ವಿಟ್ಲ: ಯಾವುದೇ ಸುರಕ್ಷತಾ ಕ್ರಮಗಳನ್ನು ಅನುಸರಿಸದೆ ಸುಡುಮದ್ದು ತಯಾರಿಸಲು ಅಕ್ರಮವಾಗಿ ಸ್ಪೋಟಕಗಳನ್ನು ಸಂಗ್ರಹಿಸಿ ಇಟ್ಟಿದ್ದ ವ್ಯಕ್ತಿಯೊಬ್ಬನನ್ನು ವಿಟ್ಲ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಕಂಬಳಬೆಟ್ಟು ಸಮೀಪದ ಅಮೈ ನಿವಾಸಿ ಜಗದೀಶ ಪೂಜಾರಿ ಎಂದು ಗುರುತಿಸಲಾಗಿದೆ.
ಜಗದೀಶ್ ತಮ್ಮ ಮನೆಯಲ್ಲಿ ಸ್ಪೋಟಕಗಳನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಪೊಲೀಸ್ ತಪಾಸಣೆಯಲ್ಲಿ ಸುಮಾರು 1.9 KG ಗಳಷ್ಟು ಅನುಮಾನಾಸ್ಪದ ಸ್ಪೋಟಕಗಳು ಪತ್ತೆಯಾಗಿವೆ.
ಜನವಸತಿ ಪ್ರದೇಶದಲ್ಲಿ ಯಾವುದೇ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸದೆ ಅಪಾಯಕಾರಿ ವಸ್ತುಗಳನ್ನು ಸಂಗ್ರಹಿಸಿಟ್ಟ ಹಿನ್ನೆಲೆ ಪೊಲೀಸರು ಅದನ್ನು ಸೀಝ್ ಮಾಡಿದ್ದಾರೆ. ಆರೋಪಿ ಜಗದೀಶ್ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ವಿವಿಧ ಅಪರಾಧ ಕಲಂಗಳಡಿ ಪೊಲೀಸರು ಪ್ರಕರಣ ದಾಖಲು ಮಾಡಿದ್ದಾರೆ.

























