ಇರಾನ್‌ ಪರ್ವತದಲ್ಲಿ ಸಿಕ್ಕಿಬಿದ್ದಿದ್ದ ಅಮೆರಿಕದ ಪೈಲಟ್‌ ರಕ್ಷಣೆ

ಧ್ವಂಸಗೊಂಡಿದ್ದ ಎಫ್‌-15 ಈಗಲ್‌ ಸ್ಟ್ರೈಕ್‌ ಯುದ್ಧ ವಿಮಾನದ ಪೈಲಟ್‌

ಟೆಹ್ರಾನ್‌: ಇರಾನ್‌ನಲ್ಲಿ ಧ್ವಂಸಗೊಂಡಿದ್ದ ಎಫ್‌-15 ಈಗಲ್‌ ಸ್ಟ್ರೈಕ್‌ ಯುದ್ಧ ವಿಮಾನದ ಪೈಲಟ್‌ ಅನ್ನು ಶನಿವಾರ ರಾತ್ರಿ ನಡೆಸಿದ ಸಾಹಸಮಯ ಕಾರ್ಯಾಚರಣೆಯಲ್ಲಿ ಅಮೆರಿಕ ರಕ್ಷಣೆ ಮಾಡಿದೆ.

ಇರಾನ್‌ ನೈರುತ್ಯ ಪ್ರಾಂತ್ಯದಲ್ಲಿ ‘ಸಾವು-ಬದುಕು’ ಮಿಷನ್‌ ಹೆಸರಿನಡಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಕಾರ್ಯಾಚರಣೆಗೆ ಇಳಿದ ಅಮೆರಿಕದ ಹತ್ತಾರು ಯುದ್ಧ ವಿಮಾನಗಳು, ಹೆಲಿಕಾಪ್ಟರ್‌ಗಳು, ಸರಕು ಸಾಗಣೆ ವಿಮಾನಗಳು, ನೂರಾರು ಯೋಧರ ಮೂಲಕ ಪೈಲಟ್‌ ಅನ್ನು ರಕ್ಷಿಸಲಾಗಿದೆ.























































 
 

ಶನಿವಾರ ರಾತ್ರಿ ಶತ್ರು ಪ್ರದೇಶದೊಳಗೆ ನುಗ್ಗಿದ ಅಮೆರಿಕ ರಕ್ಷಣಾ ಪಡೆ, ಭಾರಿ ಗುಂಡಿನ ಚಕಮಕಿ ನಡುವೆಯೂ ಪೈಲಟ್‌ ಅನ್ನು ರಕ್ಷಿಸುವ ಅತ್ಯಂತ ಧೈರ್ಯಶಾಲಿ ಕಾರ್ಯಾಚರಣೆ ನಡೆಸಿತು. ಇರಾನ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಫ್ಸ್, ಬಸಿತ್‌ ಅರೆ ಸೇನಾಪಡೆಯ ಕಣ್ತಪ್ಪಿಸಿ, ಇರಾನಿಯನ್‌ ಪರ್ವತದ ಪ್ರದೇಶದಲ್ಲಿ ಅಡಗಿದ್ದ ಪೈಲಟ್‌ ಅನ್ನು ಯಶಸ್ವಿಯಾಗಿ ರಕ್ಷಿಸಿ, ನೆರೆಯ ಕುವೈತ್‌ಗೆ ಕರೆದೊಯ್ಯಲಾಗಿದೆ.

ಇರಾನ್‌ ಹೊಡೆದುರುಳಿಸಿದ ಎಫ್‌-15 ಈಗಲ್‌ ವಿಮಾನದ ಪೈಲಟ್‌ ಶತ್ರುಗಳಿಂದ ತಪ್ಪಿಸಿಕೊಳ್ಳಲು ವಿಮಾನ ಪತನಗೊಂಡ ಸ್ಥಳದಿಂದ ದೂರ ಹೋಗಿದ್ದರು. ಗಾಯಗೊಂಡಿದ್ದರೂ, ಎದೆಗುಂದದೆ ಸಮೀಪದಲ್ಲಿದ್ದ ಪರ್ವತ ಪ್ರದೇಶದತ್ತ ನಡೆದರು. ನೋವು, ಹಸಿವು, ನೀರಡಿಕೆ ನಡುವೆ 7 ಸಾವಿರ ಅಡಿ ಎತ್ತರದ ಪರ್ವತ ಮೇಲೇರಿದರು. ಜನರ ಕಣ್ಣಿಗೆ ಕಾಣದಂತೆ ಕಣಿವೆಯ ಸಂಧಿಯಲ್ಲಿ ಅಡಗಿ ಕುಳಿತರು. ನೆರವಿನ ನಿರೀಕ್ಷೆಯಲ್ಲಿ ಇಳಿಜಾರು ಗುಡ್ಡದಲ್ಲಿ ಎರಡು ದಿನ ಕಳೆದರು.

ಅಮೆರಿಕ ಗುಪ್ತಚರ ಇಲಾಖೆ ಸಿಐಎ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಪರ್ವತದಲ್ಲಿ ಅಡಗಿದ್ದ ಪೈಲಟ್‌ ಇರುವ ಜಾಗ ಪತ್ತೆ ಮಾಡಿತು. ಪೈಲಟ್‌ ಇರುವ ಸ್ಥಳದ ನಿಖರ ಮಾಹಿತಿಯನ್ನು ಶ್ವೇತಭವನಕ್ಕೆ ತಲುಪಿಸಿತು. ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೂಚನೆಯಂತೆ ಶನಿವಾರ ರಾತ್ರಿಯೇ ಕಾರ್ಯಾಚರಣೆ ಕೈಗೊಳ್ಳಲಾಯಿತು.

