ಮಧ್ಯರಾತ್ರಿ ಸಿಎಂ ನಿವಾಸದಲ್ಲಿ ಸಿದ್ದರಾಮಯ್ಯ ಆಪ್ತರ ಸಭೆ

ಕ್ಷಣಕ್ಷಣಕ್ಕೆ ಕುತೂಹಲ ಕೆರಳಿಸುತ್ತಿರುವ ರಾಜಕೀಯ ವಿದ್ಯಮಾನ

ಬೆಂಗಳೂರು: ದೆಹಲಿಯಿಂದ ವಿಶೇಷ ವಿಮಾನದಲ್ಲಿ ನಿನ್ನೆ ರಾತ್ರಿ ವಾಪಸ್ ಆದ ಬೆನ್ನಲ್ಲೇ ಮುಖ್ಯಮಂತ್ರಿಗಳ ಸರ್ಕಾರಿ ನಿವಾಸ ‘ಕಾವೇರಿ’ಯಲ್ಲಿ ತಡರಾತ್ರಿ ಸಣ್ಣ ಸಭೆ ನಡೆದಿದೆ. ಮಧ್ಯರಾತ್ರಿ 12 ಗಂಟೆಗೆ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಸಿದ್ದರಾಮಯ್ಯನವರನ್ನು ಸಚಿವರಾದ ಕೃಷ್ಣಬೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಬರಮಾಡಿಕೊಂಡರು. ನಂತರ ಮುಖ್ಯಮಂತ್ರಿಗಳ ಕಾರಿನಲ್ಲೇ ಸಚಿವ ಜಮೀರ್ ಅಹಮದ್ ಖಾನ್ ಮತ್ತು ಶಾಸಕ ಪೊನ್ನಣ್ಣ ಅವರು ಸಿಎಂ ನಿವಾಸಕ್ಕೆ ಆಗಮಿಸಿದರು.

ಸಿಎಂ ಮನೆಗೆ ಬಂದ ನಂತರ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಂ.ಬಿ.ಪಾಟೀಲ್, ಬೈರತಿ ಸುರೇಶ್, ಡಾ.ಎಂ.ಸಿ. ಸುಧಾಕರ್, ಶಾಸಕರಾದ ಅಶೋಕ್ ಪಟ್ಟಣ್ ಹಾಗೂ ರಿಜ್ವಾನ್ ಅರ್ಷದ್ ಸೇರಿದಂತೆ ಹಲವು ಪ್ರಮುಖ ನಾಯಕರು ಆಗಮಿಸಿ ಸಿಎಂ ಜೊತೆ ಕಾವೇರಿ ನಿವಾಸದಲ್ಲಿ ಮಾತುಕತೆ ನಡೆಸಿದರು. ತಡರಾತ್ರಿ ನಡೆದ ಈ ಸಭೆಯ ಬಳಿಕ ನಾಯಕರು ಸಿಎಂ ನಿವಾಸದಿಂದ ನಿರ್ಗಮಿಸಿದರು.





















































 
 

ಹೈಕಮಾಂಡ್ ನಾಯಕರ ಜೊತೆ ದೆಹಲಿಯಲ್ಲಿ ನಡೆದ ಮಾತುಕತೆ ಹಾಗೂ ಅಲ್ಲಿನ ಪ್ರಮುಖ ಬೆಳವಣಿಗೆಗಳ ಕುರಿತು ಸಿದ್ದರಾಮಯ್ಯ ಅವರು ತಮ್ಮ ಆಪ್ತ ಸಚಿವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ ಎನ್ನಲಾಗಿದೆ. ಸಿಎಂ ರಾಜೀನಾಮೆ ವಿಚಾರಕ್ಕೆ ಸಂಬಂಧಿಸಿದಂತೆ ಆಪ್ತ ವಲಯದಲ್ಲಿ ಆತಂಕ ಮನೆಮಾಡಿದ್ದು, ತಮ್ಮ ಮುಂದಿನ ರಾಜಕೀಯ ಭವಿಷ್ಯ ಹಾಗೂ ಮುಂದಿನ ಕಾನೂನಾತ್ಮಕ ಅಥವಾ ರಾಜಕೀಯ ನಡೆಗಳ ಕುರಿತು ಚರ್ಚಿಸಲು ಇಂದು ಕೂಡ ಆಪ್ತ ಸಚಿವರಿಗೆ ಬರುವಂತೆ ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಇಂದಿನ ಸಭೆಯೂ ತೀವ್ರ ಮಹತ್ವ ಪಡೆದುಕೊಂಡಿದೆ.

ಈ ಎಲ್ಲ ರಾಜಕೀಯ ಬಿಕ್ಕಟ್ಟಿನ ನಡುವೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಎರಡು ಅಧಿಕೃತ ಕಾರ್ಯಕ್ರಮಗಳು ನಿಗದಿಯಾಗಿವೆ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಪುಣ್ಯಸ್ಮರಣೆ ಅಂಗವಾಗಿ ಕೆಪಿಸಿಸಿ ಕಚೇರಿ ಹಾಗೂ ವಿಧಾನಸೌಧದಲ್ಲಿರುವ ನೆಹರು ಪ್ರತಿಮೆಗೆ ಗೌರವ ಸಲ್ಲಿಸುವ ಕಾರ್ಯಕ್ರಮಗಳು ನಿಗದಿಯಾಗಿವೆ.

error: Content is protected !!
Scroll to Top