ಮಂಗಳೂರು : ಬೈಕ್ಗೆ ಲಾರಿ ಡಿಕ್ಕಿ ಹೊಡೆದು ಓರ್ವ ಸ್ಥಳದಲ್ಲೇ ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಮುಕ್ಕ ಚೆಕ್ಪೋಸ್ಟ್ ಖಂಡಿಗೆ ಕ್ರಾಸ್ ಬಳಿ ಭಾನುವಾರ ಸಂಜೆ ಸಂಭವಿಸಿದೆ. ಮೃತರನ್ನು ಬಾಗಲಕೋಟೆ ನಿವಾಸಿ ಭೀಮಾ ಎಂದು ಗುರುತಿಸಲಾಗಿದೆ. ಆತನ ಸಹಚರರಿಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಭೀಮಾ ಮತ್ತು ಆತನ ಇಬ್ಬರು ಸಹಚರರು ಕೆಲಸ ಮುಗಿಸಿಕೊಂಡು ಒಂದೇ ಬೈಕ್ನಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸುರತ್ಕಲ್ ಕಡೆ ತೆರಳುತ್ತಿದ್ದ ವೇಳೆ ಭಾರಿ ಲೋಡ್ ತುಂಬಿದ್ದ ಲಾರಿಯನ್ನು ಎಡಭಾಗದಿಂದ ಓವರ್ ಟೇಕ್ ಮಾಡಲು ಯತ್ನಿಸಿದ ವೇಳೆ ಹಿಂಬದಿ ಸವಾರನಾಗಿ ಸವಾರಿ ಮಾಡುತ್ತಿದ್ದ ಭೀಮಾ ಅವರಿಗೆ ಲಾರಿಗೆ ತಾಗಿ ಅವರು ರಸ್ತೆಗೆ ಎಸೆಯಲ್ಪಟ್ಟಿದ್ದು, ಅವರ ತಲೆಯ ಮೇಲಿಂದ ಲಾರಿಯ ಹಿಂಬದಿ ಚಕ್ರಗಳು ಚಲಿಸಿ ಅವರು ಸ್ಥಳದಲ್ಲೇ ಮೃತಪಟ್ಟರೆಂದು ತಿಳಿದು ಬಂದಿದೆ.
ಬೈಕ್ನಲ್ಲಿದ್ದ ಓರ್ವನ ಕಾಲು ಮುರಿತಕ್ಕೊಳಗಾಗಿದ್ದು ಮತ್ತೋರ್ವನಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
























