ಪುತ್ತೂರು: ಅಕ್ರಮ ಸಕ್ರಮ ಫಲಾನುಭವಿಗಳಿಂದ ಮಾಜಿ ಶಾಸಕರೊಬ್ಬರು ಲಂಚ ಪಡೆದಿದ್ದಾರೆ ಎನ್ನುವ ಶಾಸಕ ಅಶೋಕ್ ರೈ ಅವರ ಆರೋಪಕ್ಕೆ ಮಾಜಿ ಶಾಸಕ ಸಂಜೀವ ಮಠಂದೂರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದಾರೆ.
ಮಾಜಿ ಶಾಸಕರೊಬ್ಬರು 45 ಜನರಿಂದ ತಲಾ 2 ಲಕ್ಷ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಶಾಸಕರು ಹಾಗೂ ಅಧ್ಯಾಪಕರೊಬ್ಬರ ಪುತ್ರ ಹೇಳಿಕೆ ನೀಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಶಾಸಕರು ಆ ಮಾಜಿ ಶಾಸಕ ಯಾರು ಮತ್ತು ಲಂಚ ನೀಡಿದ ಆ 45 ಜನರು ಯಾರು ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲೆಸೆದಿದ್ದಾರೆ.
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಒಂದು ವೇಳೆ ಈ ಆರೋಪ ನನ್ನ ವಿರುದ್ಧವೇ ಆಗಿದ್ದಲ್ಲಿ ಲಂಚ ನೀಡಿದ್ದಾರೆನ್ನಲಾದ ಆ 45 ಜನರನ್ನು ಒಂದೆಡೆ ಸೇರಿಸಲಿ. ಅಂದಿನ ಅಕ್ರಮ-ಸಕ್ರಮ ಸಮಿತಿಯ ಮೂವರು ಸದಸ್ಯರು ಹಾಗೂ ನಾನು ಅಲ್ಲಿಗೆ ಬರುತ್ತೇವೆ. ಅವರು ಯಾರಿಗೆ ಹಣ ಕೊಟ್ಟಿದ್ದಾರೆ ಎಂಬ ಸತ್ಯವನ್ನು ಅಲ್ಲಿಯೇ ಹೇಳಲಿ. ಒಂದು ವೇಳೆ ಆ ಜನರ ಗೌರವಕ್ಕೆ ತೊಂದರೆಯಾಗುತ್ತದೆ ಎಂದಾದರೆ, ಯಾವುದಾದರೂ ಒಂದು ಕೊಠಡಿಗೆ ಅವರನ್ನು ಕರೆದುಕೊಂಡು ಬರಲಿ, ನಾವು ಮುಖಾಮುಖಿಯಾಗಲು ಸಿದ್ಧರಿದ್ದೇವೆ. ಇಂತಹ ಆರೋಪಗಳನ್ನು ಸಾಬೀತುಪಡಿಸಿದರೆ ಶಾಸಕರ ದಿಟ್ಟತನವನ್ನು ಬಿಜೆಪಿ ಖಂಡಿತಾ ಗೌರವಿಸುತ್ತದೆ ಎಂದು ತಿರುಗೇಟು ನೀಡಿದ್ದಾರೆ.
ತಮ್ಮ ಅವಧಿಯಲ್ಲಿ ನಡೆದ ಅಕ್ರಮ-ಸಕ್ರಮ, 94 ಸಿ ಮತ್ತು 94 ಸಿಸಿ ಯೋಜನೆಗಳ ಅಂಕಿಅಂಶಗಳನ್ನು ನೀಡಿದ ಅವರು, ರಾಜಕೀಯ ಲಾಭಕ್ಕಾಗಿ ಗಾಳಿಯಲ್ಲಿ ಗುಂಡು ಹಾರಿಸುವ ಕೆಲಸ ಮಾಡದಂತೆ ಎಂದು ಶಾಸಕ ಅಶೋಕ್ ರೈ ಗೆಎಚ್ಚರಿಕೆ ನೀಡಿದ್ದಾರೆ. ಕೇವಲ ಆರೋಪ ಮಾಡುವುದಕ್ಕಿಂತ ಅದನ್ನು ದಾಖಲೆ ಸಮೇತ ಸಾಬೀತುಪಡಿಸುವುದು ಶಾಸಕರಿಗೆ ಶೋಭೆ ತರುತ್ತದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
