ಅಮೆರಿಕ ಪೈಲಟ್‌ ಸೆರೆಗೆ ಇರಾನ್‌ ಪಡೆಗಳು, ಸ್ಥಳೀಯ ಜನರು ಶೋಧ ನಡೆಸುತ್ತಿದ್ದರು. ಐಆರ್‌ಜಿಸಿ ಪಡೆ ಪರ್ವತ ಪ್ರದೇಶ ತಲುಪುವ ಮೊದಲೇ ಪರ್ವತ ತಲುಪಿದ ಅಮೆರಿಕ ಪಡೆಗಳು ಕಾರ್ಯಾಚರಣೆಗೆ ಇಳಿದವು. ಇರಾನ್‌ ನೆಲದಲ್ಲಿದ್ದ ಅಮೆರಿಕ ವಾಯುಪಡೆ ವಿಮಾನಗಳು ಇರಾನ್‌ನ ಯೋಧರು, ಜನ ಪರ್ವತದತ್ತ ಬಾರದಂತೆ ಬಾಂಬ್‌ ದಾಳಿ ನಡೆಸಿದವು. ಮತ್ತೊಂದೆಡೆ ನೌಕಾಪಡೆಯ ‘ಸೀಲ್‌’ ಪಡೆ ಕಮಾಂಡೊಗಳು ಪರ್ವತ ಪ್ರದೇಶದ ಮೇಲೇರಿ, ಸಂಕೀರ್ಣ ಪ್ರದೇಶದಲ್ಲಿದ್ದ ಪೈಲಟ್‌ ಪತ್ತೆ ಮಾಡಿದವು.

ಒಂದು ಕಡೆ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದರೆ ಮತ್ತೊಂದೆಡೆ ಇರಾನಿ ಪಡೆಗಳ ಜತೆ ಅಮೆರಿಕ ಕಮಾಂಡೊ ಪಡೆ ಗುಂಡಿನ ಚಕಮಕಿ ನಡೆಸುವ ಮೂಲಕ ರಕ್ಷಣಾ ಕಾರ್ಯಾಚರಣೆಗೆ ಅಡ್ಡಿಯಾಗದಂತೆ ಎಚ್ಚರ ವಹಿಸಿತು. ಅಂತಿಮವಾಗಿ ಪೈಲಟ್‌ ಅನ್ನು ಹೊತ್ತ ಕಾಪ್ಟರ್‌ ಪರ್ವತ ಪ್ರದೇಶದಿಂದ ನಿರ್ಗಮಿಸುವ ವೇಳೆಗೆ ಅಮೆರಿಕ-ಇರಾನ್‌ ಪಡೆಗಳ ಗುಂಡಿನ ಕದನದಲ್ಲಿ ಐವರು ಮೃತಪಟ್ಟಿದ್ದರು ಎಂದು ವರದಿಯಾಗಿದೆ.

ನಾವು ನಮ್ಮವರನ್ನು ಉಳಿಸಿಕೊಂಡಿದ್ದೇವೆ. ನಮ್ಮ ರಕ್ಷಣಾ ಪಡೆಯ ಅತ್ಯುತ್ತಮ ಸಿಬ್ಬಂದಿಯಲ್ಲಿ ಒಬ್ಬರಾದ ಗೌರವಾನ್ವಿತ ಕರ್ನಲ್‌ಗಾಗಿ ದೇಶದ ಮಿಲಿಟರಿ ಇತಿಹಾಸದಲ್ಲಿ ಅತ್ಯಂತ ಧೈರ್ಯಶಾಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ನಡೆಸಿದೆ. ಪೈಲಟ್‌ ಸಂಪೂರ್ಣವಾಗಿ ಸುರಕ್ಷಿತವಾಗಿದ್ದು, ಸದೃಢರಾಗಿದ್ದಾರೆ ಎಂದಿದ್ದಾರೆ ಡೊನಾಲ್ಡ್‌ ಟ್ರಂಪ್‌ ಅಮೆರಿಕ ಅಧ್ಯಕ್ಷ

ಪೈಲಟ್‌ ರಕ್ಷಣಾ ಕಾರ್ಯಾಚರಣೆ ವೇಳೆ ತನ್ನದೇ ಎರಡು ಸರಕು ಸಾಗಣೆ ವಿಮಾನಗಳನ್ನು ಅಮೆರಿಕ ನಾಶಗೊಳಿಸಿದೆ. ಕಾರ್ಯಾಚರಣೆ ವೇಳೆ ಅಸಮರ್ಪಕವಾಗಿ ಕಾರ್ಯನಿರ್ವಹಿಸಿದ ಹಿನ್ನೆಲೆಯಲ್ಲಿ ವಿಮಾನಗಳನ್ನು ನಾಶಪಡಿಸಲಾಯಿತು. ಶತ್ರು ದೇಶದ ಕೈಗೆ ಯಾವುದೇ ರೀತಿಯ ಕುರುಹು ಸಿಗದಂತೆ ಮಾಡಲು ಸಿ-130ಜೆ ಸರಕು ಸಾಗಣೆ ವಿಮಾನಗಳನ್ನು ನಾಶಪಡಿಸಲಾಗಿದೆ ಎಂದು ಪೆಂಟಗನ್‌ ಹೇಳಿಕೊಂಡಿದೆ.

error: Content is protected !!
Scroll to Top