ಸಚಿವ ಸಂಪುಟಕ್ಕೆ ಡಾ.ಯತೀಂದ್ರ ಸೇರ್ಪಡೆಗೆ ಒಪ್ಪದ ಸಿಎಂ
ನವದೆಹಲಿ: ಸಿದ್ದರಾಮಯ್ಯನವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಪಡೆದು ಇದಕ್ಕೆ ಪ್ರಾಯಶ್ಚಿತ್ತವಾಗಿ ಅವರ ಪುತ್ರ ಎಂಎಲ್‌ಸಿ ಡಾ.ಯತೀಂದ್ರ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು, ತೀರಾ ಒತ್ತಡ ಬಿದ್ದರೆ ಅವರನ್ನು ಉಪಮುಖ್ಯಮಂತ್ರಿಯೂ ಮಾಡಿಬಿಡುವುದು ಎಂಬ ಲೆಕ್ಕಾಚಾರವನ್ನು ಕಾಂಗ್ರೆಸ್ ಹೈಕಮಾಂಡ್ ಹಾಕಿತ್ತು. ಆದರೆ ಸಿದ್ದರಾಮಯ್ಯ ಹೈಕಮಾಂಡ್‌ನ ಈ ಪ್ರಸ್ತಾಪವನ್ನು ಸಾರಾಸಗಟು ತಿರಸ್ಕರಿಸಿದ್ದಾರೆ. ಹೀಗಾಗಿ ಹೈಕಮಾಂಡ್ ಮತ್ತೊಂದು ಸಂಕಷ್ಟದಲ್ಲಿ ಸಿಲುಕಿದೆ ಎಂದು ಮೂಲವೊಂದು ತಿಳಿಸಿದೆ.
ಒಬಿಸಿ ಸಮುದಾಯದ ಪ್ರಮುಖ ನಾಯಕನಾಗಿರುವ ಕಾರಣ ಸಿದ್ದರಾಮಯ್ಯನವರನ್ನು ರಾಷ್ಟ್ರ ರಾಜಕಾರಣಕ್ಕೆ ಬರುವಂತೆ ಹೈಕಮಾಂಡ್ ಆಹ್ವಾನಿಸಿತ್ತು. ಆದರೆ ಹೈಕಮಾಂಡ್ ನೀಡಿದ ಆಫರ್ ಅನ್ನು ಸಿಎಂ ಸಿದ್ದರಾಮಯ್ಯ ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. ಯಾವುದೇ ಕಾರಣಕ್ಕೂ ನಾನು ರಾಜ್ಯಸಭೆಗೆ ಹೋಗುವುದಿಲ್ಲ. ಏನಿದ್ದರೂ ನಾನು ಕರ್ನಾಟಕ ರಾಜ್ಯದಲ್ಲೇ ಉಳಿದು ರಾಜಕಾರಣ ಮಾಡುತ್ತೇನೆ ಎಂದು ಪಟ್ಟು ಹಿಡಿದಿದ್ದಾರೆ. ಅಷ್ಟೇ ಅಲ್ಲದೆ ಅನಿವಾರ್ಯವಾದರೆ ಮುಖ್ಯಮಂತ್ರಿ ಸ್ಥಾನದ ಜೊತೆಗೆ ಎಲ್ಲಾ ರೀತಿಯ ಅಧಿಕಾರಗಳನ್ನು ತ್ಯಾಗ ಮಾಡಲು ಸಿದ್ಧ ಎಂದು ಹೇಳುವ ಮೂಲಕ ಹೈಕಮಾಂಡ್ ನಾಯಕರ ನಿಲುವಿಗೆ ಸಡ್ಡು ಹೊಡೆದಿದ್ದಾರೆ.
ಜೊತೆಗೆ ಪುತ್ರ, ವಿಧಾನ ಪರಿಷತ್ ಸದಸ್ಯ ಡಾ.ಯತೀಂದ್ರ ಅವರಿಗೆ ಯಾವುದೇ ರೀತಿಯ ಸಚಿವ ಸ್ಥಾನ ಸೇರಿದಂತೆ ಯಾವುದೇ ಅಧಿಕಾರ ಹಾಗೂ ಸ್ಥಾನಮಾನಗಳು ಬೇಡ ಎಂದು ಹಠ ಹಿಡಿದಿದ್ದಾರೆ. ಹೈಕಮಾಂಡ್ ಡಾ. ಯತೀಂದ್ರ ಅವರಿಗೆ ಅವರು ಕೇಳಿದ ಪ್ರಮುಖ ಖಾತೆಯೊಂದಿಗೆ ಸಚಿವ ಸ್ಥಾನ ನೀಡುವ ಭರವಸೆಯನ್ನು ನೀಡಿತ್ತು. ಒಂದು ವೇಳೆ ಯತೀಂದ್ರ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ ರಾಜಕೀಯವಾಗಿ ಬೇರೆ ರೀತಿಯ ತಪ್ಪು ಸಂದೇಶ ರವಾನೆಯಾಗುತ್ತದೆ ಎಂಬುದು ಹೈಕಮಾಂಡ್ ಲೆಕ್ಕಾಚಾರವಾಗಿತ್ತು. ಆದರೆ ಸಿದ್ದರಾಮಯ್ಯ ಪುತ್ರನಿಗೆ ಸದ್ಯಕ್ಕೆ ಯಾವುದೇ ಸ್ಥಾನಮಾನ ನೀಡುವುದು ಬೇಡ ಎಂಬ ಕಠಿಣ ನಿಲುವು ತಳೆದಿದ್ದಾರೆ.
ಡಾ. ಯತೀಂದ್ರ ಅವರು ಸಚಿವರಾಗಲೇಬೇಕು ಎಂಬುದು ಹೈಕಮಾಂಡ್ ಇಚ್ಛೆಯಾಗಿದ್ದು, ಈ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸುವಂತೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಸಚಿವ ಕೆ.ಜೆ. ಜಾರ್ಜ್ ಅವರಿಗೆ ಈಗ ಮಹತ್ವದ ಟಾಸ್ಕ್ ನೀಡಿದ್ದಾರೆ. ರಾಹುಲ್ ಗಾಂಧಿ ಸೂಚನೆಯ ಮೇರೆಗೆ ಸಚಿವ ಕೆ.ಜೆ.ಜಾರ್ಜ್ ಶತಾಯಗತಾಯ ಸಿಎಂ ಸಿದ್ದರಾಮಯ್ಯ ಅವರ ಮನವೊಲಿಸಲು ತೀವ್ರ ಕಸರತ್ತು ನಡೆಸುತ್ತಿದ್ದಾರೆ. ಆದರೆ ಜಾರ್ಜ್ ಅವರ ಎಲ್ಲ ಸಂಧಾನ ಸೂತ್ರಗಳಿಗೂ ಬಿಲ್‌ಕುಲ್ ಆಗಲ್ಲ ಎಂದು ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದು ಕುಳಿತಿದ್ದಾರೆ. ಸಿಎಂ ಅವರ ಈ ದಿಢೀರ್ ಕಠಿಣ ನಿಲುವು ಈಗ ಹೈಕಮಾಂಡ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
























