ಧಾರ್ಮಿಕ, ವೈಜ್ಞಾನಿಕ ಮತ್ತು ಪಾರಂಪರಿಕವಾಗಿ‘ಮಕರ ಸಂಕ್ರಾಂತಿ’ಯ ವಿಶೇಷತೆ

ಪ್ರತಿಯೊಂದು ಜೀವಿಗಳಿಗೂ ಮರುಜನುಮವೆಂಬುವಂತೆ ಹೊಸದಿನವನ್ನು ಪರಿಚಯಿಸಲು ಬೆಳಗು ನೀಡಿ ಎಚ್ಚರಿಸುವ ದಿನಪನು ಪ್ರಕೃತಿದತ್ತವಾಗಿ ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವಂತಹ ಸಂದರ್ಭವನ್ನು “ಮಕರ ಸಂಕ್ರಾಂತಿ”ಎಂದು ಕರೆಯಲಾಗುತ್ತದೆ. ಧಾರ್ಮಿಕವಾಗಿ ಹೇಳುವುದಾದರೆ ಮಕರ ಸಂಕ್ರಾಂತಿಯಂದು ಮುಂಜಾನೆ ತನು, ಮನ, ಮನೆಗಳನ್ನು ಶುಚಿಗೊಳಿಸಿ, ಮನೆ ದೇವರಿಗೆ ಪೂಜೆ ಸಲ್ಲಿಸಿ, ಭೂತ ಚಾವಡಿಯಲ್ಲಿ ದೀಪ ಹಚ್ಚಿ ನಮಸ್ಕರಿಸಿ, ಹಿರಿಯರ ಆಶೀರ್ವಾದ ಪಡೆದು, ದೇವಸ್ಥಾನಕ್ಕೆ ಪೂಜೆಗೆ ಹೋಗಿ ಬರುವುದು ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಂಡುಬರುವ ಪದ್ಧತಿ.

ಅದೇ ರೀತಿ ರಾಗಿ, ಗೋಧಿ, ಜೋಳ ಬೆಳೆಯನ್ನಾಧರಿಸಿರುವವರು ತಾವು ತಯಾರಿಸಿಟ್ಟಿರುವ ಬಣವೆಗಳಿಗೆ ಪೂಜೆ ಸಲ್ಲಿಸಿ ತಮ್ಮ ಜೀವನದ ಮೂಲ “ಕೃಷಿ”ಗೆ ಅಪಾರವಾದ ಗೌರವ ಸಲ್ಲಿಸುತ್ತಾರೆ.

ಇನ್ನು ಕೆಲವು ಪ್ರದೇಶಗಳಲ್ಲಿ ಗೋವು ಪೂಜೆ, ರಾಸುಗಳಿಗೆ ಕಿಚ್ಚು ಹಾಯಿಸುವ ಪದ್ದತಿಯನ್ನು ಸಹ ನಡೆಸಿಕೊಂಡು ಬಂದಿದ್ದಾರೆ. ಕಿಚ್ಚು ಹಾಯಿಸುವುದು ಎಂದರೆ ರೈತರು ತಮ್ಮ ರಾಸುಗಳನ್ನು ಅಲಂಕರಿಸಿ ಬೆಂಕಿಯ ಮೇಲೆ ನುಗ್ಗಿಸುವ ಕ್ರಮ. ಈ ಪರಿಯ ಕ್ರಮವನ್ನು ಆಚರಿಸುವ ರೈತರೊಬ್ಬರಲ್ಲಿ ಖುದ್ದಾಗಿ ವಿಚಾರಿಸಿದಾಗ ಅವರು ಹೇಳಿದ್ದು- “ ನಮ್ಮ ಜಾನುವಾರುಗಳಿಗೆ ದೃಷ್ಟಿಯಾದರೆ ಈ ಕಿಚ್ಚು ದೃಷ್ಟಿ ನಿವಾರಿಸುತ್ತದೆ. ಮಾತ್ರವಲ್ಲ, ಅವುಗಳ ಮೈ ಮೇಲಿನ ಕ್ರಿಮಿ ಕೀಟಗಳು, ರೋಗ ರುಜಿನಗಳು ದೂರವಾಗುತ್ತವೆ. ಆದುದರಿಂದ ಮಕರ ಸಂಕ್ರಮಣದಂದು ನಮಗೆ ಇದೇ ದೊಡ್ಡ ಹಬ್ಬ” ಎಂಬುದಾಗಿ.





















































 
 

ಮತ್ತೊಂದೆಡೆ ಸಂಕ್ರಾತಿ ಎಂದರೆ ಎಳ್ಳು- ಬೆಲ್ಲದ ಪೊಟ್ಟಣಗಳನ್ನು ಜೋಡಿಸಿಕೊಂಡು ರೇಷ್ಮೆ ಲಂಗ-ರವಿಕೆ ತೊಟ್ಟು, ಉದ್ದ ಜಡೆ ತುಂಬಾ ಹೂವು ಮುಡಿದು, ಜುಮ್ಕಿ, ಕೈಬಳೆ , ಕಾಲ್ಗೆಜ್ಜೆ ಧರಿಸಿ ಅತ್ತಿಂದಿತ್ತ ಇತ್ತಿಂದತ್ತ ಓದಾಡುವ ಲಲನೆಯರನ್ನು ಕಂಡಾಗ ಕಣ್ಣಿಗಂತೂ ಹಬ್ಬವೇ ಹಬ್ಬ.

ವೈಜ್ಞಾನಿಕವಾಗಿ ಹೇಳುವುದಾದರೆ, ಎಳ್ಳು- ಬೆಲ್ಲದಲ್ಲಿ ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ, ಕಬ್ಬಿಣ, ತಾಮ್ರ ಮತ್ತು ಸತುವಿನಂತಹ ಖನಿಜಗಳಿವೆ. ಮಾತ್ರವಲ್ಲ, ಇದು ಚಳಿಗಾಲದಲ್ಲಿ ದೇಹದ ಉಷ್ಣತೆಯನ್ನು ಕಾಪಾಡುವುದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಮೂಳೆಗಳನ್ನು ಬಲಪಡಿಸುವಂತಹ ಅದ್ಭುತ ಶಕ್ತಿಯನ್ನು ಹೊಂದಿದೆ.

ಹೀಗೆ ಸಂಕ್ರಾಂತಿ ಹಬ್ಬವನ್ನು ಧಾರ್ಮಿಕ, ವೈಜ್ಞಾನಿಕ ಹಾಗೂ ಪಾರಂಪರಿಕವಾಗಿ ಹಲವು ಕಡೆಗಳಲ್ಲಿ ಹಲವಾರು ರೀತಿಯಲ್ಲಿ ಆಚರಿಸಲಾಗುತ್ತದೆ. ಎಲ್ಲರ ಬಾಳಿಗೂ ಮಕರ ಸಂಕ್ರಾಂತಿ ಒಳಿತನ್ನುಂಟುಮಾಡಲಿ.

ಸಂಕ್ರಾಂತಿ ಹಬ್ಬದ ಶುಭಾಶಯಗಳು.

ಡಾ।। ಶರ್ಮಿಳಾ ನಟರಾಜ್
ನೂಜಿ

error: Content is protected !!
Scroll to Top