ಕಡಬ : , ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ವ್ಯಕ್ತಿತ್ವ ನಿರ್ಮಾಣ ಮಾಡುವುದರೊಂದಿಗೆ ರಾಷ್ಟ್ರನಿರ್ಮಾಣಕ್ಕೆ ಪ್ರೇರಣೆ ನೀಡುವ ಶಿಕ್ಷಣವನ್ನು ನೀಡಿದಾಗ ಸದೃಢ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ ಎಂದು ಮಂಗಳೂರಿನ ಸಮಾಜಿಕ ಕಾರ್ಯಕರ್ತ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದರು
ಅವರು ಬುಧವಾರ ಕಡಬದ ಕೇವಳ ಹನುಮಾನ್ ನಗರದಲ್ಲಿರುವ ಸರಸ್ವತೀ ವಿದ್ಯಾಲಯದಲ್ಲಿ ಪ್ರಾರಂಭವಾದ ಆಂಗ್ಲ ಮಾಧ್ಯಮ ವಿಭಾಗದ ತರಗತಿಗಳ ಉದ್ಘಾಟನೆ ಹಾಗೂ ಶಾಲಾ ಪ್ರಾರಂಭೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ|ಪ್ರಭಾಕರ ಭಟ್ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಜೊತೆಗೆ ಸಂಸ್ಕಾರ ಕೊಟ್ಟು ಬದುಕುವುದು ಹೇಗೆ ಎಂದು ಅವರಿಗೆ ಕಲಿಸಿಕೊಟ್ಟಾಗ ಆ ಮಕ್ಕಳು ಮುಂದೆ ಜೀವನದಲ್ಲಿ ಜಯಗಳಿಸುತ್ತಾರೆ ಎಂದು ಹೇಳಿದರು
ಆಂಗ್ಲ ಮಾಧ್ಯಮ ತರಗತಿಗಳನ್ನು ಉದ್ಘಾಟಿಸಿದ ಮಂಗಳೂರಿನ ಸಮಾಜಿಕ ಕಾರ್ಯಕರ್ತ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ, ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ವ್ಯಕ್ತಿತ್ವ ನಿರ್ಮಾಣ ಮಾಡುವುದರೊಂದಿಗೆ ರಾಷ್ಟ್ರನಿರ್ಮಾಣಕ್ಕೆ ಪ್ರೇರಣೆ ನೀಡುವ ಶಿಕ್ಷಣವನ್ನು ನೀಡಿದಾಗ ಸದೃಢ ಭಾರತ ನಿರ್ಮಾಣದ ಕನಸು ಸಾಕಾರಗೊಳ್ಳುತ್ತದೆ ಎಂದರು.
ಸರಸ್ವತೀ ವಿದ್ಯಾಲಯದ ಸಂಚಾಲಕ ವೆಂಕಟ್ರಮಣ ರಾವ್ ಮಂಕುಡೆ ಮಾತನಾಡಿ, ಈಗ ಆರು, ಏಳು ಹಾಗೂ ಎಂಟನೇ ತರಗತಿಯ ಆಂಗ್ಲ ಮಾಧ್ಯಮ ತರಗತಿಗಳನ್ನು ಪ್ರಾರಂಭಿಸಿದ್ದೇವೆ ಮುಂದೆ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಹೈಸ್ಕೂಲು ವಿಭಾಗ ಮತ್ತು ಪಿಯುಸಿಯನ್ನು ಮುಂದುವರಿಸಲಾಗುವುದು ಎಂದರು.
ಸಂಸ್ಥೆಯ ಅಧ್ಯಕ್ಷ ರವಿರಾಜ್ ಶೆಟ್ಟಿ ಮಾತನಾಡಿದರು. ವಿವೇಕಾನಂದ ವಿದ್ಯಾವರ್ಧಕ ಸಂಘದ ನಿರ್ದೆಶಕ ಕೃಷ್ಣ ಶೆಟ್ಟಿ ಕಡಬ, ಬೆಟ್ಟಂಪಾಡಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಪ್ರೌಢ ಶಾಲಾ ಮುಖ್ಯಶಿಕ್ಷಕ ರಾಜೇಶ್ ಎನ್ ಅತಿಥಿಗಳಾಗಿ ಭಾಗವಹಿಸಿದ್ದರು. ಸರಸ್ವತೀ ವಿದ್ಯಾಲಯದ ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಶೈಲಶ್ರೀ ರೈ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿಗಳನ್ನು ಡಾ|ಪ್ರಭಾಕರ ಭಟ್ ತಿಲಕವಿಟ್ಟು ಸ್ವಾಗತಿಸಿದರು. ವಿದ್ಯಾರ್ಥಿಗಳು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡಿ ಹೋಮಕುಂಡಕ್ಕೆ ಹವಿಸ್ಸು ಸಮರ್ಪಿಸಿ ತಂದೆ ತಾಯಿಯ ಆಶೀರ್ವಾದ ಪಡೆದು ಶಾಲಾ ಪ್ರಾರಂಭೋತ್ಸವಕ್ಕೆ ಸಂಸ್ಕಾರದ ಮೆರಗು ನೀಡಿದರು. ವೆಂಕಟ್ರಮಣ ರಾವ್ ಮಂಕುಡೆ ಸ್ವಾಗತಿಸಿದರು. ಆಂಗ್ಲ ಮಾಧ್ಯಮ ಶಾಲಾ ಮುಖ್ಯ ಶಿಕ್ಷಕಿ ಭವ್ಯಶ್ರೀ ಕೆ ವಂದಿಸಿದರು. ವಿದ್ಯಾರ್ಥಿನಿ ಪೂರ್ವಿ ಎಸ್ ರೈ ಕಾರ್ಯಕ್ರಮ ನಿರೂಪಿಸಿದರು.