ಪುತ್ತೂರು, ಶಿವಮೊಗ್ಗದಲ್ಲೂ ಕಳ್ಳತನ ಮಾಡಿದ್ದ ಆರೋಪಿ
ಉಡುಪಿ : ಬ್ರಹ್ಮಾವರ ಮತ್ತು ಕೋಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಮನೆಗಳೀಗೆ ನುಗ್ಗಿ ಕಳ್ಳತನ ಮಾಡುತ್ತಿದ್ದ ಕುಖ್ಯಾತ ಕಳ್ಳನನ್ನು ಕೊನೆಗೂ ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಾಡೂರು ತಂತ್ರಾಡಿ ನಿವಾಸಿ ವಿಜಯ್ ಕುಮಾರ್ ಶೆಟ್ಟಿ (28) ಎಂದು ಗುರುತಿಸಲಾಗಿದೆ.
ಬ್ರಹ್ಮಾವರ ವೃತ್ತದ ಬ್ರಹ್ಮಾವರ ಹಾಗೂ ಕೋಟ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ಹಲವು ಮನೆಗಳಲ್ಲಿ ಕಳ್ಳತನ ನಡೆದು ಜನರು ಆತಂಕದಲ್ಲಿದ್ದರು. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಎಚ್. ಆದೇಶದಂತೆ ತನಿಖೆಗೆ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ಮನೆ ಕಳ್ಳತನ ಪ್ರಕರಣದ ಆರೋಪಿಗಳು, ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನದ ಮೇಲೆ ನಿಗಾವಹಿಸಿತ್ತು.
ಡಿ.19 ರಂದು ಸಂಜೆ ನೀಲಾವರ ಕ್ರಾಸ್ ಬಳಿ ಠಾಣೆಯ ಕಳ್ಳತನ ಪ್ರಕರಣದ ಹಳೇ ಆರೋಪಿ ವಿಜಯ ಕುಮಾರ್ ಶೆಟ್ಟಿಯನ್ನು ತಡೆದು ಆತನ ಸ್ಕೂಟರನ್ನು ಪರಿಶೀಲಿಸಿದಾಗ ಕಳ್ಳತನ ನಡೆಸಲು ಬೇಕಾದ ಸಲಕರಣೆಗಳು ಅದರಲ್ಲಿದ್ದವು. ಹೆಚ್ಚಿನ ವಿಚಾರಣೆ ನಡೆಸಿದಾಗ ಆತ ಬ್ರಹ್ಮಾವರ ಮತ್ತು ಕೋಟ ಠಾಣಾ ವ್ಯಾಪ್ತಿಯ ಃಲವು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.
2022ರ ಮಾರ್ಚ್ ಮತ್ತು ಎಪ್ರೀಲ್ ತಿಂಗಳ ಮಧ್ಯಾವಧಿಯಲ್ಲಿ ಕಾಡೂರು ಗ್ರಾಮದ ತಂತ್ರಾಡಿ ಸದಾಶಿವ ಮಹಾಬಲೇಶ್ವರ ರಾವ್ ರವರ ಹಳೇ ಮನೆಯ ಬಾಗಿಲಿನ ಚಿಲಕ ಮುರಿದು ಒಳ ಪ್ರವೇಶಿಸಿ ಸುಮಾರು 280 ಕೆಜಿ ತೂಕದ 1,40,000 ರೂ.ಮೌಲ್ಯದ ಏಳು ಮೂಟೆ ಕಾಳು ಮೆಣಸುಗಳನ್ನು ಕದ್ದಿದ್ದ. 2022ರ ಜುಲಾಯಿ ತಿಂಗಳಲ್ಲಿ ರಾತ್ರಿ ನಡೂರು ಗ್ರಾಮದ ನಡೂರು ಪಟೇಲ್ ಶ್ರೀ ಅಂತಯ್ಯ ಶೆಟ್ಟಿ ಸ್ಮಾರಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಬೀಗ ಮುರಿದು ಗ್ಯಾಸ್ ಸಿಲಿಂಡರ್ ಕಳವು ಮಾಡಿದ್ದ.
2022ರ ಜುಲಾಯಿ ತಿಂಗಳಲ್ಲಿ ಯಡ್ತಾಡಿ ಗ್ರಾಮದ ದಾಲಾಡಿಯಲ್ಲಿರುವ ವಾಣಿ ಭಂಡಾರಿ ಎಂಬವರ ಮನೆಯಲ್ಲಿ ರಾತ್ರಿ ಸಮಯ ಲೈಟ್ ಇಲ್ಲದೇ ಇದ್ದುದನ್ನು ಗಮನಿಸಿ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿ 5,04,000 ರೂ. ಮೌಲ್ಯದ ಚಿನ್ನಾಭರಣ ಹಾಗೂ 15000 ರೂ. ನಗದನ್ನು ಕಳ್ಳತನ ಸೇರಿದಂತೆ ಹಲವು ಕಳ್ಳತನಗಳನ್ನು ನಡೆಸಿದ್ದ. ಆರೋಪಿಯ ಬಂಧನದಿಂದ ಬ್ರಹ್ಮಾವರ ಪೊಲೀಸ್ ಠಾಣಾ 4 ಕಳ್ಳತನ ಪ್ರಕರಣಗಳು ಹಾಗೂ ಕೋಟಾ ಪೊಲೀಸ್ ಠಾಣಾ 1 ಪ್ರಕರಣ ನಡೆಸಿರುವುದು ಪತ್ತೆಯಾಗಿದೆ.
ವಿಜಯ ಕುಮಾರ್ ಶೆಟ್ಟಿಯ ಮೇಲೆ ಈ ಹಿಂದೆ ದ.ಕ ಜಿಲ್ಲೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಮಂಗಳೂರು ಬಂದರು ಪೊಲೀಸ್ ಠಾಣೆಯಲ್ಲಿ 4 ಪ್ರಕರಣ, ಚಿಕ್ಕಮಂಗಳೂರು ಜಿಲ್ಲೆ ಎನ್.ಆರ್. ಪುರ ಠಾಣೆಯಲ್ಲಿ 1 ಪ್ರಕರಣ, ಹರಿಹರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಶಿವಮೊಗ್ಗ ಜಿಲ್ಲೆ ಆಗುಂಬೆ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ತುಂಗಾ ನಗರ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಹಾಗೂ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ದಾಖಲಾಗಿದೆ.