ಟ್ರಂಪ್‌ ಪುತ್ರಿಯ ಹತ್ಯೆಗೆ ಸಂಚು : ಇರಾನ್‌ನ ಉಗ್ರ ಸೆರೆ

ಇರಾನ್‌ ಕಮಾಂಡರ್ ಖಾಸೆಮ್ ಸುಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಲು ಹೊಂಚು ಹಾಕಿದ್ದ ಉಗ್ರ

ವಾಷಿಂಗ್ಟನ್‌: ಇರಾನ್‌ನ ಪ್ರಭಾವಿ ಕಮಾಂಡರ್ ಖಾಸೆಮ್ ಸುಲೈಮಾನಿ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ಉದ್ದೇಶದಿಂದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಇವಾಂಕಾ ಟ್ರಂಪ್ ಅವರನ್ನು ಹತ್ಯೆ ಮಾಡಲು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನಿಂದ ತರಬೇತಿ ಪಡೆದ ಉಗ್ರನೊಬ್ಬನನ್ನು ಬಂಧಿಸಲಾಗಿದೆ.

ಈ ಹತ್ಯಾ ಸಂಚಿಗೆ ಸಂಬಂಧಿಸಿದಂತೆ ಮೊಹಮ್ಮದ್ ಬಾಕರ್ ಸಾದ್ ದಾವೂದ್ ಅಲ್-ಸಾದಿ (32) ಎಂಬ ಶಂಕಿತ ಉಗ್ರನನ್ನು ಇತ್ತೀಚೆಗೆ ಬಂಧಿಸಲಾಗಿದ್ದು, ಆತನ ಬಳಿ ಇವಾಂಕಾ ಟ್ರಂಪ್ ಅವರ ಫ್ಲೋರಿಡಾ ನಿವಾಸದ ಬ್ಲೂಪ್ರಿಂಟ್ (ನಕ್ಷೆ) ಪತ್ತೆಯಾಗಿದೆ ಎಂದು ತಿಳಿದುಬಂದಿದೆ.





















































 
 

ಆರು ವರ್ಷಗಳ ಹಿಂದೆ ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಬಾಗ್ದಾದ್‌ನಲ್ಲಿ ನಡೆಸಿದ ಡ್ರೋನ್ ದಾಳಿಯಲ್ಲಿ ಇರಾನ್‌ನ ಗಣ್ಯ ಕುಡ್ಸ್ ಫೋರ್ಸ್‌ನ ಕಮಾಂಡರ್ ಆಗಿದ್ದ ಖಾಸೆಮ್ ಸುಲೈಮಾನಿ ಹತನಾಗಿದ್ದ. ಇರಾಕ್ ಮೂಲದ ಉಗ್ರ ಅಲ್-ಸಾದಿ ಈ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಲು ಹೊಂಚು ಹಾಕುತ್ತಿದ್ದ ಎನ್ನಲಾಗಿದೆ.

ಅಲ್-ಸಾದಿ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ಎಕ್ಸ್ (X) ನಲ್ಲಿ ಫ್ಲೋರಿಡಾದಲ್ಲಿ ಇವಾಂಕಾ ಟ್ರಂಪ್ ಮತ್ತು ಅವರ ಪತಿ ಜ್ಯಾರೆಡ್ ಕುಶ್ನರ್ ಒಡೆತನದ 24 ಮಿಲಿಯನ್ ಡಾಲರ್‌ ಮೌಲ್ಯದ ಐಷಾರಾಮಿ ನಿವಾಸವಿರುವ ಪ್ರದೇಶದ ನಕ್ಷೆಯನ್ನು ಹಂಚಿಕೊಂಡಿದ್ದನು. ಅದರೊಂದಿಗೆ ಅರೇಬಿಕ್ ಭಾಷೆಯಲ್ಲಿ ಅಮೆರಿಕನ್ನರಿಗೆ ಎಚ್ಚರಿಕೆ ನೀಡುವಂತಹ ಚಳಿ ಮೂಡಿಸುವ ಸಂದೇಶವನ್ನೂ ಬರೆದುಕೊಂಡಿದ್ದನು. “ನಾನು ನಿಮಗೆ ಹೇಳಿದ್ದೆ, ನಮ್ಮ ಪ್ರತೀಕಾರ ಕೇವಲ ಸಮಯದ ಆಟವಷ್ಟೇ” ಎಂದು ಆ ಸಂದೇಶದಲ್ಲಿ ಉಲ್ಲೇಖಿಸಲಾಗಿತ್ತು.

ಮೇ 15ರಂದು ಟರ್ಕಿಯಲ್ಲಿ ಅಲ್-ಸಾದಿಯನ್ನು ಬಂಧಿಸಲಾಗಿದ್ದು, ತದನಂತರ ಆತನನ್ನು ಅಮೆರಿಕಕ್ಕೆ ಹಸ್ತಾಂತರಿಸಲಾಗಿದೆ. ಯುರೋಪ್ ಮತ್ತು ಅಮೆರಿಕದಾದ್ಯಂತ ಕನಿಷ್ಠ 18 ವಿಧ್ವಂಸಕ ದಾಳಿಗಳು ಹಾಗೂ ದಾಳಿಗೆ ಯತ್ನಿಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಮೆರಿಕದ ಕಾನೂನು ಇಲಾಖೆ ಆತನ ವಿರುದ್ಧ ಕಠಿಣ ಪ್ರಕರಣಗಳನ್ನು ದಾಖಲಿಸಿದೆ.

ಅಮೆರಿಕ ಮತ್ತು ಯಹೂದಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ನಡೆದ ಹಲವು ದಾಳಿಗಳಲ್ಲಿ ಈತ ಭಾಗಿಯಾಗಿದ್ದ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ. ಮಾರ್ಚ್‌ನಲ್ಲಿ ಆಮ್‌ಸ್ಟರ್‌ಡ್ಯಾಮ್‌ನಲ್ಲಿ ನಡೆದ ಬ್ಯಾಂಕ್ ಆಫ್ ನ್ಯೂಯಾರ್ಕ್ ಮೆಲನ್ ಕಟ್ಟಡದ ಮೇಲಿನ ಬಾಂಬ್ ದಾಳಿ, ಏಪ್ರಿಲ್‌ನಲ್ಲಿ ಲಂಡನ್‌ನಲ್ಲಿ ಇಬ್ಬರು ಯಹೂದಿಗಳ ಮೇಲಿನ ಚಾಕು ಇರಿತ ಹಾಗೂ ಟೊರೊಂಟೊದಲ್ಲಿರುವ ಅಮೆರಿಕ ರಾಯಭಾರ ಕಚೇರಿ ಬಳಿ ನಡೆದ ಗುಂಡಿನ ದಾಳಿಯಲ್ಲೂ ಈತನ ಕೈವಾಡವಿತ್ತು ಎನ್ನಲಾಗಿದೆ. ಅಲ್ಲದೆ ಬೆಲ್ಜಿಯಂ ಮತ್ತು ರೊಟರ್‌ಡ್ಯಾಮ್‌ನ ಯಹೂದಿ ಪ್ರಾರ್ಥನಾ ಮಂದಿರಗಳ ಮೇಲಿನ ದಾಳಿಗೂ ಈತ ಸಂಚು ರೂಪಿಸಿದ್ದನು.

error: Content is protected !!
Scroll to Top