ಪುತ್ತೂರು: ಒಕ್ಕಲಿಗ ಸ್ವಸಹಾಯ ಸಂಘಗಳು ಗ್ರಾಮೀಣ ಜನರ ಬದುಕಿನಲ್ಲಿ ಆರ್ಥಿಕ ಸಬಲೀಕರಣಕ್ಕೆ ಬಹು ದೊಡ್ಡ ಕೊಡುಗೆಯನ್ನು ನೀಡಿದೆ. 10 ವರ್ಷಗಳ ಹಿಂದೆ ಆರಂಭವಾಗಿ ಸ್ವಸಹಾಯ ಸಂಘಗಳನ್ನು ಹುಟ್ಟುಹಾಕಿ, ಜನರ ಬದುಕಿಗೆ ಬೆಳಕಾದ ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಇದೀಗ ಸ್ವಂತ ಕಚೇರಿಗೆ ಪಾದಾರ್ಪಣೆ ಮಾಡಿರುವುದು ಅಭಿನಂದನೀಯ ಎಂದ ಶಾಸಕ ಸಂಜೀವ ಮಠಂದೂರು ಹೇಳಿದರು.
ಪುತ್ತೂರು ಒಕ್ಕಲಿಗ ಸ್ವಸಹಾಯ ಟ್ರಸ್ಟ್ನ ನೂತನ ಕಚೇರಿ ಮತ್ತು ವಿವಾಹ ವೇದಿಕೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವಿವಾಹ ವೇದಿಕೆ, ಸಾಮಾಜಿಕ ಚಟುವಟಿಕೆ ಮುಂತಾದ ಕಾರ್ಯಕ್ರಮಗಳೊಂದಿಗೆ ಸ್ವಸಹಾಯ ಟ್ರಸ್ಟ್ ಇನ್ನಷ್ಟು ಅಭಿವೃಧ್ದಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿ. ಆ ಮೂಲಕ ಸಮಾಜದ ಮಂದಿಗೆ ಇನ್ನಷ್ಟು ಕೊಡುಗೆಗಳನ್ನು ನೀಡುವಂತಾಗಲಿ ಎಂದು ಶುಭಹಾರೈಸಿದರು.


ಆದಿಚುಂಚನಗಿರಿ ಸಂಸ್ಥಾನ ಮಂಗಳೂರು ಶಾಖಾ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಆಶೀರ್ವಚನ ನೀಡಿದರು. ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘ ಉಪಾಧ್ಯಕ್ಷ ರೇಣುಕಾ ಪ್ರಸಾದ್ ಕೆ. ವಿ., ತಾಲೂಕು ಒಕ್ಕಲಿಗ ಗೌಡ ಸಂಘದ ಅಧ್ಯಕ್ಷ ವಿಶ್ವನಾಥ ಗೌಡ, ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಸುಳ್ಯ ಅಧ್ಯಕ್ಷ ಪಿ. ಸಿ. ಜಯರಾಮ್, ಪುತ್ತೂರು ಒಕ್ಕಲಿಗ ಸಮುದಾಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಚಿದಾನಂದ ಬೈಲಾಡಿ, ಒಕ್ಕಲಿಗ ಸ್ವಸಹಾಯ ಟ್ರಸ್ಟ್ ಅಧ್ಯಕ್ಷ ಮನೋಹರ್, ಉಪಸ್ಥಿತರಿದ್ದರು. ಒಕ್ಕಲಿಗ ಸ್ವ ಸಹಾಯ ಸಂಘದ ಸ್ಥಾಪಕ ಅಧ್ಯಕ್ಷ ಎ.ವಿ ನಾರಾಯಣ್ ಪ್ರಾಸ್ತಾವಿಕ ಮಾತುಗಳನ್ನಾಡಿದರು.
























