪಲ್ಲಕ್ಕಿ ಸಮೇತ ಭಂಡಾರ ತರುತ್ತಿದ್ದ ಭಕ್ತರು ಮುರಿದ ಸಂಕದ ಕೆಳಕ್ಕೆ ಬಿದ್ದಿದ್ದಾರೆ. ದೈವದ ಮುಕಾಲ್ದಿ ಸೇರಿದಂತೆ ಸುಮಾರು ಎಂಟು ಜನರಿಗೆ ಗಾಯಗಳಾಗಿವೆ. ಈ ಘಟನೆಯಲ್ಲಿ ದೈವದ ಪರಿಕರಗಳಿಗೂ ಹಾನಿಯಾಗಿದೆ ಎಂದು ತಿಳಿದು ಬಂದಿದೆ.
ದೈವ ಕಾರ್ಯದ ಸಂದರ್ಭ ಇಂತಹ ಘಟನೆ ನಡೆದಿರುವುದು ಭಕ್ತರಲ್ಲೂ ಆತಂಕಕ್ಕೆ ಕಾರಣವಾಗಿದೆ.

























